Advertisement

Superstitious Belief: ಜಿಲ್ಲೆಯಲ್ಲಿ ಮುಂದುವರಿದ ಮೌಢ್ಯಾಚರಣೆ

03:34 PM Dec 08, 2023 | Team Udayavani |

ತುಮಕೂರು: ಕಲ್ಪತರು ನಾಡಿನ ಗೊಲ್ಲರಹಟ್ಟಿಗಳಲ್ಲಿ ಜಾಗೃತಿ ಮೂಡಿಸುತ್ತಿದ್ದರೂ ಮಢಾÂಚಾರಣೆ ಮಾತ್ರ ಇನ್ನೂ ನಿಂತಿಲ್ಲ. ಒಂದಲ್ಲಾ ಒಂದು ಕಡೆ ಮೌಡ್ಯ ನಡೆಯುತ್ತಿರುವುದು ನೋಡಿದರೆ, ಮೌಢ್ಯಾಚರಣೆಯ ಬೀಡಾಗುತ್ತಿದೆಯಾ ಎಂಬ ಪ್ರಶ್ನೆ ಎಲ್ಲೆಡೆ ಕೇಳಿ ಬರುತ್ತಿದೆ.

Advertisement

ಹೌದು, ತುಮಕೂರು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಮೌಢ್ಯಾಚರಣೆ ಪ್ರಕರಣಗಳು ಕೇಳಿ ಬರುತ್ತಿವೆ. ತುಮಕೂರು ತಾಲೂಕಿನಲ್ಲಿ ಮೌಢ್ಯಾಚರಣೆಯಿಂದಾಗಿ ಬಾಣಂತಿಯನ್ನು ಹೊರಗಿಟ್ಟ ಪರಿಣಾಮ ಹಸುಗೂಸು ಸಾವನ್ನಪ್ಪಿರುವ ಪ್ರಕರಣ ಇನ್ನು ಮಾಸುವ ಮುನ್ನವೇ ಈಗ ಮತ್ತೂಂದು ಪ್ರಕರಣ ಮುನ್ನೆಲೆಗೆ ಬಂದಿದೆ.

ಅಮಾನುಷ ಕೃತ್ಯ: ತುಮಕೂರು ಜಿಲ್ಲೆಯಲ್ಲಿ ಗೊಲ್ಲರಹಟ್ಟಿಗಳಲ್ಲಿ ಮೈಲಿಗೆ ಮೌಢ್ಯಾಚರಣೆ ಮುಂದುವರೆದಿದ್ದು, ಬಾಣಂತಿ- ಮಗು ಮತ್ತು ಋತುಮತಿಯಾದ ಮಹಿಳೆಯರನ್ನು ಊರ ಹೊರಗಿನ ಗುಡಿಸಲಿನಲ್ಲಿಟ್ಟು ಮೌಢ್ಯಾಚರಣೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ತುರುವೇಕೆರೆ ತಾಲೂಕಿನ ಮಾಯಸಂದ್ರದ ವರಹಸಂದ್ರ ಗೊಲ್ಲರಹಟ್ಟಿಯಲ್ಲಿ ಬಾಣಂತಿ ಮತ್ತು ಮಗು ಹಾಗೂ ಋತುಮತಿಯರಾದ ಇಬ್ಬರು ಯುವತಿಯರನ್ನು ಊರ ಹೊರಗಿಟ್ಟು ಅಮಾನುಷ ಕೃತ್ಯ ಬೆಳಕಿಗೆ ಬಂದಿದೆ. ವಿಷಯ ತಿಳಿದ ಕೂಡಲೇ ಗುರುವಾರ ಬೆಳಗ್ಗೆ 5 ಗಂಟೆಗೆ ಗ್ರಾಮದ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಮಹಿಳೆಯರನ್ನು ತಹಶೀಲ್ದಾರ್‌ ರೇಣು ಕುಮಾರ್‌ ರಕ್ಷಣೆ ಮಾಡಿದ್ದಾರೆ.

ಮನವರಿಕೆಗೆ ಹರಸಾಹಸ: ಮೌಢ್ಯಾಚರಣೆಯ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ರೇಣು ಕುಮಾರ್‌ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಮನವರಿಕೆ ಮಾಡಲು ಹರಸಹಾಸ ಪಟ್ಟರು. ಆರಂಭದಲ್ಲಿ ಗ್ರಾಮಸ್ಥರು ನಮಗೆ ದೇವರಲ್ಲಿ ನಂಬಿಕೆ ಇದೆ. ನಮ್ಮ ದೇವರು ನಮಗೆ ಕೆಟ್ಟದ್ದನ್ನು ಮಾಡುತ್ತಾನೆ. ಹೀಗಾಗಿ ನಾವು ಒಳಗಡೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಆದರೆ, ತಹಶೀಲ್ದಾರ್‌ ರೇಣುಕುಮಾರ್‌ ಅವರು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಗ್ರಾಮದವರನ್ನು ಮನವರಿಕೆ ಮಾಡಿ, ಮಹಿಳೆಯರನ್ನು ಮನೆ ಒಳಗಡೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾದರು.

