ಶಹಾಪುರ: ಮುತ್ತಾತನವರು ಸುರಪುರ ಸಂಸ್ಥಾನದಲ್ಲಿ ಸಲ್ಲಿಸಿದ ಸೇವೆ ನಮ್ಮೆಲ್ಲರಿಗೆ ಪ್ರೇರಣೆಯಾಗಿದೆ. ಇತಿಹಾಸ ಆಸಕ್ತಿಯಿಂದ ನೆರೆ ರಾಷ್ಟ್ರದಿಂದ ಆಗಮಿಸಿ ಇಲ್ಲಿಗೆ ಬಂದಿರುವೆ. ಯುವಕರು ಇತಿಹಾಸ ಅಧ್ಯಯನ ಮಾಡುವುದರಿಂದ ಹೆಚ್ಚಿನ ಸಾಧನೆ ಮಾಡಲು ಸಾಧ್ಯ ಎಂದು ಕ್ಯಾಲಿಫೋರ್ನಿಯಾದ ಡಾ| ಆಲ್ಬರ್ಟ್ ಟೇಲರ್ ತಿಳಿಸಿದರು.
ತಾಲೂಕಿನ ಭೀಮರಾಯನಗುಡಿಯ ಕೃಷ್ಣಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸುರಪುರ ಇತಿಹಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಆಯೋಜಿಸಿದ್ದ ‘ಸುರಪುರ ವಿಜಯೋತ್ಸವ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುರಪುರ ಸಂಸ್ಥಾನ ಇತಿಹಾಸ ತುಂಬಾ ರೋಚಕವಾಗಿದೆ. ಇನ್ನು ಸಾಕಷ್ಟು ಸಂಶೋಧನೆ ನಡೆಸಬೇಕು. ಅಮೂಲ್ಯ ಪ್ರಾಚ್ಯವಸ್ತುಗಳನ್ನು ಸಂಗ್ರಹಿಸಿ ಇಡಬೇಕು. ಮುತ್ತಾತನವರು ನಡೆದ ಪತ್ರ ವ್ಯವಹಾರದ ದಾಖಲೆಗಳನ್ನು ಲಂಡನ್ ಮ್ಯೂಸಿಯಂನಿಂದ ಕಳುಹಿಸುವೆ. ನಿಮ್ಮ ಪ್ರೀತಿಗೆ ನಾನು ತಲೆಬಾಗುವೆ ಎಂದರು.
ಜೂಲಿಯನ್ ಟೇಲರ್ ಮಾತನಾಡಿ, ಮಿಡೋಸ್ ಟೇಲರ್ ವಂಶವೃಕ್ಷದ ಪ್ರಕಾರ ಹೇಳುವುದಾದರೆ ನಮ್ಮದು ಕೃಷಿಕ ಸಮಾಜವಾಗಿತ್ತು. ರೇಷ್ಮೆ, ಗೋಧಿ ಬೆಳೆಯುವ ಮೂಲಕ ಜೀವನ ನಡೆಸಿದ್ದೇವೆ. ಇಂದಿಗೂ ಹಿರಿಯರು ಬಿಟ್ಟು ಹೋಗಿರುವ ಕೃಷಿಯನ್ನು ನಾನು ಮುಂದುವರೆಸಿದ್ದೇನೆ. ಟೇಲರ್ ಉತ್ತಮ ಕಾರ್ಯಗಳಿಂದ ನಮಗೆ ಹೆಚ್ಚಿನ ಗೌರವ ಸಲ್ಲಿರುವುದು ಖುಷಿಯಾಗಿದೆ ಎಂದರು.
ಸಂಶೋಧನಾ ಕೇಂದ್ರ ಸಂಚಾಲಕ ಭಾಸ್ಕರರಾವ್ ಮುಡಬೂಳ ಮಾತನಾಡಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶ ಇದೆ. 1857ರಲ್ಲಿ ರಾಜಾ ವೆಂಕಟಪ್ಪ ನಾಯಕ ಇಡೀ ದಕ್ಷಿಣ ಭಾರತದ ನೇತೃತ್ವವಹಿಸಿ ಸ್ವ-ಧರ್ಮ ಮತ್ತು ಸ್ವ-ದೇಶಕ್ಕಾಗಿ ಯುದ್ಧ ನಡೆಸಿದ ಕೀರ್ತಿ ಇತಿಹಾಸದ ಪುಟದಲ್ಲಿ ರಾರಾಜಿಸುತ್ತಿದೆ. ಯುವಕರು ಸಂಸ್ಥಾನದ ಬಗ್ಗೆ ಇನ್ನೂ ಆಳವಾಗಿ ಸಂಶೋಧನೆ ನಡೆಸುವ ಅಗತ್ಯವಿದೆ. ಆ ನಿಟ್ಟಿನಲ್ಲಿ ಸಾಕಷ್ಟು ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಶರಣಬಸಪ್ಪ ನಿಷ್ಠಿ, ಮಾಜಿ ಸಚಿವ ರಾಜಾ ಮದಗೋಪಾಲ ನಾಯಕ, ಕೃಷಿ ಕಾಲೇಜಿನ ಡೀನ್ ಡಾ| ಲೋಕೇಶ, ಗುರುರಾಜರಾವ ಜೋಡಿದಾರ, ಶ್ರೀನಾಥ ಜೋಡಿದಾರ, ಎಲ್ಬಿಕೆ ಆಲ್ದಾಳ, ಕೃಷ್ಣಾ ಸುಬೇದಾರ, ಸುರೇಂದ್ರ ಪತ್ತಾರ, ಸಾಹಿತಿ ಸಿದ್ಧರಾಮ ಹೊನ್ಕಲ್,ಡಾ| ಅಬ್ದುಲ್ ಕರೀಂ ಕನ್ಯಾಕೊಳ್ಳುರ ಇದ್ದರು.