ಹೊನ್ನಾವರ: ಜಿಲ್ಲೆಯಲ್ಲಿ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯ ನಿರ್ಮಾಣಕ್ಕೆ ಸಂಬಂಧಿಸಿ ತಿಂಗಳ ಅಂತ್ಯದೊಳಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದರು.
ಇತ್ತಿಚೆಗೆ ಶಿರೂರು ಟೋಲ್ ಗೇಟ್ ಬಳಿ ಆ್ಯಂಬುಲೆನ್ಸ್ ಅಪಘಾತದಲ್ಲಿ ಮೃತಪಟ್ಟ ಹಾಡಗೇರಿ ಮತ್ತು ಬಳ್ಕೂರಿನ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿ, ಮಕ್ಕಳೊಂದಿಗೆ ಚರ್ಚೆ ನಡೆಸಿ ಧೈರ್ಯ ತುಂಬಿ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಆಸ್ಪತ್ರೆಗೆ ಕರೆದೊಯ್ಯುವಾಗ ಈ ಘಟನೆ ನಡೆದಿರುವುದು ದುರಂತ ಹಾಗೂ ನೋವಿನ ಸಂಗತಿ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿಯವರೊಂದಿಗೆ ಚರ್ಚೆ ನಡೆದಿದೆ. ಜಿಲ್ಲೆಯ ಹೃದಯ ಭಾಗವಾಗಿರುವ ಕುಮಟಾ ದಲ್ಲಿ 15ರಿಂದ 20 ಎಕರೆ ಜಾಗ ಕಾಯ್ದಿರಿಸಲಾಗಿದೆ. ತಿಂಗಳಾಂತ್ಯದಲ್ಲಿ ಜಿಲ್ಲೆಯ ಶಾಸಕರು, ಸಚಿವರೊಂದಿಗೆ ಮುಖ್ಯಮಂತ್ರಿಗಳು ಸಭೆ ನಡೆಸಿದ ಬಳಿಕ ತಿರ್ಮಾನ ಪ್ರಕಟಿಸಲಾಗುವುದು. ಸರ್ಕಾರಿ ಅಥವಾ ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆಯೆ ಎನ್ನುವುದು ಆ ಬಳಿಕ ನಿರ್ಧಾರವಾಗಲಿದೆ ಎಂದರು.
ಆ್ಯಂಬುಲೆನ್ಸ್ ದುರ್ಘಟನೆ ವಿಶೇಷ ಪ್ರಕರಣ ಎಂದು ಪರಿಗಣಿಸಿ ಶಾಸಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿಶೇಷ ಪರಿಹಾರಧನ ನೀಡುವಂತೆ ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಮರಣದ ದಾಖಲೆ ವಿವಿಧ ದಾಖಲಾತಿ ಸಮಸ್ಯೆಯ ಬಗ್ಗೆ ಸ್ಥಳೀಯರು ಹೇಳಿದಾಗ ಶಾಸಕ ಸುನೀಲ ನಾಯ್ಕ ಅಧಿಕಾರಿಗಳೊಂದಿಗೆ ಮಾತನಾಡಿ ಸಂಬಂಧಿಸಿದ ಎಲ್ಲಾ ದಾಖಲೆ ಒದಗಿಸುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್, ತಹಶೀಲ್ದಾರ ನಾಗರಾಜ ನಾಯ್ಕಡ್, ಸಿಪಿಐ ಶ್ರೀಧರ ಎಸ್.ಆರ್., ಗ್ರಾ.ಪಂ. ಅಧ್ಯಕ್ಷ ಮಂಜುನಾಥ ನಾಯ್ಕ, ವಿಶ್ವೇಶ್ವರ ಹೆಗಡೆ, ಸ್ಥಳೀಯರಾದ, ಆರ್.ಪಿ. ನಾಯ್ಕ, ಹರಿಯಪ್ಪ ನಾಯ್ಕ, ಕಮಲಾಕರ ಆಚಾರಿ ಮೊದಲಾದವರು ಉಪಸ್ಥಿತರಿದ್ದರು.