Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ

12:51 AM Sep 28, 2021 | Team Udayavani |

ಮಂಗಳೂರು: ಅಭಿವೃದ್ಧಿಗೆ ಪೂರಕವಾದ ವಿಪುಲ ಅವಕಾಶಗಳ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆ ಪ್ರವಾಸೋದ್ಯಮದಲ್ಲಿ ನಿರೀಕ್ಷಿತ ಅಭಿವೃದ್ಧಿ
ಕಂಡಿಲ್ಲ. ಈ ಹಿನ್ನೆಲೆಯಲ್ಲಿ ಸ್ಪಷ್ಟ ಗುರಿಗಳನ್ನು ಒಳಗೊಂಡ ಪೂರಕ ಯೋಜನೆಗಳನ್ನು ರೂಪಿಸಲು ಕ್ರಮ ಕೈಗೊಳ್ಳಲಾ ಗುವುದು ಎಂದು ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಅಂಗಾರ ಹೇಳಿದರು.

Advertisement

ನಗರದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಹಾಗೂ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಪ್ರವಾ ಸೋದ್ಯಮ ಅಭಿವೃದ್ಧಿಗೆ ಪೂರಕವಾಗಿ ಸರಕಾರದ ಕೆಲವೊಂದು ನೀತಿಗಳನ್ನು ಸರಳಗೊಳಿಸುವ ಕಾರ್ಯವೂ ಆಡಳಿತ ವರ್ಗದಿಂದ ಆಗಬೇಕಾಗಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಕರ್ನಾಟಕ 320 ಕಿ.ಮೀ. ಉದ್ದದ ಕರಾವಳಿಯನ್ನು ಹೊಂದಿದ್ದರೂ ಕೇರಳ ಹಾಗೂ ಗೋವಾ ರಾಜ್ಯಗಳಂತೆ ಪ್ರವಾಸೋದ್ಯಮದಲ್ಲಿ ಬೆಳವಣಿಗೆ ಕಂಡಿಲ್ಲ. ದೂರದೃಷ್ಟಿಯುಳ್ಳ ಯೋಜನೆ, ಅನುಷ್ಠಾನದಲ್ಲಿ ಇಚ್ಛಾಶಕ್ತಿ, ಧನಾತ್ಮಕ ಚಿಂತನೆಯೊಂದಿಗೆ ಅಧಿಕಾರಿಗಳು ಯೋಜನೆಗಳನ್ನು ರೂಪಿಸಿ ಕಾರ್ಯೋನ್ಮುಖವಾಗುವುದು ಪ್ರವಾಸೋದ್ಯಮ ಅಭಿವೃದ್ಧಿಯ ನಿಟ್ಟಿನಲ್ಲಿ ಅವಶ್ಯ ಎಂದು ಅಭಿಪ್ರಾಯಪಟ್ಟರು.

ಮುಡಾ ಅಧ್ಯಕ್ಷ ರವಿಶಂಕರ ಮಿಜಾರು ಮಾತನಾಡಿ, ದ.ಕ. ಜಿಲ್ಲೆಯಲ್ಲಿನ ಪ್ರವಾ ಸೋದ್ಯಮಕ್ಕೆ ಪೂರಕ ಅವಕಾಶಗಳನ್ನು ಜಗತ್ತಿಗೆ ತೆರೆದಿಡುವ ನಿಟ್ಟಿನಲ್ಲಿ ಹೂಡಿಕೆದಾರರ ಸಮಾವೇಶವನ್ನು ಆಯೋಜಿಸುವುದು ಅವಶ್ಯ ಎಂದರು.

ಇದನ್ನೂ ಓದಿ:ಎರಡು ಗುಂಪುಗಳ ಗಲಾಟೆಯಲ್ಲಿ ʼಬಸವʼ ಬಡವಾಯ್ತು

Advertisement

ಅಧ್ಯಕ್ಷತೆ ವಹಿಸಿದ್ದ ಶಾಸಕ ವೇದವ್ಯಾಸ ಕಾಮತ್‌, ಮಂಗಳೂರಿನಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ರೂಪಿಸಿದ್ದು, ಅನು ಷ್ಠಾನ ಪ್ರಕ್ರಿಯೆ ನಡೆಯುತ್ತಿದೆ ಎಂದರು.

ಜಿಲ್ಲಾಧಿಕಾರಿ ಡಾ| ಕೆ.ವಿ. ರಾಜೇಂದ್ರ ಪ್ರಸ್ತಾವನೆಗೈದು, ಕಾರ್ಯಾಗಾರದಲ್ಲಿ ವ್ಯಕ್ತವಾಗುವ ಸಲಹೆಗಳನ್ನು ಕ್ರೋಡೀಕರಿಸಿ ಯೋಜನೆ ರೂಪಿಸಲಾಗುವುದು. ತಣ್ಣೀರುಬಾವಿ ಹಾಗೂ ಇಡ್ಯ ಬೀಚ್‌ ಗಳನ್ನು“ಬ್ಲೂ ಫ್ಲ್ಯಾಗ್‌’ ಮಾನದಂಡದಲ್ಲಿ ಗುರುತಿಸಲು ಅಭಿವೃದ್ಧಿಪಡಿಸುವ ಯೋಜನೆ ಟೆಂಡರ್‌ ಹಂತದಲ್ಲಿದೆ ಎಂದು ತಿಳಿಸಿದರು.

ವೀಡಿಯೋ ಬಿಡುಗಡೆ
ದ.ಕ. ಜಿಲ್ಲೆಯ ಪ್ರವಾಸಿ ತಾಣಗಳನ್ನು ಪ್ರದರ್ಶಿಸುವ 2 ನಿಮಿಷಗಳ ವೀಡಿಯೋವನ್ನು ಬಿಡುಗಡೆಗೊಳಿಸಲಾಯಿತು. ವೀಡಿಯೋ ಸಿದ್ಧಪಡಿಸಿದ ಮಂಜುನಾಥ್‌ ಅವರನ್ನು ಗೌರವಿಸಲಾಯಿತು. ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲಸಾರ್‌ ಉಪಸ್ಥಿತರಿದ್ದರು. ಪ್ರವಾಸೋ ದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಸ್ವಾಗತಿಸಿದರು. ಮಂಜುಳಾ ಶೆಟ್ಟಿ ನಿರೂಪಿಸಿದರು.

ಕುದ್ರುಗಳ ಅಭಿವೃದ್ಧಿ
ಮಂಗಳೂರಿನ ಮೂರು ಕುದ್ರುಗಳನ್ನು ಪ್ರವಾಸೋದ್ಯಮಕ್ಕೆ ಪೂರಕವಾಗಿ ಅಭಿವೃದ್ಧಿಪಡಿಸುವ ಚಿಂತನೆ ನಡೆಸಲಾಗಿದ್ದು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರಕಾರ ಮತ್ತು ಖಾಸಗಿ ಪಾಲುದಾರಿಕೆ ಮೂಲಕ ಅನುಷ್ಠಾನಕ್ಕೆ ನಿರ್ಧರಿಸಲಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next