ಮಸ್ಕತ್: ಎಸಿಸಿ ಎಮರ್ಜಿಂಗ್ ಏಷ್ಯಾ ಕಪ್ (Emerging Asia Cup 2024) ಕೂಟದಲ್ಲಿ ಭಾರತ ಎ ತಂಡವು ಶುಭಾರಂಭ ಮಾಡಿದೆ. ಪಾಕಿಸ್ತಾನ ಎ ವಿರುದ್ದ ಶನಿವಾರ (ಅ.19) ನಡೆದ ರೋಚಕ ಹಣಾಹಣಿಯಲ್ಲಿ ಭಾರತ ಎ ತಂಡವು 7 ರನ್ ಅಂತರದ ಗೆಲುವು ಸಾಧಿಸಿದೆ.
ಒಮಾನ್ ನ ಮಸ್ಕತ್ ನ ಅಲ್ ಅಮರತ್ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತವು 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 183 ರನ್ ಗಳಿಸಿದರೆ, ಪಾಕಿಸ್ಥಾನ ಎ ತಂಡವು 176 ರನ್ ಮಾತ್ರ ಗಳಿಸಲು ಸಾಧ್ಯವಾಯಿತು.
ಭಾರತ ಎ ತಂಡದ ರಮಣದೀಪ್ ಸಿಂಗ್ (Ramandeep Singh) ಅವರು ಅತ್ಯದ್ಭುತ ಕ್ಯಾಚ್ ಪಡೆದು ಎಲ್ಲರನ್ನೂ ಚಕಿತಗೊಳಿಸಿದರು. ಪಾಕಿಸ್ತಾನ ಎ ತಂಡದ ಯಾಸಿರ್ ಖಾನ್ ಹೊಡೆದ ಚೆಂಡು ಬೌಂಡರಿ ಕಡೆಗೆ ಸಾಗುತ್ತಿತ್ತು. ಈ ವೇಳೆ ಓಡಿಬಂದು ಡೈವ್ ಹಾಕಿದ ರಮಣದೀಪ್ ಸಿಂಗ್ ಸೂಪರ್ ಮ್ಯಾನ್ ರೀತಿಯಲ್ಲಿ ಹಿಡಿದರು. ಎದುರಾಳಿ ಪಾಕಿಸ್ತಾನ ತಂಡದ ಆಟಗಾರರು ಮಾತ್ರವಲ್ಲದೆ ಭಾರತೀಯ ಆಟಗಾರರೂ ಒಂದು ಕ್ಷಣ ಅಚ್ಚರಿಪಟ್ಟರು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡಕ್ಕೆ ನಾಯಕ ತಿಲಕ್ ವರ್ಮಾ, ಕೀಪರ್ ಪ್ರಭ್ ಸಿಮ್ರನ್ ಸಿಂಗ್ ಮತ್ತು ಅಭಿಷೇಕ್ ಶರ್ಮಾ ನೆರವಾದರು. ತಿಲಕ್ 44 ರನ್, ಸಿಮ್ರನ್ 36 ರನ್ ಮತ್ತು ಅಭಿಷೇಕ್ ಶರ್ಮಾ 35 ರನ್ ಮಾಡಿದರು. ರಮಣದೀಪ್ ಸಿಂಗ್ 17 ರನ್ ಮಾಡಿದರು.
ಪಾಕಿಸ್ತಾನ ಎ ತಂಡದ ಪರ ಯಾಸಿರ್ ಖಾನ್ 33 ರನ್, ಅರಾಫತ್ ಮಿನ್ಹಾಸ್ 41 ರನ್ ಮತ್ತು ಅಬ್ದುಲ್ ಸಮದ್ 25 ರನ್ ಮಾಡಿದರು. ಅನ್ಶುಲ್ ಕಾಂಬೋಜ್ ಮೂರು ವಿಕೆಟ್, ರಶಿಕ್ ಸಲಾಮ್ ಮತ್ತು ನಿಶಾಂತ್ ಸಂಧು ತಲಾ ಎರಡು ವಿಕೆಟ್ ಪಡೆದರು.