Advertisement

ಸೂಪರ್‌ ಲೋನ್‌; ಹೆಚ್ಚು ಸಾಲ ನೀಡಲು ಆರ್‌ಬಿಐ ಪ್ರೋತ್ಸಾಹ

08:18 PM Feb 16, 2020 | Sriram |

ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೆಚ್ಚು ಸಾಲ ನೀಡಲು ಸಾಧ್ಯವಾಗುವಂತೆ ಮಾಡುವ ಬದಲಾವಣೆಯೊಂದನ್ನು ಅರ್‌ಬಿಐ ತಂದಿದೆ. ಬ್ಯಾಂಕುಗಳು, ಆರ್‌ಬಿಐನಲ್ಲಿ ಠೇವಣಿ ರೂಪದಲ್ಲಿ ಇಡುವ ನಗದು ಮೀಸಲು ಪ್ರಮಾಣದ ಸದುಪಯೋಗವನ್ನು ಗ್ರಾಹಕರಿಗೆ ತಲುಪಿಸುವುದು ಇದರ ಹಿಂದಿನ ಉದ್ದೇಶ.

Advertisement

ಬ್ಯಾಂಕುಗಳು ತಮ್ಮಲ್ಲಿರುವ ಒಟ್ಟು ಠೇವಣಿಯ ಸ್ವಲ್ಪ ಭಾಗವನ್ನು ನಗದು ರೂಪದಲ್ಲಿ ರಿಸರ್ವ್‌ ಬ್ಯಾಂಕ್‌ನಲ್ಲಿ ಕಡ್ಡಾಯವಾಗಿ ಠೇವಣಿ ರೂಪದಲ್ಲಿ ಇಡಬೇಕಾಗುತ್ತದೆ. ಇದನ್ನು ಬ್ಯಾಂಕಿಂಗ್‌ ಪರಿಭಾಷೆಯಲ್ಲಿ ನಗದು ಮೀಸಲು ಪ್ರಮಾಣ (Cash Reserve Ratio) ಎನ್ನುತ್ತಾರೆ. ಈ ಪ್ರಮಾಣವನ್ನು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ತನ್ನ ಪ್ರತಿ ದ್ವೆ„ಮಾಸಿಕ ಹಣಕಾಸು ನೀತಿ ಪರಾಮರ್ಶೆ ಸಭೆಯಲ್ಲಿ ನಿರ್ಧರಿಸುತ್ತದೆ. ಇಂಥ ಸಭೆ ಕಳೆದ ಪೆಬ್ರವರಿ 4ರಂದು ನಡೆದಿದ್ದು, ಮುಂದಿನ ಸಭೆ ಎಪ್ರಿಲ್‌ 4ರಂದು ನಡೆಯುತ್ತದೆ. ಸದ್ಯ, ಈ ನಗದು ಮೀಸಲು ಪ್ರಮಾಣ ಶೇ.4ರಷ್ಟು ಇದ್ದು.

ಇದು ಎಮರ್ಜೆನ್ಸಿ ಫ‌ಂಡ್‌
ಇದನ್ನು ಗ್ರಾಹಕರು ಬ್ಯಾಂಕಿನಲ್ಲಿ ಇಡುವ ಒಟ್ಟು ಸ್ಥಿರ ಮತ್ತು ಚಾಲ್ತಿ ಠೇವಣಿಯ (Net Demand and Term Liabilities- NDTL) ಮೇಲೆ ಲೆಕ್ಕ ಹಾಕುತ್ತಾರೆ. ಒಟ್ಟು ಠೇವಣಿ 10,000 ರೂ. ಇದ್ದರೆ, ಬ್ಯಾಂಕ್‌ ನಗದು ರೂಪದಲ್ಲಿ 4% ಅಂದರೆ 400 ರೂ.ಗಳನ್ನು ರಿಸರ್ವ್‌ ಬ್ಯಾಂಕ್‌ನಲ್ಲಿ ಠೇವಣಿ ಇಡಬೇಕಾಗುತ್ತದೆ. ಇದಕ್ಕೆ ರಿಸರ್ವ್‌ ಬ್ಯಾಂಕ್‌ ಯಾವುದೇ ಬಡ್ಡಿಯನ್ನು ನೀಡುವುದಿಲ್ಲ. ಈ ನಗದು, ಮೀಸಲು ಬ್ಯಾಂಕುಗಳ ಭದ್ರತಾ ಮತ್ತು ಸುರಕ್ಷತಾ ಠೇವಣಿಯಾಗಿದ್ದು, ಎಮರ್ಜೆನ್ಸಿ ಸಮಯದಲ್ಲಿ ಬಳಸಬಹುದಾದ ದೂರಗಾಮಿ ವ್ಯವಸ್ಥೆಯಾಗಿರುತ್ತದೆ. ಕೇವಲ ಭಾರತದಲ್ಲಿ ಮಾತ್ರವಲ್ಲ. ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಈ ವ್ಯವಸ್ಥೆ ಇದೆ. ಆದರೆ ಠೇವಣಿ ಮೊತ್ತದ ಶೇ. ಬದಲಾಗುತ್ತಿರುತ್ತದೆ ಅಷ್ಟೆ. ಅಮೇರಿಕಾದಲ್ಲಿ 3%, ಯುರೋಪಿಯನ್‌ ದೇಶಗಳಲ್ಲಿ 1%, ಚೀನಾದಲ್ಲಿ 14.5% ಮತ್ತು ಟರ್ಕಿಯಲ್ಲಿ 14.5% ಇದೆ. ಗರಿಷ್ಠ ಠೇವಣಿ ಅರ್ಜೆಂಟಿನಾದಲ್ಲಿದೆ, ಅದು 44%.

