Advertisement

ವಿಶೇಷಾಧಿಕಾರಿ ಎಡವಟ್ಟು, ವಿದ್ಯಾರ್ಥಿಗಳಿಗೆ ಶಿಕ್ಷೆ

09:54 PM Jan 11, 2020 | Team Udayavani |

ಮಂಡ್ಯ: ವಿಶೇಷಾಧಿಕಾರಿಯಾಗಿದ್ದ ಡಾ. ಎಂ.ಎಸ್‌.ಮಹದೇವ ನಾಯ್ಕ ಮಾಡಿಟ್ಟುಹೋದ ಎಡವಟ್ಟಿನಿಂದ ಮಂಡ್ಯ ವಿಶ್ವವಿದ್ಯಾಲಯ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಾಗಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ. ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯ ಹಾದಿ ಹಿಡಿದಿದ್ದು, ಅದರ ಹಿಂದೆ ಅಕ್ರಮವಾಗಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ಇದ್ದಾರೆಯೇ? ಎಂಬ ಅನುಮಾನಗಳು ಮೂಡಿವೆ.

Advertisement

ವಿಶೇಷಾಧಿಕಾರಿಯಾಗಿ ನೇಮಕಗೊಂಡ ನಂತರದಲ್ಲಿ ಡಾ.ಎಂ.ಎಸ್‌.ಮಹದೇವನಾಯ್ಕ, ವಿಶ್ವವಿದ್ಯಾನಿಲಯದ ಪರಿನಿಯಮ ರಚನೆ, ಸಿಂಡಿಕೇಟ್‌, ಶೈಕ್ಷಣಿಕ ಮಂಡಳಿ ರಚನೆ, ವಿಶ್ವವಿದ್ಯಾಲಯದ ವ್ಯವಸ್ಥಿತ ರಚನೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಬದಲಾಗಿ ನಿಯಮಬಾಹಿರವಾಗಿ ಹೊಸ ಕೋರ್ಸ್‌ಗಳ ಆರಂಭ, ಅತಿಥಿ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ಪ್ರಭಾರ ಕುಲಸಚಿವರ ನೇಮಕ, ಪ್ರವೇಶಾತಿ ಶುಲ್ಕ ಹೆಚ್ಚಳದಂತಹ ವಿಶ್ವವಿದ್ಯಾಲಯದ ಕಾಯ್ದೆಗೆ ವಿರುದ್ಧವಾದ ಕ್ರಮಗಳನ್ನು ಕೈಗೊಂಡಿದ್ದರಿಂದ ವಿಶ್ವವಿದ್ಯಾಲಯದ ರಚನೆ ಪ್ರಕ್ರಿಯೆ ನಿಂತ ನೀರಾಗಿದೆ.

ಬಾರದ ಫ‌ಲಿತಾಂಶ: ಮಂಡ್ಯ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ಆರಂಭಗೊಂಡಿರುವ ಹೊಸ ಕೋರ್ಸ್‌ಗಳಿಗೆ 350 ಮಂದಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಇದೀಗ ಸಿ-1, ಸಿ-2 ಮತ್ತು ಸಿ-3 ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಬರೆದಿದ್ದಾರೆ. ಆದರೆ, ಫ‌ಲಿತಾಂಶ ಮಾತ್ರ ಇದುವರೆಗೂ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಿದ್ದಾರೆ. ಅಲ್ಲದೆ, ಮಂಡ್ಯ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಕೋರ್ಸ್‌ಗಳನ್ನು 2019-20ನೇ ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ದಡಿಯಲ್ಲಿಯೇ ಮುಂದುವರಿಸುವುದಾಗಿ ಆದೇಶದಲ್ಲಿ ತಿಳಿಸಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.

ಪರೀಕ್ಷಾ ಫ‌ಲಿತಾಂಶ ಬಾರದಿರುವುದು ಹಾಗೂ ಮಂಡ್ಯ ವಿಶ್ವವಿದ್ಯಾಲಯಕ್ಕೆ ನೇಮಕಗೊಂಡು ಮಹಾವಿದ್ಯಾಲಯದ ವಿದ್ಯಾರ್ಥಿಗಳಾಗಿ ಮುಂದುವರೆಯುತ್ತಿರುವ ಬಗ್ಗೆ ಗೊಂದಲಕ್ಕೊಳಗಾಗಿರುವ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಭವಿಷ್ಯ ಮಸುಕಾಗಬಹುದೆಂಬ ಆತಂಕದೊಂದಿಗೆ ಹೋರಾಟದ ಹಾದಿ ಹಿಡಿದಿದ್ದಾರೆ.

