Advertisement
ಜಿಲ್ಲೆಯ ಕೆಲವು ಹಳ್ಳಿಗಳಲ್ಲಿ ಕೋವಿಡ್ ವೈರಸ್‌ನ್ನೇ “ಕೊರೊನಮ್ಮ’ ಎಂದು ಹೆಸರಿಟ್ಟು ಕಲ್ಲು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದು ತಮ್ಮನ್ನು ಸೋಂಕಿನಿಂದ ಕಾಪಾಡುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದಾರೆ.
Related Articles
Advertisement
ಐದು ವಾರ ಪೂಜೆ: ಈ ಮೌಢ್ಯಾಚರಣೆ ಹಿನ್ನೆಲೆಯಲ್ಲಿ ಹಳ್ಳಿಗಳಲ್ಲಿ ಮಂಗಳವಾರ, ಶುಕ್ರವಾರ ಸಾಮೂಹಿಕವಾಗಿ ಕೊರೊನಮ್ಮಳಿಗೆ ನೈವೇದ್ಯ ಒಪ್ಪಿಸುವುದು, ಮಕ್ಕಳಿಗೆ, ದೊಡ್ಡವರಿಗೆ ಕವಡೆ, ಕಾಳು ಮೆಣಸು ಕಟ್ಟುವುದು ನಡೆಯುತ್ತಲೇ ಇದೆ. ಈ ಕಾರಣಕ್ಕಾಗಿಯೇ ಹಳ್ಳಿಗಳಲ್ಲಿ ಜನರು ಮತ್ತೆ ಜನಜಂಗುಳಿಯಾಗಿ ಸೇರುತ್ತಿದ್ದು, ಈ ಆಚರಣೆಗಳು ಕೋವಿಡ್ ಹರಡುವಿಕೆಗೆ ಇನ್ನಷ್ಟು ಇಂಬು ನೀಡುತ್ತಿರುವುದು ಮೌಢ್ಯಾಚರಣೆಯಲ್ಲಿ ಮರೆಯಾಗಿದೆ.
ಕೆಲವು ಹಳ್ಳಿಗಳಲ್ಲಿ ಕೋವಿಡ್ ಸೋಂಕಿನಿಂದ ಹೆಚ್ಚಿನ ಸಾವುಗಳು ಸಂಭವಿಸಿದ್ದು ಇದರಿಂದ ಭಯಗೊಂಡ ಜನರು, ಇಂಥ ಮೌಢ್ಯಾಚರಣೆಗೆ ಮುಂದಾಗಿದ್ದರೆ, ಇನ್ನು ಕೆಲವು ಹಳ್ಳಿಗಳು ತಮ್ಮ ಗ್ರಾಮಕ್ಕೆ ಕೋವಿಡ್ ವಕ್ಕರಿಸದಿರಲಿ ಎಂದು ಮುಂಜಾಗ್ರತಾ ಕ್ರಮವಾಗಿ ಈ ಮೌಢ್ಯಾಚರಣೆಗೆ ಮುಂದಾಗಿವೆ. ಈ ಹಿಂದೆ ಪ್ಲೇಗ್, ಕಾಲರಾ, ಮಲೇರಿಯಾದಂಥ ರೋಗಗಳು ಬಂದಾಗಲೂ ಜನರು ಒಂದೊಂದು ರೋಗಕ್ಕೂ ಒಂದೊಂದು ಹೆಸರಿಟ್ಟು ದೇವತೆಗಳನ್ನಾಗಿ ಮಾಡಿ ನೈವೇದ್ಯ ಇಟ್ಟು ಪೂಜಿಸುತ್ತಿದ್ದರು. ತನ್ಮೂಲಕ ತಮ್ಮನ್ನು ರೋಗದಿಂದ ಕಾಪಾಡುವಂತೆ ಇಲ್ಲವೇ ತಮ್ಮ ಊರು ಬಿಟ್ಟು ಹೋಗುವಂತೆ ರೋಗ ದೇವತೆಯನ್ನೇ ಪ್ರಾರ್ಥಿಸುವ ಮೌಡ್ಯ ಜಾರಿಯಲ್ಲಿತ್ತು. ಈಗಿನ ಆಧುನಿಕ ಕಾಲದಲ್ಲಿಯೂ ಜನರು ಇಂಥದ್ದೇ ಮೌಡ್ಯಗಳಿಗೆ ಮೊರೆ ಹೋಗಿರುವುದು ವಿಷಾದನೀಯ ಸಂಗತಿ.
ಸಂಕಷ್ಟದಲ್ಲೂ ಅಪವ್ಯಯ : ಕೋವಿಡ್ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಇದರ ನಿಯಂತ್ರಣಕ್ಕಾಗಿ ಲಾಕ್‌ಡೌನ್ ಜಾರಿಗೊಳಿಸಿದೆ. ಲಾಕ್‌ಡೌನ್‌ನಿಂದಾಗಿ ಜನರಿಗೆ ಉದ್ಯೋಗವೂ ಇಲ್ಲ. ಹೊರಗೆ ಓಡಾಡುವಂತೆಯೂ ಇಲ್ಲ. ಹಳ್ಳಿಗಳಲ್ಲಿ ಜನರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಸಂಕಷ್ಟದ ನಡುವೆಯೂ ಜನರು ಪೂಜೆ, ನೈವೇದ್ಯದಂಥ ಅಂಧಾಚರಣೆಗಾಗಿ ನೂರಾರು ರೂಪಾಯಿ ಖರ್ಚು ಮಾಡುತ್ತಿದ್ದಾರೆ. ಈ ಮೌಢ್ಯಾಚರಣೆಗಳಿಂದಾಗಿ ಹಳ್ಳಿ ಜನರು ಪರೋಕ್ಷವಾಗಿ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿಸುತ್ತಿರುವುದು ಖೇದಕರ ಸಂಗತಿ.
ಮೌಢ್ಯಾಚರಣೆ ಬೇಡ ಸಾಮೂಹಿಕವಾಗಿ ಸೇರಿ ಪೂಜೆ ಮಾಡುವುದು, ನೈವೇದ್ಯ ಕೊಡುವುದು,ಬಲಿ ಕೊಡುವುದು ಇಲ್ಲವೇ ಕೊರೊನಾ ಬರದಂತೆ ದಾರ, ಕವಡೆ, ಕಾಳುಮೆಣಸು ಕಟ್ಟಿಕೊಳ್ಳುವ ಮೌಢ್ಯಾಚರಣೆಯಿಂದ ಕೋವಿಡ್ ದಿಂದ ರಕ್ಷಿಸಿಕೊಳ್ಳಲು ಸಾಧ್ಯವಿಲ್ಲ. ಬದಲಾಗಿ ಸಾಮೂಹಿಕ ಭಾಗವಹಿಸುವಿಕೆಯಿಂದ ಕೊರೊನಾ ಸೋಂಕು ಇನ್ನಷ್ಟು ಹೆಚ್ಚುತ್ತದೆ. ಆದ್ದರಿಂದ ಗ್ರಾಮಸ್ಥರು ಮೌಢ್ಯಾಚರಣೆ ಬಿಟ್ಟು ಕೋವಿಡ್ ನಿಯಂತ್ರಣಕ್ಕೆ ಬೇಕಾದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಡಾ.ವಿಜಯ ಮಹಾಂತೇಶ್ ದಾನಮ್ಮನವರ್, ಜಿಪಂ ಸಿಇಒ
-ಎಚ್.ಕೆ. ನಟರಾಜ