ಚೆನ್ನೈ: ಸೂಪರ್ ಸ್ಟಾರ್ ರಜಿನಿಕಾಂತ್ ಪುತ್ರಿ ಐಶ್ವರ್ಯಾ ರಜಿನಿಕಾಂತ್ ನಿರ್ದೇಶನದ ʼ ಲಾಲ್ ಸಲಾಂʼ ಸಿನಿಮಾ ಸೆಟ್ ಏರಿದ ದಿನದಿಂದಲೇ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿದೆ. ಅದಕ್ಕೆ ಕಾರಣ ಸಿನಿಮಾದಲ್ಲಿ ರಜಿನಿಕಾಂತ್ ಅವರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವುದು.
ಈ ಹಿಂದೆ ರಜಿನಿಕಾಂತ್ ಸಿನಿಮಾದ ಮುಹೂರ್ತದ ವೇಳೆ ಕಾಣಿಸಿಕೊಂಡಿದ್ದ ಫೋಟೋ ವೈರಲ್ ಆಗಿತ್ತು. ಇದೀಗ ರಜಿನಿಕಾಂತ್ ಪಾತ್ರದ ಮೊದಲ ಲುಕ್ ರಿಲೀಸ್ ಮಾಡಿ ಚಿತ್ರದ ಬಗೆಗಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಕುರ್ತಾ ಹಾಕಿ, ಗಡ್ಡ ಬಿಟ್ಟು, ಕಣ್ಣಿಗೊಂದು ಸ್ಟೈಲಿಸ್ಟ್ ಕನ್ನಡಕ, ತಲೆಗೊಂದು ಟೋಪಿ ಹಾಕಿರುವ ರಜಿನಿಕಾಂತ್ ಅವರ ಪಾತ್ರಕ್ಕೆ ʼ ಮೊಯ್ದೀನ್ ಭಾಯಿʼ ಎಂದು ಹೆಸರಿಡಲಾಗಿದೆ. ಮೊದಲ ಲುಕ್ ಫೋಸ್ಟರ್ ರಿಲೀಸ್ ಮಾಡಿರುವ ʼಲೈಕಾ ಪ್ರೂಡಕ್ಷನ್ಸ್ʼ ಎಲ್ಲರ ಮೆಚ್ಚಿನ ಭಾಯಿ ಮುಂಬಯಿಗೆ ಮರಳಿದ್ದಾರೆ ಎಂದು ಬರೆದುಕೊಂಡಿದೆ. ರಜಿನಿಕಾಂತ್ ಅವರ ಈ ಲುಕ್ ಅಭಿಮಾನಿಗಳ ದಿಲ್ ಖುಷ್ ಮಾಡಿದೆ.
ವಿಷ್ಣು ವಿಶಾಲ್ ,ವಿಕ್ರಾಂತ್ ಮುಂತಾದ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದು, ಸದ್ಯ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಸಿನಿಮಾ ಇದೇ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.