ಬೆಂಗಳೂರು : ನಗರ ಮುಖ್ಯಮಂತ್ರಿಗಳ ನವ ನಗರೋತ್ಥಾನ ಅಡಿಯಲ್ಲಿ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕರಿಸಂದ್ರ ವಾರ್ಡ್‍ನಲ್ಲಿ ಕಂದಾಯ ಸಚಿವ ಆರ್ ಅಶೋಕ ಅವರು ದಿ ಹೆಚ್ ಎನ್ ಅನಂತಕುಮಾರ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭೂಮಿ ಪೂಜೆ ನೆರವೇರಿಸಿದರು.
ಅತ್ಯಾಧುನಿಕ ಸೌಲಭ್ಯಗಳುಳ್ಳ ಆಸ್ಪತ್ರೆ ಇದಾಗಲಿದ್ದು, ಹಲವು ಸಮಸ್ಯೆಗಳಿಗೆ ಒಂದೇ ಸೂರಿನಡಿ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿದೆ. ಈ ಆಸ್ಪತ್ರೆಯಲ್ಲಿ 15 ಬೆಡ್‍ಗಳ ಡಯಾಲಿಸಿಸ್ ಕೇಂದ್ರ, ಅತೀ ಕಡಿಮೆ ಬೆಲೆಗೆ ಔಷಧಿ ನೀಡುವ ನಿಟ್ಟಿನಲ್ಲಿ ಜನೌಷಧಿ ಕೇಂದ್ರ, 30 ಹಾಸಿಗೆಗಳ ಹೆರಿಗೆ ಕೇಂದ್ರ ಮತ್ತು 30 ಹಾಸಿಗೆಗಳ ಮಕ್ಕಳ ಚಿಕಿತ್ಸಾ ಘಟಕ ಜೊತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರವು ಕೂಡಾ ಈ ಆಸ್ಪತ್ರೆ ಕಟ್ಟಡದಲ್ಲಿ ಸಿದ್ಧಗೊಳ್ಳಲಿದೆ. ಮೂರಂತಸ್ತಿನ ಈ ಆಸ್ಪತ್ರೆಯು ಅತ್ಯುತ್ತಮ ಗುಣಮಟ್ಟದ ಮೂಲ ಸೌಕರ್ಯಗಳನ್ನ ಹೊಂದಿರಲಿದೆ.
ಈ ಕುರಿತು ಮಾತನಾಡಿದ ಕಂದಾಯ ಸಚಿವ ಆರ್ ಅಶೋಕ,”ಈ ಭಾಗದ ಜನರಿಗೆ ಕೈಗೆಟಕುವ ದರದಲ್ಲಿ ಅತ್ಯುತ್ತಮ ಚಿಕಿತ್ಸೆ ದೊರೆಯಬೇಕೆಂಬ ಸದಾಶಯದೊಂದಿಗೆ ಈ ಆಸ್ಪತ್ರೆಯನ್ನ ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಇದೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಾಗಿದ್ದು, ಹಲವು ಸಮಸ್ಯೆಗಳಿಗೆ ಚಿಕಿತ್ಸೆ ದೊರೆಯಲಿದೆ. ನಮ್ಮ ಪಕ್ಷದ ಜನಪ್ರಿಯ ನಾಯಕರಾಗಿದ್ದ, ಈ ಭಾಗದ ಜನಾನುರಾಗಿ ಸಂಸದರೂ ಆಗಿದ್ದ ಮಾಜಿ ಕೇಂದ್ರ ಸಚಿವ ದಿ ಅನಂತಕುಮಾರ್ ಅವರ ಹೆಸರಿನಲ್ಲಿ ಈ ಆಸ್ಪತ್ರೆಯನ್ನು ಪ್ರಾರಂಭಿಸಲಾಗುತ್ತದೆ. ಇದು ಈ ಭಾಗದ ಜನರ ಪಾಲಿಗೆ ಸಂಜೀವಿನಿಯಾಗಲಿದೆ”, ಎಂದು ಹೇಳಿದರು.
ಇದನ್ನೂ ಓದಿ :ಕೋವಿಡ್ ಇಳಿಮುಖವಾದರೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಆಯೋಜನೆ ಸಾಧ್ಯ
ಆ ನಂತರದಲ್ಲಿ ಸಚಿವ ಅಶೋಕ ಅವರು ಪದ್ಮನಾಭನಗರ ವಿಧಾನಸಭಾ ಕ್ಷೇತ್ರದಲ್ಲಿ ನೂತನ ವಿವಿಧೋದ್ದೇಶ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಕಟ್ಟಡದಲ್ಲಿ ಬಾಲ ಭವನ, ಇ ಲೈಬ್ರರಿ, ಆರ್‍ಒ ವಾಟರ್ ಪ್ಲಾಂಟ್, ಹಾಪ್ ಕಾಮ್ಸ್ ಗಳು ಇಲ್ಲಿ ಆರಂಭಗೊಳ್ಳಲಿವೆ. ಜೊತೆಗೆ ಇದೇ ವಿಧಾನಸಭಾ ಕ್ಷೇತ್ರದ ಕಾವೇರಿ ವಾರ್ಡ್‍ನಲ್ಲಿ ಎಪಿಜೆ ಅಬ್ದುಲ್ ಕಲಾಂ ಉದ್ಯಾನವನಕ್ಕೂ ಭೂಮಿ ಪೂಜೆ ನೆರವೇರಿಸಿದರು.
ಒಟ್ಟು ರೂ.25 ಕೋಟಿ ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಕ್ಷೇತ್ರದಾದ್ಯಂತ ಹಮ್ಮಿಕೊಳ್ಳಲಾಗಿದ್ದು, ಬರುವ ದಿನಗಳಲ್ಲಿ ಪದ್ಮನಾಭನಗರ ಕ್ಷೇತ್ರವನ್ನು ರಾಜ್ಯದಲ್ಲಿಯೇ ಎಲ್ಲ ವಿಧದಲ್ಲೂ ಮಾದರಿ ಕ್ಷೇತ್ರವನ್ನಾಗಿ ಮಾಡುವ ಕನಸನ್ನು ಕಂದಾಯ ಸಚಿವ ಹಾಗೂ ಈ ಕ್ಷೇತ್ರದ ಶಾಸಕರಾದ ಆರ್ ಅಶೋಕ ಹೊಂದಿದ್ದಾರೆ.
ಈ ಸಂದರ್ಭದಲ್ಲಿ ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಯಶೋಧಾ ಲಕ್ಷ್ಮಿಕಾಂತ್ ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.