ಅಕ್ರಮವಾಗಿ ನೇಮಕಗೊಂಡವರ ಕೈವಾಡ?: ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ಹಿಂದೆ ವಿಶೇಷಾಧಿಕಾರಿಯಾಗಿದ್ದ ಡಾ.ಎಂ.ಎಸ್‌.ಮಹದೇವನಾಯ್ಕ ಅವರಿಂದ ಅಕ್ರಮವಾಗಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ ಕೈವಾಡವಿರುವ ಬಗ್ಗೆ ಆರೋಪಗಳು ಕೇಳಿಬರುತ್ತಿವೆ.

Advertisement

ಡಾ.ಮಹದೇವನಾಯ್ಕ ಅವರನ್ನು ಸರ್ಕಾರ ಡಿ.24ರಂದೇ ವಿಶೇಷಾಧಿಕಾರಿ ಹುದ್ದೆಯಿಂದ ವಜಾಗೊಳಿಸಿದೆ. ಅದಕ್ಕೂ ಮುಂಚಿತವಾಗಿ ಅಕ್ರಮವಾಗಿ ನೇಮಕಗೊಂಡವರ ಪೈಕಿ 15 ಮಂದಿ ಅತಿಥಿ ಉಪನ್ಯಾಸಕರನ್ನು ವಜಾ ಮಾಡಿ ಆದೇಶ ಹೊರಡಿಸಿದೆ. ಇವರೆಲ್ಲರೂ ಸೇರಿಕೊಂಡು ವಿದ್ಯಾರ್ಥಿಗಳನ್ನು ಪ್ರತಿಭಟನೆಗಿಳಿಯುವಂತೆ ಪ್ರೇರೇಪಿಸುತ್ತಿದ್ದಾರೆ ಎಂಬ ಮಾತುಗಳು ಮಹಾವಿದ್ಯಾಲಯದ ವಲಯದಲ್ಲಿ ಕೇಳಿಬರುತ್ತಿವೆ.

ಪ್ರಾಂಶುಪಾಲರಿಗೆ ಹೆಚ್ಚುವರಿ ಅಧಿಕಾರ: ಮಂಡ್ಯ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಹುದ್ದೆಯಿಂದ ಡಾ.ಎಂ.ಎಸ್‌.ಮಹದೇವನಾಯ್ಕ ಅವರನ್ನು ಬಿಡುಗಡೆ ಮಾಡಿದ ಬಳಿಕ ಪ್ರಾಂಶುಪಾಲರಿ ಮಹಾಲಿಂಗು ಅವರಿಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಹೆಚ್ಚಿನ ಅಧಿಕಾರ ನೀಡಿದ್ದಾರೆ. ವಿಶ್ವವಿದ್ಯಾಲಯದ ಪರಿನಿಯಮ ರಚನೆಯಿಂದ ಆರಂಭವಾಗಿ ವಿದ್ಯಾಲಯ ರಚನೆಯವರೆಗೂ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ. ಅದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿಯೂ ಆಯುಕ್ತರು ತಿಳಿಸಿದ್ದಾರೆ.

ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವವಿದ್ಯಾಲಯ ರಚನೆ ಪ್ರಕ್ರಿಯೆಯನ್ನು ಮೂರ್‍ನಾಲ್ಕು ತಿಂಗಳೊಳಗೆ ಮುಗಿಸುವ ಎಲ್ಲ ರೀತಿಯ ಸಾಧ್ಯತೆಗಳಿವೆ. ವಿಶೇಷಾಧಿಕಾರಿ ಡಾ.ಮಹದೇವನಾಯ್ಕ ಮಾಡಿದ ಅಕ್ರಮಗಳ ಸರಮಾಲೆಯಿಂದ ಕಳೆದ ಏಳೆಂಟು ತಿಂಗಳಿಂದಲೂ ವಿವಿ ರಚನೆ ಪ್ರಕ್ರಿಯೆ ನಿಂತಲ್ಲಿಯೇ ನಿಂತಿದೆ.

ಬೀರುವಿನಲ್ಲಿ ಅಕ್ರಮ ನೇಮಕಾತಿ ಕಡತಗಳು: ಡಾ.ಮಹದೇವನಾಯ್ಕ ಕರ್ತವ್ಯದಿಂದ ಬಿಡುಗಡೆಯಾಗುವ ಸಮಯದಲ್ಲಿ ಅಕ್ರಮವಾಗಿ ನೇಮಕಗೊಂಡಿರುವ ಅತಿಥಿ ಉಪನ್ಯಾಸಕರು, ಬೋಧಕ-ಬೋಧಕೇತರ ಸಿಬ್ಬಂದಿ, ಅವರಿಗೆ ನಿಗದಿಪಡಿಸಿರುವ ವೇತನದ ಯಾವೊಂದು ದಾಖಲೆಗಳ ಕಡತವನ್ನು ಪ್ರಾಂಶುಪಾಲರಿಗೆ ವಹಿಸಿಕೊಡದೆ ಹೋಗಿದ್ದಾರೆ.