ಬ್ಯಾಂಕುಗಳಿಗೇನು ಪ್ರಯೋಜನ?
ಇದು, ಬ್ಯಾಂಕುಗಳಿಗೆ ದುಡಿಯುವ ಫ‌ಂಡ್‌ ಆಗಿರದೇ, ದುಡಿಯದ (idle fund)ಆಗಿದೆ. ಅಂದರೆ, ಇದರಿಂದ ಬ್ಯಾಂಕಿಗೆ ಯಾವುದೇ ರೀತಿಯ ಆದಾಯ ಬರುವುದಿಲ್ಲ. ಅದೇ ಮೊತ್ತವನ್ನು ಬ್ಯಾಂಕಿಗೆ ಮರಳಿಸಿದರೆ ಸಾಲ ನೀಡಲು ಮತ್ತು ಇತರೆ ಉದ್ದೇಶಗಳಿಗೆ ಆ ಹಣವನ್ನು ಬಳಸಿಕೊಳ್ಳಬಹುದು. ಅದರಿಂದ ಬಡ್ಡಿ ರೂಪದಲ್ಲಿ ಬ್ಯಾಂಕಿಗೆ ಲಾಭವೂ ಆಗುತ್ತಿತ್ತು. ಆಗ , ಬ್ಯಾಂಕುಗಳು 7.50% ನಿಂದ 12 % ವರೆಗೂ ಅದಾಯ ಗಳಿಸಬಹುದಿತ್ತು. ಹೀಗಾಗಿ ಬ್ಯಾಂಕುಗಳು ತಮ್ಮ ನಗದು ಮೀಸಲು ಪ್ರಮಾಣದ ಮೇಲೆ ಬಡ್ಡಿ ನೀಡಬೇಕು ಅಥವಾ ನಗದು ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ವರ್ಷಗಳಿಂದಲೇ ಒತ್ತಾಯಿಸುತ್ತಿದ್ದವು.

ಬದಲಾವಣೆ ಏನು?
ಬ್ಯಾಂಕಿನ ಒಟ್ಟೂ ಠೇವಣಿ 10,000 ಕೋಟಿ ಎಂದಿಟ್ಟುಕೊಂಡರೆ, ಅದರ 4% ಅಂದರೆ 400 ಕೋಟಿ ರೂ.ಗಳನ್ನು ಠೇವಣಿಯಾಗಿ ಇಡಬೇಕಿತ್ತು. ಈಗ ತಂದಿರುವ ನಿಯಮದ ಪ್ರಕಾರ, ಅವರು ಹೇಳಿರುವ ಅವಧಿಯಲ್ಲಿ( 31.01.2020 ನಿಂದ 31.07.2020) 1000 ಕೋಟಿ ರೂ.ಗಳನ್ನು ಸಾಲವಾಗಿ ನೀಡಿದೆ ಎಂದಿಟ್ಟುಕೊಳ್ಳೋಣ. ಈಗ ಠೇವಣಿ ಇಡುವಾಗ 10,000 ಕೋಟಿಗೆ ಬದಲಾಗಿ, ಅದರಲ್ಲಿ ಸಾಲ ನೀಡಿರುವ 1,000 ಕೋಟಿಯನ್ನು ಕಳೆದು 9,000 ಕೋಟಿಯ 4% ಲೆಕ್ಕಾಚಾರ ಮಾಡಬೇಕಾಗುತ್ತದೆ. ಅಲ್ಲಿಗೆ 400ಗೆ ಬದಲಾಗಿ 360 ಕೋಟಿಯನ್ನು ಠೇವಣಿಯಾಗಿ ಇಟ್ಟರೆ ಸಾಕಾಗುತ್ತದೆ. ಉಳಿದ 40 ಕೋಟಿಯನ್ನು ಬ್ಯಾಂಕುಗಳು ತಮ್ಮ ಅಗತ್ಯಗಳಿಗೆ ಬಳಸಿಕೊಳ್ಳಬಹುದು.

