Advertisement

ಬಸವೇಶ್ವರ ಸಂಘದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ

11:42 AM Jan 23, 2019 | |

ಬಾಗಲಕೋಟೆ: ಉತ್ತರ ಕರ್ನಾಟಕದ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿರುವ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ, ಸಾರ್ವಜನಿಕರ ಸೇವೆಗೆ ಮತ್ತೂಂದು ಹೆಜ್ಜೆ ಇಡುತ್ತಿದೆ. 100 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 2020ರ ಹೊಸ ವರ್ಷಕ್ಕೆ ಸಾರ್ವಜನಿಕರ ಸೇವೆಗೆ ಒದಗಿಸಲಾಗುವುದು ಎಂದು ಸಂಘದ ಕಾರ್ಯಾಧ್ಯಕ್ಷ, ಶಾಸಕ ಡಾ| ವೀರಣ್ಣ ಚರಂತಿಮಠ ಹೇಳಿದರು.

Advertisement

ಬಿವಿವಿ ಸಂಘದ ಕುಮಾರೇಶ್ವರ ಆಸ್ಪತ್ರೆಯಲ್ಲಿ ಕಾರ್ಡಿಯಾಲಜಿ ಘಟಕ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ಜನತೆಗೆ ಗುಣಮಟ್ಟದ ವೈದ್ಯಕೀಯ ಸೇವೆ ಸ್ಥಳೀಯವಾಗಿ ಒದಗಿಸುವ ಉದ್ದೇಶದೊಂದಿಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಕಳೆದ 2018ರ ನವೆಂಬರ್‌ನಿಂದ ಚಾಲನೆ ನೀಡಲಾಗಿದೆ. 3 ಲಕ್ಷ ಚದರ ಅಡಿ ಜಾಗೆಯಲ್ಲಿ 100 ಕೋಟಿ ವೆಚ್ಚದಲ್ಲಿ ನಾಲ್ಕು ಮಹಡಿ ಆಸ್ಪತ್ರೆ ನಿರ್ಮಾಣ ಮಾಡುತ್ತಿದ್ದು, ಆಸ್ಪತ್ರೆಯಲ್ಲಿ 8 ಶಸ್ತ್ರ ಚಿಕಿತ್ಸಾ ಕೊಠಡಿ, 365 ಹಾಸಿಗೆ, 88 ತೀವ್ರ ನಿಗಾ ಘಟಕ, 27 ವಿಶೇಷ ಕೊಠಡಿ ಇರಲಿವೆ ಎಂದರು.

ವೈದ್ಯಕೀಯ ರಂಗದ ಎಲ್ಲ ಸುಸಜ್ಜಿತ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ಕಟ್ಟಡ 15 ತಿಂಗಳಲ್ಲಿ ಪೂರ್ಣಗೊಳಿಸಿ, ಸಾರ್ವಜನಿಕರ ಸೇವೆಗೆ ಒದಗಿಸುವ ದೃಷ್ಟಿಯಿಂದ ಕಾಮಾಗಾರಿ ತೀವ್ರ ರೀತಿಯಲ್ಲಿ ಕೈಗೊಂಡಿದ್ದು, 2020ರ ಹೊಸ ವರ್ಷಕ್ಕೆ ಜನರ ಸೇವೆಗೆ ಲಭ್ಯವಾಗಲಿದೆ ಎಂದು ತಿಳಿಸಿದರು.

3 ಸಾವಿರಕ್ಕೂ ಹೆಚ್ಚು ಉಚಿತ ಶಸ್ತ್ರ ಚಿಕಿತ್ಸೆ: ಸಂಘ ಸ್ಥಾಪನೆಗೊಂಡು 2018ಕ್ಕೆ 111 ವರ್ಷ ಸಂದಿದ್ದವು. ಈ ಹಿನ್ನೆಲೆಯಲ್ಲಿ ರಾಮನಗರ (ಬಿಡದಿ)ದ ಅಮೃತಾ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ನಡೆಸಿದ 111 ವರ್ಷಾಚರಣೆ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಸಂಘದಿಂದ ಇಡೀ ವರ್ಷ ಕೈಗೊಳ್ಳುವ ಸಾಮಾಜಿಕ ಸೇವೆಯ ವಿವರ ನೀಡಲಾಗಿತ್ತು. ಒಂದು ವರ್ಷದಲ್ಲಿ ಹಾನಗಲ್‌ ಕುಮಾರೇಶ್ವರ ಆಸ್ಪತ್ರೆಯಲ್ಲಿ 3333 ವಿವಿಧ ಶಸ್ತ್ರ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ಮಾಡುವ ಸಂಕಲ್ಪ ಮಾಡಲಾಗಿತ್ತು. ಆದರೆ, ನಾವು ಹಾಕಿಕೊಂಡ ಗುರಿಗಿಂತಲೂ 3385 ಶಸ್ತ್ರ ಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ ರೋಗಿಗಳೇ ಈ ಸೇವೆ ಒದಗಿಸಿದ್ದು, ಸಂಘದ ಹೆಮ್ಮೆಯ ವಿಷಯ ಎಂದರು.

