ಕಲಬುರಗಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಏಕ ರೂಪದ ಸರಕು ಮತ್ತು ಸೇವಾ (ಜಿಎಸ್‌ಟಿ) ತೆರಿಗೆಯು ದೇಶದಲ್ಲಿನ ಸರ್ವಾಂಗೀಣ ಆರ್ಥಿಕ ಸ್ಥಿತಿ ಸುಧಾರಿಸಲು ಪೂರಕವಾಗಿದೆ ಎಂದು ಲೆಕ್ಕ ಪರಿಶೋಧಕಿ ಕೆ. ಅನ್ನಪೂರ್ಣ ಹೇಳಿದರು.
ಹೈದ್ರಾಬಾದ ಕರ್ನಾಟಕ ಕೈಗಾರಿಕಾ ಹಾಗೂ ವಾಣಿಜ್ಯ (ಎಚ್‌ಕೆಸಿಸಿ) ಸಂಸ್ಥೆ ರವಿವಾರ ಹಮ್ಮಿಕೊಂಡಿದ್ದ ಜಿಎಸ್‌ಟಿ ಯೋಜನೆ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಯೋಜನೆ ಕೇಂದ್ರ ಸರ್ಕಾರದ ಮಹತ್ವದ ಯೋಜನೆಯಾಗಿದೆ.
ಈ ಕುರಿತು ವ್ಯಾಪಾರಸ್ಥರು, ಉದ್ಯಮಿಗಳು ಹಾಗೂ ಜನ ಸಾಮಾನ್ಯರು ಹೆಚ್ಚಿನ ಅರಿವು ಮೂಡಿಸಿಕೊಳ್ಳಬೇಕು ಎಂದರು. ಹೊಸ ತೆರಿಗೆ ಪದ್ಧತಿ ದೇಶದಲ್ಲಿ ಬಹುದೊಡ್ಡ ಆರ್ಥಿಕ ಸುಧಾರಣೆ ತರಲಿದೆ ಎನ್ನುವ ನಿರೀಕ್ಷೆಯನ್ನು ಸಾರ್ವಜನಿಕರು ಹೊಂದಿದ್ದಾರೆ.
ಯಾವ, ಯಾವ ವಸ್ತುಗಳಿಗೆ ಸರಕು ಮತ್ತು ಸೇವಾ ತೆರಿಗೆ ಎಷ್ಟು ಎಂಬುದರ ಕುರಿತು ಪ್ರತಿಯೊಬ್ಬರೂ ಅರ್ಥ ಮಾಡಿಕೊಂಡು ಆ ಕುರಿತು ಜಾಗೃತಿ ಮೂಡಿಸಬೇಕುಎಂದು ಸಲಹೆ ಮಾಡಿದರು. ಜೆಎಸ್‌ಟಿ ಮತ್ತು ತಂತ್ರಜ್ಞಾನವನ್ನು ಸರಿಯಾದ ರೀತಿ ಬಳಕೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಸಿಜಿಎಸ್‌ಟಿ, ಎಸ್‌ಜಿಎಸ್‌ಟಿ, ಯುಟಿಜಿಎಸ್‌ಟಿ ಮತ್ತುಐಜಿಎಸ್‌ಟಿ ಕುರಿತು ಸಂಪೂರ್ಣ ಮಾಹಿತಿ ಒದಗಿಸಿದರು. ಕರ್ನಾಟಕದಲ್ಲಿ ಇನ್ನೂ ಹೊಸ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿಲ್ಲ. ಮಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ, ಜಿಎಸ್‌ಟಿ ಬಗ್ಗೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರಲ್ಲಿ ಪರಿಪೂರ್ಣ ಅರಿವಿಲ್ಲ. ಹೀಗಾಗಿ ಜಾಗೃತಿ ಅಗತ್ಯ ಎಂಬುದನ್ನು ಮನಗಾಣಲಾಗಿದೆ ಎಂದರು. ಎಚ್‌ಕೆಸಿಸಿ ಗೌರವಕಾರ್ಯದರ್ಶಿ ಪ್ರಶಾಂತ್ ಮಾನಕರ್ ಹಾಜರಿದ್ದರು.