ಚೆನ್ನೈ: ಸದ್ಯ ದಕ್ಷಿಣ ಭಾರತದಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ʼಜೈಲರ್ʼ ಹವಾ ಜೋರಾಗಿದೆ. ಥಿಯೇಟರ್ ನಲ್ಲಿ ತಲೈವಾ ಅವರ ʼಹುಕುಂʼ ನೋಡಲು ಜನ ಹರಿದು ಬರುತ್ತಿದ್ದಾರೆ.
ʼಜೈಲರ್ʼ ವರ್ಲ್ಡ್ ವೈಡ್ 400 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ. ರಜಿನಿಕಾಂತ್ ಅವರ ʼಜೈಲರ್ʼ ಮಾಸ್ ಲುಕ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ʼಬೀಸ್ಟ್ʼ ಬಳಿಕ ನೆಲ್ಸನ್ ದಿಲೀಪ್ ಕುಮಾರ್ ʼಜೈಲರ್ʼ ಮೂಲಕ ಸ್ಟ್ರಾಂಗ್ ಕಂಬ್ಯಾಕ್ ಮಾಡಿದ್ದಾರೆ. ರಜಿನಿಕಾಂತ್ ಅಭಿಮಾನಿಗಳಿಗೆ ಬೇಕಿರುವ ಮನರಂಜನೆಯ ಫ್ಲೇವರ್ , ಸಾಂಗ್ ,ಬಿಜಿಎಂ ಜೊತೆಗೆ ಶಿವರಾಜ್ ಕುಮಾರ್, ಮೋಹನ್ ಲಾಲ್ ಹಾಗೂ ಜಾಕಿಶ್ರಾಫ್ ಅವರ ಅತಿಥಿ ಪಾತ್ರ ಸಿನಿಮಾಕ್ಕೆ ಪಾಸಿಟಿವ್ ಅಂಶವಾಗಿದ್ದು, ಇದೇ ಅಂಶಗಳು ಪ್ರೇಕ್ಷಕರ ಮನಗೆದ್ದಿದೆ.
ಸಿನಿಮಾ ಥಿಯೇಟರ್ ನಲ್ಲಿ ಹೌಸ್ ಫುಲ್ ಆಗುತ್ತಿರುವ ಬೆನ್ನಲ್ಲೇ ಓಟಿಟಿ ರಿಲೀಸ್ ಬಗ್ಗೆ ಗಾಸಿಪ್ ಹಬ್ಬಿದೆ. ಯಾವ ಓಟಿಟಿಯಲ್ಲಿ ಸಿನಿಮಾ ರಿಲೀಸ್ ಆಗಲಿದೆ ಎನ್ನುವುದರ ಬಗ್ಗೆ ಚರ್ಚೆ ಶುರುವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ದೊಡ್ಡ ಸಿನಿಮಾಗಳು ಥಿಯೇಟ್ರಿಕಲ್ ರಿಲೀಸ್ ಗೂ ಮೊದಲೇ ಓಟಿಟಿ ಸ್ಟ್ರೀಮಿಂಗ್ ಹಕ್ಕುಗಳನ್ನು ಮಾರಾಟ ಮಾಡುತ್ತವೆ. ಇದಕ್ಕೆ ನಿರ್ಮಾಪಕರು ಸ್ಟ್ರೀಮಿಂಗ್ ಓಟಿಟಿಯೊಂದಿಗೆ ಒಪ್ಪಂದವನ್ನು ಮಾಡಿಕೊಂಡಿರುತ್ತಾರೆ.
ಸದ್ಯ ʼಜೈಲರ್ʼ ಅಮೋಘ ಪ್ರದರ್ಶನ ಕಾಣುತ್ತಿರುವುದರಿಂದ ಇದರ ಓಟಿಟಿ ರಿಲೀಸ್ ಅಷ್ಟು ಬೇಗ ಆಗುವುದಿಲ್ಲ ಎನ್ನಲಾಗುತ್ತಿದೆ. ಸನ್ ಪಿಕ್ಚರ್ಸ್ ಸಿನಿಮಾದ ಓಟಿಟಿ ಯೋಜನೆಯನ್ನು ಇಷ್ಟು ಬೇಗ ಹಾಕಿಕೊಂಡಿಲ್ಲ ಎನ್ನಲಾಗಿದೆ.
ʼಜೈಲರ್ʼ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ರಿಲೀಸ್ ಆಗುವ ಸಾಧ್ಯತೆಯಿದೆ. ಅದಕ್ಕೆ ಕಾರಣ ಈ ಹಿಂದಿನ ಸನ್ ಪಿಕ್ಚರ್ಸ್ ನಿರ್ಮಾಣದ ಸಿನಿಮಾಗಳು ನೆಟ್ ಫ್ಲಿಕ್ಸ್ ನಲ್ಲೇ ರಿಲೀಸ್ ಆಗಿವೆ. ಆ ಕಾರಣದಿಂದ ʼಜೈಲರ್ʼ ಕೂಡ ಅದರಲ್ಲೇ ಸ್ಟ್ರೀಮ್ ಆಗಲಿದೆ ಎನ್ನಲಾಗುತ್ತಿದೆ. ಆದರೆ ಈ ಬಗೆಗಿನ ಅಧಿಕೃತ ಮಾಹಿತಿ ಈ ವಾರದ ಕೊನೆಯಲ್ಲಿ ಬರಬಹುದೆಂದು ವರದಿ ತಿಳಿಸಿದೆ.