Advertisement

ಶಿಕ್ಷಣದಿಂದ ಮೌಢ್ಯ ದೂರ

12:18 PM Jun 25, 2018 | |

ಚಿತ್ರದುರ್ಗ: ಬರ ಪೀಡಿತ ಹಿಂದುಳಿದ ಜಿಲ್ಲೆಯಲ್ಲಿ “ದುರ್ಗದ ಚಿತ್ತ ಶಾಲೆಯತ್ತ’ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಹೇಳಿದರು.

Advertisement

ನಗರದ ಅಗಸನಕಲ್ಲು ಉರ್ದು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವಿದ್ಯಾಶಕ್ತಿ ಯೋಜನೆಯಡಿ ಹಮ್ಮಿಕೊಂಡಿದ್ದ “ದುರ್ಗದ ಚಿತ್ತ ಶಾಲೆಯತ್ತ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಶಿಕ್ಷಣದಿಂದ ಮಾತ್ರ ದೊರೆಯುತ್ತದೆ. ಯಾವುದೇ ಮಗು ಶಾಲೆಯಿಂದ ಹೊರಗುಳಿಯಬಾರದೆಂಬ ಉದ್ದೇಶ ಇಟ್ಟುಕೊಂಡು ವಿನೂತನವಾಗಿ ರೂಪಿಸಿರುವ ಈ ಕಾರ್ಯಕ್ರಮ ಬಹಳ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ವಿದ್ಯಾವಂತರಾಗಲು ಸರ್ಕಾರ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇದರ ಪ್ರಯೋಜನ ಪಡೆದು ಎಲ್ಲ ಮಕ್ಕಳು ವಿದ್ಯಾವಂತರಾದರೆ ಬಡತನ, ಮೂಢನಂಬಿಕೆಗಳನ್ನು ದೇಶದಿಂದ ತೊಲಗಿಸಬಹುದು ಎಂದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾ ಮಾತನಾಡಿ ಬಡತನ ಮತ್ತಿತರ ಕಾರಣಗಳಿಂದ ಶಾಲೆಗೆ ಮಕ್ಕಳನ್ನು ಕಳುಹಿಸದೇ
ಇದ್ದರೆ ನಿರ್ಲಕ್ಷ್ಯ ತೋರಿದಂತಾಗುತ್ತದೆ. ಹೆಣ್ಣುಮಗು ಹುಟ್ಟಿದರೆ ಮದುವೆಗೆ ಹಣ, ಬಂಗಾರ ಕೂಡಿಡುವ ಬದಲು
ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ. ವಿದ್ಯಾವಂತರಾದರೆ ಸಂಪತ್ತು, ಹಣವನ್ನು ಅವರೇ ಗಳಿಸುತ್ತಾರೆ ಎಂದು
ತಿಳಿಸಿದರು.

ವಿದ್ಯಾಶಕ್ತಿ ಯೋಜನೆಯ ಎರಡನೇ ಹಂತದಲ್ಲಿ 181 ಹಳ್ಳಿಗಳಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಅಧಿಕಾರಿಗಳು,
ಸಂಘ-ಸಂಸ್ಥೆಗಳು, ನಿವೃತ್ತ ನೌಕರರು, ನ್ಯಾಯವಾದಿಗಳು ಗ್ರಾಮ ವಾಸ್ತವ್ಯಕ್ಕೆ ಮುಂದಾಗಿರುವುದು ಒಳ್ಳೆಯ
ಬೆಳವಣಿಗೆ. ಸಾರ್ವಜನಿಕರು ಈ ಕಾರ್ಯದಲ್ಲಿ ಕೈ ಜೋಡಿಸಿ ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ
ಸಹಕಾರ ನೀಡಬೇಕು. ಶಾಲೆ ಬಿಟ್ಟು ಬೀದಿಯಲ್ಲಿ ಮಗು ತಿರುಗಾಡುತ್ತಿದ್ದರೆ ಸಾರ್ವಜನಿಕರು ಸಹಾಯವಾಣಿ
1098ಗೆ ಉಚಿತವಾಗಿ ಕರೆಮಾಡಿ ಮಗುವನ್ನು ಶಾಲೆಗೆ ಸೇರಿಸಲು ಸಹಕರಿಸಬೇಕು ಎಂದು ಮನವಿ ಮಾಡಿದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌. ರವೀಂದ್ರ ಮಾತನಾಡಿ, ವಿದ್ಯಾವಂತರಿಂದ ಮಾತ್ರ ಸಮಾಜ ಬದಲಾವಣೆ ಸಾಧ್ಯ. ಮನೆಯೇ ಮೊದಲ ಪಾಠಶಾಲೆ, ಜನನಿ ಮೊದಲ ಗುರು ಎಂಬಂತೆ ಮನೆಯಲ್ಲಿ ಮಕ್ಕಳ ಕಲಿಕೆಗೆ ಉತ್ತಮ ಸಂಸ್ಕಾರ ಮತ್ತು ಶಾಂತಿಯ ವಾತಾವರಣ ಕಲ್ಪಿಸಿಕೊಡಬೇಕು.  