ಹೀಗಾಗಿ ಸರ್ಕಾರ ಅಕ್ರಮವಾಗಿ ನೇಮಕಗೊಂಡಿರುವ 15 ಮಂದಿ ಅತಿಥಿ ಉಪನ್ಯಾಸಕರನ್ನು ವಜಾಗೊಳಿಸಿ ಹೊರಡಿಸಿರುವ ಆದೇಶ ಇನ್ನೂ ಜಾರಿಯಾಗಿಲ್ಲ. ಅವರಿನ್ನೂ ಕರ್ತವ್ಯವದಲ್ಲೇ ಮುಂದುವರಿದಿದ್ದಾರೆ. ಈ ದಾಖಲೆಗಳನ್ನು ಕಾಲೇಜಿನ ಬಿರುವಿನಲ್ಲಿಟ್ಟು ಬೀಗ ಹಾಕಿಕೊಂಡು ಹೋಗಿದ್ದಾರೆ ಎಂದು ಹೇಳಲಾಗಿದೆ. ಪ್ರಾಂಶುಪಾಲ ಮಹಾಲಿಂಗು ಅವರು ಅಕ್ರಮವಾಗಿ ನೇಮಕಗೊಂಡಿರುವವರ ವಿರುದ್ಧ ಏನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಸಲಹೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.

ವಿದ್ಯಾರ್ಥಿಗಳು ಆತಂಕಪಡಬೇಕಿಲ್ಲ: ಮಂಡ್ಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸರ್ಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದರೂ ಶೈಕ್ಷಣಿಕ ಭವಿಷ್ಯಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಪರೀಕ್ಷೆ ಫ‌ಲಿತಾಂಶವೂ ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ. ಈ ಬಗ್ಗೆ ಸರ್ಕಾರದ ಗಮನಸೆಳೆಯಲಾಗಿದ್ದು, ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗುವುದು ಬೇಡ. ವಿದ್ಯಾರ್ಥಿಗಳನ್ನು ರಕ್ಷಣೆ ಮಾಡುವ ಹೊಣೆ ನಮ್ಮದು. ವಿಶ್ವವಿದ್ಯಾಲಯದ ರಚನೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಸರ್ಕಾರಿ ಮಹಾ ವಿದ್ಯಾಲಯ ಪ್ರಾಂಶುಪಾಲ ಮಹಾಲಿಂಗು ಭರವಸೆ ನೀಡಿದ್ದಾರೆ.

ಪ್ರಾಂಶುಪಾಲರ ಹಿಂದೇಟು: ಬೀರುವಿನಲ್ಲಿರುವ ಕಡತಗಳನ್ನು ಹೊರತೆಗೆಯುವುದಕ್ಕೆ ಪರ್ಯಾಯ ಮಾರ್ಗಗಳು ಇದ್ದರೂ, ಪ್ರಾಂಶುಪಾಲರು ಅದನ್ನು ಅನುಸರಿಸುತ್ತಿಲ್ಲ. ಪೊಲೀಸ್‌ ಭದ್ರತೆಯಲ್ಲಿ ಬಿರುವಿನ ಬೀಗ ಒಡೆದು ವೀಡಿಯೋ ಚಿತ್ರೀಕರಣ ಮಾಡಿಸಿ, ಅಕ್ರಮವಾಗಿ ನೇಮಕಗೊಂಡಿರುವವರ ವಿರುದ್ಧ ಸರ್ಕಾರಕ್ಕೆ ವರದಿ ಮಾಡಲು ಅವಕಾಶವಿದ್ದರೂ ಪ್ರಾಂಶುಪಾಲರಿಗೆ ಅವಕಾಶವಿದ್ದರೂ ಅವರು ಆ ಕಾರ್ಯಕ್ಕೆ ಮುಂದಾಗದಿರುವ ಹಿಂದಿನ ಗುಟ್ಟೇನು ಎನ್ನುವುದು ತಿಳಿಯದಾಗಿದೆ.

ಹೆಚ್ಚುವರಿ ಶುಲ್ಕ ವಾಪಸ್‌ಗೆ ಆದೇಶ: 2019-20 ಸಾಲಿನ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ 7,085 ರೂ. ಹಾಗೂ ಸಾಮಾನ್ಯ ವಿದ್ಯಾರ್ಥಿಗಳಿಗೆ 15,885 ರೂ. ಶುಲ್ಕ ನೀತಿಯನ್ನು ವಿಶೇಷಾಧಿಕಾರಿಯಾಗಿದ್ದ ಡಾ. ಮಹದೇವನಾಯ್ಕ ಜಾರಿಗೊಳಿಸಿದ್ದರು. ಇದು ಸರ್ಕಾರದ ಗಮನಕ್ಕೆ ಬಂದಿದ್ದು, ವಿದ್ಯಾರ್ಥಿಗಳಿಂದ ಪಡೆದಿರುವ ಹೆಚ್ಚುವರಿ ಶುಲ್ಕ ವಾಪಸ್‌ ನೀಡುವಂತೆಯೂ ಸರ್ಕಾರ ಆದೇಶ ಹೊರಡಿಸಿದೆ. ಅದನ್ನು ವಾಪಸ್‌ ಮಾಡುವ ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಪ್ರಾಂಶುಪಾಲ ಮಹಾಲಿಂಗು ತಿಳಿಸಿದರು.

