ನೆಲಮಂಗಲ: ದೇವರ ಉತ್ಸವದ ನೆಪದಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ಮೂಲಕ ಗ್ರಾಮದಲ್ಲಿ ಬಹಿರಂಗ ಮಾಡಿರುವ ಘಟನೆ ತಾಲೂಕಿನ ಯಂಟಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಲುಬೇಟೆಯಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡಬಾರದು ಎಂಬ ನಿಯಮವಿದ್ದು ಕಠಿಣ ಕ್ರಮದ ಎಚ್ಚರಿಕೆಯನ್ನು ಸಹ ಈಗಾಗಲೇ ಸರಕಾರ ನೀಡಿದೆ. ಆದರೆ ತಾಲೂಕಿನ ಸೋಲ ದೇವನಹಳ್ಳಿಯ ಬ್ಯಾಟರಾಯಸ್ವಾಮಿ ದೇವರಿಗೆ ಗುರುವಾರ ಉತ್ಸವ ಮಾಡಿದ ಯಂಟಗನಹಳ್ಳಿ ಗ್ರಾಮಸ್ಥರು ಮಾನವೀಯತೆ ಮರೆತು ಕಾಡು ಪ್ರಾಣಿಗಳನ್ನು ಬೇಟೆಯಾಡಿ ಗ್ರಾಮದಲ್ಲಿ ಗುರುವಾರ ರಾತ್ರಿ ಅದ್ಧೂರಿಯಾಗಿ ಮೆರವಣಿಗೆ ಮಾಡಿರುವ ವಿದ್ರಾವಕ ಘಟನೆ ನಡೆದಿದೆ.
ಬೇಟೆ, ಬಹಿರಂಗ ಹರಾಜು: ಸೋಲದೇವನಹಳ್ಳಿ,ಯಂಟಗನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಕೋಲು ಬೇಟೆಯ ಪ್ರಯುಕ್ತ ಐದಕ್ಕೂ ಹೆಚ್ಚು ಕಾಡು ಮೊಲಗಳು, ಕೊಕ್ಕರೆ, ಕಾಡುಕೋಳಿ, ಸೇರಿದಂತೆ 15ಕ್ಕೂ ಹೆಚ್ಚು ಕಾಡುಪ್ರಾಣಿಗಳನ್ನು ಬೇಟೆಯಾಡಿದ್ದು ಯಂಟಗಾನಹಳ್ಳಿಯಲ್ಲಿ ಸಾವಿರಾರು ರೂಪಾಯಿಗಳಿಗೆ ಬಹಿರಂಗ ಹರಾಜಿನ ಮೂಲಕ ಮಾರಾಟ ಮಾಡಿದ್ದಾರೆ.
ಜನಪ್ರತಿನಿಧಿಗಳು ಭಾಗಿಯ ಆರೋಪ: ಕೋಲು ಬೇಟೆಯಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಿದ ನಂತರ ಉತ್ಸವ ಮಾಡಲು ಹಾಗೂ ಹರಾಜು ಮಾಡಲು ಸ್ಥಳೀಯ ಜನಪ್ರತಿನಿಧಿಗಳು ಭಾಗಿಯಾಗಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಜವಾಬ್ದಾರಿ ಸ್ಥಾನದಲ್ಲಿರುವ ವ್ಯಕ್ತಿಗಳೇ ಕಾನೂನು ಉಲ್ಲಂಘನೆ ಮಾಡಿ ಬೇಟೆಯಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರಿ ವಿರೋಧಕ್ಕೆ ಕಾರಣವಾಗಿದೆ.
ಅರಣ್ಯ ಇಲಾಖೆ ನಿರ್ಲಕ್ಷ್ಯ: ಕೋಲುಬೇಟೆಯಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡುವ ಮೂಲಕ ಗ್ರಾಮದಲ್ಲಿ ಒಂದೆರಡು ಗಂಟೆಗಳ ಕಾಲ ತಮಟೆ ಬಾರಿಸುವ ಮೂಲಕ ಮೆರವಣಿಗೆ ಮಾಡಿ ಉತ್ಸವ ನಡೆಸಿದ್ದರು ಸಹ ನಿಲ್ಲಿಸುವ ಕೆಲಸವನ್ನು ಅರಣ್ಯ ಇಲಾಖೆಯಾಗಲಿ, ನೆಲಮಂಗಲ ಗ್ರಾಮಾಂತರ ಪೊಲೀಸರಾಗಲಿ ಮಾಡದಿರುವುದು ದುರಂತವೇ ಸರಿ.
ಕೋಲುಬೇಟೆಯಲ್ಲಿ ಕಾಡುಪ್ರಾಣಿಗಳನ್ನು ಬೇಟೆಯಾಡಬಾರದು ಎಂಬುದರ ಬಗ್ಗೆ ಇಲಾಖೆ ಸೂಕ್ತ ರೀತಿಯಲ್ಲಿ ಪ್ರಚಾರ ಮಾಡಿದ್ದರೇ ಹತ್ತಾರು ಕಾಡುಪ್ರಾಣಿಗಳು ಬಲಿಯಾಗುತ್ತಿರಲಿಲ್ಲ.
ಕೋಲುಬೇಟೆಯಲ್ಲಿ ಕಾಡುಪ್ರಾಣಿಗಳ ಬೇಟೆಯಾಡಬಾರದು, ಯಂಟಗನಹಳ್ಳಿ ವಿಚಾರ ತಿಳಿಯುತ್ತಿದ್ದಂತೆ ದೂರು ದಾಖಲಿಸಿಕೊಂಡಿದ್ದು ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಗ್ರಾಮಗಳಲ್ಲಿ ಅರಣ್ಯ ಇಲಾಖೆಯಿಂದ ಜಾಗೃತಿ ಮೂಡಿಸಲಾಗುವುದು.
– ಡಾ.ಮಾಲತಿಪ್ರಿಯಾ.ಎಂ, ಅರಣ್ಯ ಇಲಾಖೆ ಡಿಸಿಎಫ್