Advertisement

ಗ್ರಾಹಕರಿಗೆ ಏನು ಲಾಭ?
ಗ್ರಾಹಕರಿಗೆ ಹೆಚ್ಚಿನ ಸಾಲ ನೀಡಬಹುದು. ಬ್ಯಾಂಕುಗಳು ಸಾಲ ನೀಡಲು ಫ‌ಂಡ್ಸ್‌ ಕೊರತೆ ಇದೆ ಎನ್ನುವ ಕಾರಣವನ್ನು ಇನ್ನುಮುಂದೆ ನೀಡಲಾಗದು. ಸಾಲದ ಬೇಡಿಕೆಯನ್ನು ಸಂಪೂರ್ಣವಾಗಿ ಈಡೇರಿಸಲಾಗದಿದ್ದರೂ, ಸಮಾಧಾನಕರವಾಗಿ ಪೂರೈಸಲು ಇದರಿಂದ ಸಾಧ್ಯವಾಗುತ್ತದೆ. ಬ್ಯಾಂಕುಗಳು ಸ್ವಲ್ಪ ಮಟ್ಟಿಗೆ ಸಾಲ ನೀಡಲು ರೆಪೋ ಫ‌ಂಡ್ಸನ್ನು ಪೂರ್ಣ ಬಳಸದೇ ತಮ್ಮ ಸ್ವಂತ ಫ‌ಂಡ್‌ಗಳನ್ನು ಬಳಸುವುದರಿಂದ ಗ್ರಾಹಕರಿಗೆ ಬಡ್ಡಿದರದಲ್ಲಿ ಸ್ವಲ್ಪ ವಿನಾಯಿತಿಯನ್ನು ವರ್ಗಾಯಿಸಿಬಹುದು. ಸಾಲ ನೀಡಲು ಬ್ಯಾಂಕುಗಳಿಗೆ ಹೆಚ್ಚಿನ ಫ‌ಂಡ್ಸ್‌ ದೊರಕಬಹುದು ಮತ್ತು ಸಾಲದ ಮೇಲಿನ ಬಡ್ಡಿದರದಲ್ಲಿ ಸ್ವಲ್ಪ ಕಡಿಮೆಯಾಗಬಹುದು.

ಜನರು ಹೆಚ್ಚು ಸಾಲ ಪಡೆಯಬಹುದು
ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳ ಸಾಲ ನೀಡುವಿಕೆ ಪ್ರಕ್ರಿಯೆಯಲ್ಲಿ ಇಳಿತ ಕಂಡುಬಂದಿದೆ. 17.01.2020ರ ಹೊತ್ತಿಗೆ ಸಾಲ ನೀಡುವಿಕೆಯ ಬೆಳವಣಿಗೆ 7%ಗೆ ಇಳಿದಿದ್ದು, ಬ್ಯಾಂಕುಗಳು ಹೆಚ್ಚು ಸಾಲ ನೀಡುವ ಅನಿವಾರ್ಯತೆ ಇರುವುದಲ್ಲದೇ, cost of funds ಸಾಲದ ಮೇಲಿನ ಬಡ್ಡಿದರವನ್ನು ಕಡಿಮೆ ಮಾಡಬಹುದು. ಸಾಲದ ವಲಯದಲ್ಲಿ ಅಟೊಮೊಬೈಲ್‌, ಗೃಹ, ರಿಟೇಲ…, ಮೈಕ್ರೋ ಮತ್ತು ಮೀಡಿಯಂ ಉದ್ದಿಮೆಗಳಿಗೆ ಬೇಡಿಕೆ ಇದ್ದು, ರಿಸರ್ವ್‌ ಬ್ಯಾಂಕ್‌ ತನ್ನ ಹೊಸ ನಗದು ಮೀಸಲು ವ್ಯವಸ್ಥೆಯಲ್ಲಿ ಇವುಗಳನ್ನೇ ಗುರಿಯಾಗಿರಿಸಿಕೊಂಡಿದೆ. ಉಳಿದ ಸಾಲಗಳಿಗೆ ಇದು ಅನ್ವಯವಾಗುವುದಿಲ್ಲ. ಈ ವ್ಯವಸ್ಥೆ ಐದು ವರ್ಷಗಳ ತನಕ ಮಾತ್ರ ಇದ್ದರೂ, ಇದು ಸಾಲ ತೆಗೆದುಕೊಂಡ ದಿನಾಂಕದಿಂದ ಮತ್ತು ಸಾಲದ ಅವಧಿ ತೀರುವವರೆಗೆ ಮಾತ್ರ ಸೀಮಿತವಾಗಿರುತ್ತದೆ.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next