ನಾವು ಪರೀಕ್ಷೆ ಬರೆಯೋಲ್ಲ: ಒಂದು ಸೆಮಿಸ್ಟರ್‌ ಪರೀಕ್ಷೆಯನ್ನು ವಿವಿ ನಿಯಮದಡಿ ಬರೆದಿದ್ದೇವೆ. ಈಗ ಸ್ವಾಯತ್ತ ವಿಶ್ವವಿದ್ಯಾಲಯದಡಿ ಪರೀಕ್ಷೆ ಬರೆಯಿರಿ ಎಂದು ಆಡಳಿತ ವರ್ಗ ವಿದ್ಯಾರ್ಥಿಗಳನ್ನು ಒತ್ತಾಯಿಸುತ್ತಿದ್ದಾರೆ. ನಾವು ಸ್ವಾಯತ್ತ ವಿದ್ಯಾಲಯದಡಿ ಪರೀಕ್ಷೆ ಬರೆಯುವುದಿಲ್ಲ. ನಾವು ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಿದ್ದೇವೆ. ವಿವಿ ಪರೀಕ್ಷೆ ಬರೆಯಲು ಅವಕಾಶ ನೀಡದಿದ್ದರೆ ಪರೀಕ್ಷೆಯನ್ನೇ ಬಹಿಷ್ಕರಿಸುತ್ತೇವೆ ಎಂದು ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.

ಕಾಲೇಜು ಬೆಳೆದುಬಂದ ಹಾದಿ..!: 1948ರಲ್ಲಿ 33 ಎಕರೆ ಪ್ರದೇಶದಲ್ಲಿ ಮಂಡ್ಯದ ಪುರಸಭೆ ಮಾಜಿ ಕಟ್ಟಡದಲ್ಲಿ ಇಂಟರ್‌ ಮೀಡಿಯಟ್‌ ಕಾಲೇಜಾಗಿ ಈ ಶೈಕ್ಷಣಿಕ ಸಂಸ್ಥೆ ಆರಂಭಗೊಂಡಿತು. 1960ರಲ್ಲಿ ಪದವಿ ಕಾಲೇಜಾಗಿ ಬದಲಾಯಿತು. 1990ರಲ್ಲಿ ಮೈಸೂರು ವಿವಿ ಹಾಗೂ ಯುಜಿಸಿಯ ಶಾಶ್ವತ ಸಂಯೋಜನೆಗೆ ಒಳಪಟ್ಟಿತು. 2003ರಲ್ಲಿ ನ್ಯಾಕ್‌(ಎನ್‌ಎಎಸಿ)ನಿಂದ ಮೊದಲ ಬಾರಿಗೆ ಬಿ+ ಶ್ರೇಣಿಯ ಮಾನ್ಯತೆ ಪಡೆಯಿತು.

2005ರಲ್ಲಿ ಯುಜಿಸಿ ಹಾಗೂ ಮೈಸೂರು ವಿವಿಯಿಂದ ಸ್ವಾಯತ್ತತೆ ಪಡೆದುಕೊಂಡಿತು. 2010ರಲ್ಲಿ ಎರಡನೇ ಬಾರಿಗೆ ನ್ಯಾಕ್‌ನಿಂದ ಎ- ಗ್ರೇಡ್‌ ಶ್ರೇಣಿಯೊಂದಿಗೆ 3.11 ಸಿಜಿಪಿಎ ಮಾನ್ಯತೆ ಪಡೆಯಿತು. 2012ರಲ್ಲಿ ಯುಜಿಸಿಯಿಂದ ಮತ್ತೆ 5 ವರ್ಷಗಳ ಅವಧಿಗೆ ಸ್ವಾಯತ್ತತೆ ವಿಸ್ತರಣೆಯ ಅವಕಾಶ ಪಡೆದಿತ್ತು. ಪುನಃ 2018ರಲ್ಲಿ ಯುಜಿಸಿಯಿಂದ ಮುಂದಿನ 5 ವರ್ಷಗಳಿಗೆ ಸ್ವಾಯತ್ತತೆ ವಿಸ್ತರಿಸಿಕೊಂಡಿದೆ.

* ಮಂಡ್ಯ ಮಂಜುನಾಥ್‌

Advertisement

Udayavani is now on Telegram. Click here to join our channel and stay updated with the latest news.

Next