Advertisement

Super-6 : ಜಿಂಬಾಬ್ವೆಗೆ 14 ರನ್‌ ಜಯ

10:46 PM Jun 29, 2023 | Team Udayavani |

ಬುಲವಾಯೊ: ಅತ್ಯಂತ ರೋಚಕವಾಗಿ ಸಾಗಿದ ವಿಶ್ವಕಪ್‌ ಕ್ರಿಕೆಟ್‌ ಅರ್ಹತಾ ಪಂದ್ಯಾವಳಿಯ ಮೊದಲ ಸೂಪರ್‌-6 ಪಂದ್ಯದಲ್ಲಿ ಒಮಾನ್‌ ವಿರುದ್ಧ ಆತಿಥೇಯ ಜಿಂಬಾಬ್ವೆ 14 ರನ್ನುಗಳ ಜಯ ಸಾಧಿಸಿದೆ. ಅಂಕವನ್ನು 6ಕ್ಕೆ ಏರಿಸಿಕೊಂಡು ಅಗ್ರಸ್ಥಾನಕ್ಕೆ ನೆಗೆದಿದೆ.

Advertisement

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಜಿಂಬಾಬ್ವೆ 7 ವಿಕೆಟ್‌ ನಷ್ಟಕ್ಕೆ 332 ರನ್‌ ಪೇರಿಸಿದರೆ, ಬೆನ್ನಟ್ಟಿಕೊಂಡು ಬಂದ ಒಮಾನ್‌ 9 ವಿಕೆಟಿಗೆ 318 ರನ್‌ ಬಾರಿಸಿ ವೀರೋಚಿತ ಸೋಲನುಭವಿಸಿತು.

ಎರಡೂ ತಂಡಗಳ ಸ್ಕೋರ್‌ಬೋರ್ಡ್‌ ಶತಕದೊಂದಿಗೆ ಅಲಂಕೃತಗೊಂಡದ್ದು ಈ ಪಂದ್ಯದ ವಿಶೇಷ. ಜಿಂಬಾಬ್ವೆ ಪರ ಸೀನ್‌ ವಿಲಿಯಮ್ಸ್‌ 142 ರನ್‌ ಬಾರಿಸಿದರೆ, ಒಮಾನ್‌ ತಂಡದ ಗುಜರಾತ್‌ ಮೂಲದ ಆರಂಭಕಾರ ಕಶ್ಯಪ್‌ ಪ್ರಜಾಪತಿ 103 ರನ್‌ ಹೊಡೆದರು.

ಪ್ರಚಂಡ ಫಾರ್ಮ್ನಲ್ಲಿರುವ ಸೀನ್‌ ವಿಲಿಯಮ್ಸನ್‌ 103 ಎಸೆತಗಳಿಂದ ತಮ್ಮ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ಕಟ್ಟಿದರು. 14 ಬೌಂಡರಿ ಹಾಗೂ 3 ಸಿಕ್ಸರ್‌ ಸಿಡಿಸಿ ತವರಿನ ಅಭಿಮಾನಿಗಳನ್ನು ರಂಜಿಸಿದರು. ಇದು ಈ ಕೂಟದಲ್ಲಿ ವಿಲಿಯಮ್ಸ್‌ ಬಾರಿಸಿದ 3ನೇ ಶತಕ. ಸಿಕಂದರ್‌ ರಝ 42, ಲ್ಯೂಕ್‌ ಜೊಂಗ್ವೆ ಅಜೇಯ 43 ರನ್‌ ಹೊಡೆದರು. 79ಕ್ಕೆ 4 ವಿಕೆಟ್‌ ಕಿತ್ತ ಫ‌ಯಾಝ್ ಬಟ್‌ ಒಮಾನ್‌ನ ಯಶಸ್ವಿ ಬೌಲರ್‌.

ಚೇಸಿಂಗ್‌ ವೇಳೆ ಕಶ್ಯಪ್‌ ಪ್ರಜಾಪತಿ 35ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡರು. ಆಕಿಬ್‌ ಇಲ್ಯಾಸ್‌ (45) ಜತೆ 2ನೇ ವಿಕೆಟಿಗೆ 83 ರನ್‌ ಪೇರಿಸಿದರು. ಪ್ರಜಾಪತಿ ಅವರ 103 ರನ್‌ 97 ಎಸೆತಗಳಿಂದ ಬಂತು (12 ಬೌಂಡರಿ, 1 ಸಿಕ್ಸರ್‌). ಅಯಾನ್‌ ಖಾನ್‌ 47 ರನ್‌ ಮಾಡಿದರು. ಜಿಂಬಾಬ್ವೆ ಪರ ಟೆಂಡೈ ಚಟಾರ ಮತ್ತು ಬ್ಲೆಸ್ಸಿಂಗ್‌ ಮುಜರಬನಿ ತಲಾ 3 ವಿಕೆಟ್‌ ಉರುಳಿಸಿದರು. ಶುಕ್ರವಾರ ಶ್ರೀಲಂಕಾ-ನೆದರ್ಲೆಂಡ್ಸ್‌ ಮುಖಾಮುಖೀ ಆಗಲಿವೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next