Advertisement

ಖೈರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

04:02 PM Dec 10, 2019 | Team Udayavani |

ಕುಮಟಾ: ತಾಲೂಕಿನ ಖೈರೆಯಲ್ಲಿ ಸೂಪರ್‌ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನಿವೇಶನ ಗುರುತಿಸಲಾಗಿದ್ದು, ಈ ನಿಮಿತ್ತ ಡಿ.21 ರಂದು ಮಧ್ಯಾಹ್ನ 11ಕ್ಕೆ ಪಟ್ಟಣದ ಹವ್ಯಕ ಸಭಾಭವನಕ್ಕೆ ಆಗಮಿಸಲಿರುವ ಪ್ರಖ್ಯಾತ ಉದ್ಯಮಿ ಡಾ| ಬಿ.ಆರ್‌. ಶೆಟ್ಟಿಯವರು ಆಸ್ಪತ್ರೆ ನಿರ್ಮಾಣದ ಅಧಿಕೃತ ಘೋಷಣೆ ನೀಡಲಿದ್ದಾರೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

Advertisement

ಸೋಮವಾರ ವೈಭವ ಸಭಾಭವನದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಹೋರಾಟ ಸಮಿತಿಯಡಿ ನಡೆಸಿದ ಸಾರ್ವಜನಿಕರ ಪೂರ್ವಭಾವಿ ಸಭೆಯಲ್ಲಿ ಈ ವಿಷಯವನ್ನು ಅವರು ಪ್ರಸ್ತಾಪಿಸಿದರು. ಖೈರೆಯಲ್ಲಿ ಹತ್ತು ಎಕರೆಗೂ ಹೆಚ್ಚು ಖಾಸಗಿಯವರ ಭೂಮಿ ಇದೆ. ಈ ಭೂಮಿಯಲ್ಲಿ 5 ಕುಟುಂಬಗಳು ಅತಿಕ್ರಮಣವಾಗಿ ವಾಸಿಸುತ್ತಿವೆ. ಅವರಿಗೆ ಮನೆಗಳನ್ನು ತೆರವುಗೊಳಿಸುವಂತೆ ಅಧಿಕೃತ ನೋಟಿಸು ನೀಡಲಾಗಿದೆ. ಈ ಕುಟುಂಬಗಳಿಗೆ ಪುನರ್ವಸತಿಕಲ್ಪಿಸಿಕೊಡಲಾಗುತ್ತದೆ. ಬಿ.ಆರ್‌. ಶೆಟ್ಟಿಯವರ ತಂಡ ಈ ಕುಟುಂಬದ ಸದಸ್ಯರಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉದ್ಯೋಗ ನೀಡುವ ಬಗ್ಗೆ ಭರವಸೆ ನೀಡಲಾಗಿದೆ. ಈ ಎಲ್ಲ ಅತಿಕ್ರಮಣದಾರ ಕುಟುಂಬಗಳು ಸಧ್ಯದಲ್ಲೇ ಆಸ್ಪತ್ರೆ ನಿರ್ಮಾಣದ ನಿವೇಶನ ಬಿಟ್ಟು ಬೇರೆಡೆ ಸ್ಥಳಾಂತರಗೊಳ್ಳಲಿದ್ದಾರೆ. ಒಟ್ಟಾರೆ ಆಸ್ಪತ್ರೆ ನಿರ್ಮಾಣಕ್ಕೆ ಇರುವ ಎಲ್ಲ ಅಡೆತಡೆಗಳನ್ನು ಸಂಪೂರ್ಣವಾಗಿ ನಿವಾರಿಸಿ ಕೊಡಲಾಗುತ್ತಿದೆ. ಮುಖ್ಯವಾಗಿ ನಮಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಆಗಲೇಬೇಕಿದೆ ಎಂದರು.

ಹೋರಾಟ ಸಮಿತಿ ಅಧ್ಯಕ್ಷ ಆರ್‌.ಜಿ. ನಾಯ್ಕ ಮಾತನಾಡಿ, ಆಗಮಿಸುತ್ತಿರುವ ಡಾ| ಬಿ.ಆರ್‌. ಶೆಟ್ಟರನ್ನು ಡಿ.21 ರಂದು ಹಾರ್ದಿಕವಾಗಿ ಸ್ವಾಗತಿಸುವ ಹಾಗೂ ಅವರಿಗೆ ಎಲ್ಲರ ಒಕ್ಕೊರಲ ಸಹಕಾರ ಸೂಚಿಸುವ ನಿಟ್ಟಿನಲ್ಲಿ ಅಂದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕಿದೆ. ಎಲ್ಲ ಹಂತದ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳವರು, ಯುವಕರು, ಹಿರಿಯರು ಸೇರಿದಂತೆ ಎಲ್ಲರೂ ಬರಬೇಕು ಎಂದು ವಿನಂತಿಸಿಕೊಂಡರು.

ಡಾ| ಬಿ.ಆರ್‌.ಶೆಟ್ಟರ ಸ್ವಾಗತ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಲಾಯಿತು. ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ ಇದ್ದರು. ಹರೀಶ ಶೆಟ್ಟಿ, ಹೊನ್ನಪ್ಪ ನಾಯಕ, ವಿ.ಎಲ್‌.ನಾಯ್ಕ, ಮೋಂಟಿ ಫರ್ನಾಂಡಿಸ್‌, ಎಂ.ಎಂ. ಹೆಗಡೆ, ಅಶೋಕ ಗೌಡ, ಶ್ರೀಧರ ಗೌಡ, ಗಜು ನಾಯ್ಕ, ನಾಗೇಶ ನಾಯ್ಕ, ಗಜು ಪೈ, ಜಗದೀಶ ನಾಯ್ಕ, ಎಂ.ಎಂ.ಹೆಗಡೆ, ಹೇಮಂತಕುಮಾರ ಗಾಂವಕರ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next