Advertisement

ಎಂಬಿಬಿಎಸ್‌ ಸೀಟು 250ಕ್ಕೆ ಹೆಚ್ಚಳ: ಸಂಘದ ಎಸ್‌. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನಲ್ಲಿ ಪ್ರತಿವರ್ಷ 150 ಎಂಬಿಬಿಎಸ್‌ ಕೋರ್ಸ್‌ಗೆ ಮತ್ತು 96 ಪಿಜಿ ಕೋರ್ಸ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ಪ್ರಸಕ್ತ ವರ್ಷದಿಂದ ಪಿಜಿ ವಿದ್ಯಾರ್ಥಿಗಳ ಸಂಖ್ಯೆಯನ್ನು 100ಕ್ಕಿಂತ ಹೆಚ್ಚಿನ ಸೀಟುಗಳಿಗೆ ಹೆಚ್ಚಿಸುವ ಪ್ರಕ್ರಿಯೆ ನಡೆದಿದೆ. ಅಲ್ಲದೆ ಎಂಬಿಬಿಎಸ್‌ ಕೋಸ್‌ಗೆ 250 ಸೀಟು ಹೆಚ್ಚಿಸಲು ಯೋಜನೆ ಹಾಕಿಕೊಳ್ಳಲಾಗಿದೆ. ಈ ಸಂಬಂಧ ಕಟ್ಟಡ ವಿಸ್ತರಣೆ, ಪೀಠೊಪಕರಣ ಖರೀದಿ ಕಾರ್ಯ ಪೂರ್ಣಗೊಳಿಸಲಾಗಿದೆ. ಕಾಲೇಜಿನಲ್ಲಿ ವಿವಿಧ ವೈದ್ಯಕೀಯ ವಿಷಯಗಳ ಪ್ಯಾರಾ ಮೆಡಿಕಲ್‌ ಕೋರ್ಸ್‌ ಕೂಡ ನಡೆಸಲಾಗುತ್ತಿದೆ ಎಂದು ವಿವರಿಸಿದರು.

ಶಸ್ತ್ರ ಚಿಕಿತ್ಸೆ ರಾಷ್ಟ್ರ ಸಮ್ಮೇಳನ: ಕಳೆದ ವರ್ಷ ವೈದ್ಯಕೀಯ ಕಾಲೇಜಿನಲ್ಲಿ ಸ್ತ್ರಿರೋಗ ಮತ್ತು ಪ್ರಸೂತಿ ವಿಷಯದ ಕುರಿತು 29ನೇ ರಾಜ್ಯ ಮಟ್ಟದ ಸಮ್ಮೇಳನ ನಡೆಸಲಾಗಿದೆ. ಈ ಸಮ್ಮೇಳನದಲ್ಲಿ 8 ಜನ ವಿದೇಶಿ ತಜ್ಞ ವೈದ್ಯರು ಹಾಗೂ ದೇಶದ ವಿವಿಧ ರಾಜ್ಯಗಳ 1 ಸಾವಿರಕ್ಕೂ ಹೆಚ್ಚು ಪ್ರಸೂತಿ ತಜ್ಞರು ಭಾಗವಹಿಸಿದ್ದರು. ಬರುವ ಸೆಪ್ಟೆಂಬರ್‌ನಲ್ಲಿ ಪೆಥಾಲಜಿ (ರೋಗ ಪತ್ತೆ ಶಾಸ್ತ್ರ) ಹಾಗೂ ನವೆಂಬರ್‌ನಲ್ಲಿ ಶಸ್ತ್ರ ಚಿಕಿತ್ಸೆ ಕುರಿತು ರಾಷ್ಟ್ರ ಮಟ್ಟದ ಸಮ್ಮೇಳನ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ರಾಷ್ಟ್ರ ಮಟ್ಟದ ಶಸ್ತ್ರ ಚಿಕಿತ್ಸೆ ಸಮ್ಮೇಳನಕ್ಕೆ ಪದ್ಮಶ್ರೀ ಮತ್ತು ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಡಾ| ಪ್ರಕಾಶ ಆಮ್ಟೆ ಅವರನ್ನು ಆಹ್ವಾನಿಸಲಾಗುವುದು ಎಂದರು.

ಬಿವಿವಿ ಸಂಘದ ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ, ಸಂಘದ ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಎಸ್‌. ನಿಜಲಿಂಗಪ್ಪ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ ಡಾ| ಅಶೋಕ ಮಲ್ಲಾಪುರ ಉಪಸ್ಥಿತರಿದ್ದರು.

ಉತ್ತರ ಕರ್ನಾಟಕದ ಜನರಿಗೆ ಸ್ಥಳೀಯವಾಗಿ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಸಂಘದಿಂದ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ 100 ಕೋಟಿ ಖರ್ಚು ಮಾಡುತ್ತಿದ್ದು, 2020ರ ಜನವರಿ ವೇಳೆಗೆ ಸೇವೆಗೆ ಲಭ್ಯವಾಗಲಿದೆ.
•ಡಾ| ವೀರಣ್ಣ ಚರಂತಿಮಠ,
ಶಾಸಕ,ಬಿವಿವಿ ಸಂಘದ ಕಾರ್ಯಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next