ಶಾಲೆಯಲ್ಲಿ ಕಲಿಯುವುದು ಔಪಚಾರಿಕ ಶಿಕ್ಷಣವಾದರೆ, ಶೇ. 75 ರಷ್ಟು ಜೀವನಕ್ಕೆ ಬೇಕಾಗುವ ಅನೌಪಚಾರಿಕ ಜೀವನ ಶಿಕ್ಷಣವನ್ನು ಮಗು ಕಲಿಯುವುದು ಮನೆಯಲ್ಲಿ ಮತ್ತು ನಮ್ಮ ಸುತ್ತಮುತ್ತಲಿನ ಪರಿಸರದಿಂದ. ಅದಕ್ಕಾಗಿ ಪ್ರತಿಯೊಬ್ಬರೂ ಜವಾಬ್ದಾರಿಯಿಂದ ತಮ್ಮ ಮಕ್ಕಳನ್ನು ನೂರಕ್ಕೆ ನೂರರಷ್ಟು ಸುಶಿಕ್ಷಿತರನ್ನಾಗಿ ಮಾಡಬೇಕು. ಈ ಮೂಲಕ ಮಕ್ಕಳಿಗೆ ಸಂಪತ್ತು ಮಾಡಿಡುವ ಬದಲು ಮಕ್ಕಳನ್ನೇ ಸಂಪತ್ತನ್ನಾಗಿ ಮಾಡಬೇಕು ಎಂದು ಕರೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಜಿ.ಎಚ್‌. ತಿಪ್ಪಾರೆಡ್ಡಿ ಮಾತನಾಡಿ, ಸಾಕ್ಷರತಾ ಪ್ರಮಾಣ ಗಂಡುಮಕ್ಕಳಲ್ಲಿ ಶೇ.70 ರಷ್ಟು ಇದ್ದರೆ, ಹೆಣ್ಣುಮಕ್ಕಳಲ್ಲಿ ಮತ್ತು ಬಡವರ ಮಕ್ಕಳ ಶಿಕ್ಷಣ ಪ್ರಮಾಣ ತೀರಾ ಕಡಿಮೆ ಇದೆ. ಚಿತ್ರದುರ್ಗ ಬರಪೀಡಿತ ಜಿಲ್ಲೆಯಾಗಿರುವುದರಿಂದ ಜನರ ಏಳಿಗೆಗಾಗಿ ಶಿಕ್ಷಣವೊಂದೇ ದಾರಿ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾರಣಕ್ಕೆ ಶಾಲೆ ಬಿಟ್ಟ ಮಕ್ಕಳನ್ನು ಪುನಃ ಶಾಲೆಗೆ ಕರೆತರುವ ಕಾರ್ಯ ಪ್ರಶಂಸನೀಯ ಎಂದರು.

ಜಿಪಂ ಸದಸ್ಯ ಗುರುಮೂರ್ತಿ, ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಿಸುವಂತೆ ಸಲಹೆ ನೀಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಸನ್ಮಾನಿಸಿ ಉಚಿತ ಪಠ್ಯಪುಸ್ತಕ ವಿತರಿಸಲಾಯಿತು. ನಗರಸಭೆ ಪ್ರಭಾರಿ ಅಧ್ಯಕ್ಷೆ ಶಾಂತಕುಮಾರಿ, ಅಪರ ಜಿಲ್ಲಾಧಿಕಾರಿ ಸಂಗಪ್ಪ, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ| ರಾಮ ಎಲ್‌. ಅರೆಸಿದ್ದಿ, ಉಪವಿಭಾಗಾಧಿಕಾರಿ ವಿಜಯಕುಮಾರ್‌, ತಹಶೀಲ್ದಾರ್‌ ಮಲ್ಲಿಕಾರ್ಜುನ ಇದ್ದರು.

ಬಡ ಮಕ್ಕಳು ಪ್ರತಿಭಾವಂತರಾಗಿದ್ದರೂ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿಗಳಲ್ಲಿ ಅರ್ಧಕ್ಕೆ ಶಿಕ್ಷಣ ಬಿಟ್ಟು ಕೂಲಿ ನಾಲಿ ಮಾಡುವ ಸ್ಥಿತಿ ಇದೆ. ಇದನ್ನು ತಪ್ಪಿಸಲು ರಾಷ್ಟ್ರೀಕೃತ ಬ್ಯಾಂಕುಗಳು ಉನ್ನತ ಶಿಕ್ಷಣಕ್ಕೆ ಮತ್ತು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಾಲ ಸೌಲಭ್ಯ ನೀಡುತ್ತಿವೆ. ಇದರ ಪ್ರಯೋಜನ ಪಡೆದುಕೊಳ್ಳಬೇಕು.  

ಜಿ.ಎಚ್‌. ತಿಪ್ಪಾರೆಡ್ಡಿ, ಶಾಸಕರು. 

Advertisement

Udayavani is now on Telegram. Click here to join our channel and stay updated with the latest news.

Next