ಜನರಲ್ಲಿ ಮತ್ತಷ್ಟು ಅರಿವು ಅಗತ್ಯ : ಜಿಲ್ಲೆಯ ಗೊಲ್ಲರಹಟ್ಟಿಗಳಲ್ಲಿ ಹೆಚ್ಚಾಗುತ್ತಿರುವ ಮೌಢ್ಯಾಚರಣೆ ತಡೆಗೆ ಮತ್ತಷ್ಟು ಅರಿವು ಅಗತ್ಯವಾಗಿದೆ. ಈಗಾಗಲೇ ಅಲ್ಲಲ್ಲಿ ಗೊಲ್ಲರಹಟ್ಟಿಗಳಲ್ಲಿ ಕಂಡು ಬಂದಿರುವ ಮೌಢ್ಯಾಚರಣೆ ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೇರಿದಂತೆ ನ್ಯಾಯಾಧೀಶರು ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಆದರೂ, ಇಂತಹ ಪ್ರಕರಣಗಳು ಮತ್ತಷ್ಟು ಹೆಚ್ಚಾಗುತ್ತಿದೆ. ಇನ್ನಷ್ಟು ಅರಿವು ಮೂಡಿಸುವುದು ಅಗತ್ಯವಾಗಿದೆ.

Advertisement

ತುಮಕೂರು ತಾಲೂಕಿನಲ್ಲಿ ಕೆಲ ತಿಂಗಳ ಹಿಂದೆ ಮೌಢ್ಯಾಚರಣೆಗೆ ಹಸುಗೂಸೊಂದು ಬಲಿಯಾಗಿತ್ತು. ಪ್ರಕರಣದ ಬೆನ್ನಲ್ಲೇ ಸಂಬಂಧಿಕರ ಮೇಲೆ ಕಾನೂನಿನ ಕ್ರಮ ಕೈಗೊಳ್ಳಲಾಗಿತ್ತು. ಈ ಸುದ್ದಿ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಸುದ್ದಿ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದ್ದರು. ಅರಿವು ಮೂಡಿಸುವ ಕೆಲಸ ಮಾಡಬೇಕು ಎಂದು ತಿಳಿಸಿದ್ದರು. ಈಗ ಮತ್ತೆ ಅಂತಹದ್ದೆ ಪ್ರಕರಣ ತುರುವೇಕೆರೆಯಲ್ಲಿ ಬೆಳಕಿಗೆ ಬಂದಿದ್ದು, ತಹಶೀಲ್ದಾರ್‌ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ಇಂತಹ ಕೆಲಸ ಮತ್ತಷ್ಟು ಹೆಚ್ಚಾಗಬೇಕು ಮೌಢ್ಯಾಚರಣೆ ತಡೆಗೆ ಕಠಿಣ ಕ್ರಮಕ್ಕೂ ಮುಂದಾಗಬೇಕಾಗಿದೆ.

ಗುರುವಾರ ಬೆಳಗ್ಗೆ 5 ಗಂಟೆಯಲ್ಲಿ ಮಹಿಳೆಯೊಬ್ಬರು ನನಗೆ ಕರೆ ಮಾಡಿ, ಗೊಲ್ಲರಹಟ್ಟಿಯಲ್ಲಿ ಈ ರೀತಿ ಆಗಿದೆ ಎಂದು ತಿಳಿಸಿದರು. ತಕ್ಷಣ ನಾವು ಅಲ್ಲಿಗೆ ಹೋಗಿ ಜನರಿಗೆ ಅರಿವು ಮೂಡಿಸಿ, ಬಾಣಂತಿ ಮತ್ತು ಇಬ್ಬರು ಋತುಮತಿಯಾದ ಯುವತಿಯರನ್ನು ರಕ್ಷಣೆ ಮಾಡಿ, ಮನೆಗೆ ಕಳುಹಿಸಲಾಗಿದೆ. ●ರೇಣುಕುಮಾರ್‌, ತಹಶೀಲ್ದಾರ್‌

 -ಚಿ.ನಿ.ಪುರುಷೋತ್ತಮ್‌

Advertisement

Udayavani is now on Telegram. Click here to join our channel and stay updated with the latest news.

Next