ಬೆಂಗಳೂರು: ಇತ್ತೀಚೆಗೆ ಕೌಟುಂಬಿಕ ವಿಚಾರಕ್ಕೆ ಟೈಲ್ಸ್ ಕಾರ್ಮಿಕನನ್ನು ನಡು ರಸ್ತೆಯಲ್ಲೇ ಭೀಕರವಾಗಿ ಹತ್ಯೆಗೈದಿದ್ದ ಆರು ಮಂದಿ ಆರೋಪಿಳನ್ನು ಡಿ.ಜೆ. ಹಳ್ಳಿ ಪೊಲೀಸರು ಬಂಧಿಸಿದ್ದು, ಹಂತಕರಿಗೆ ಮೃತನ ಎರಡನೇ ಪತ್ನಿಯೇ ಸುಪಾರಿ ಕೊಟ್ಟಿದ್ದಳು ಎಂಬದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಕೆ.ಜಿ. ಹಳ್ಳಿಯ ಸಮಾಧಾನ ನಗರ ನಿವಾಸಿಗಳಾದ ಆಂಥೋಣಿ, ದಿನೇಶ್ ಅಲಿಯಾಸ್ ದೀನು, ಅಜಯ್, ಶಿವ ಕು ಮಾರ್, ಸ್ಟೀಫನ್, ಅರುಣ್ ಬಂಧಿತರು.
ಆರೋಪಿಗಳು ಜು.3 ರಂದು ರಾತ್ರಿ 11 ಗಂಟೆ ಸುಮಾರಿಗೆ ಕಾವಲ್ ಬೈರಸಂದ್ರದ ಅಂಬೇಡ್ಕರ್ ಕಾಲೇಜು ಮುಂಭಾಗ ಕಾವಲ್‌ಬೈರಸಂದ್ರ ನಿವಾಸಿ ಕೃಷ್ಣಮೂರ್ತಿ (35) ಎಂಬಾತನನ್ನು ಭೀಕರವಾಗಿ ಹತ್ಯೆಗೈದಿದ್ದರು ಎಂದು ಪೊಲೀಸರು ಹೇಳಿದರು. ಸುಮಾರು ವರ್ಷಗಳಿಂದ ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಕೃಷ್ಣಮೂರ್ತಿ ಕೆಲ ವರ್ ಗಳ ಹಿಂದೆ ಮೊದಲ ಪತ್ನಿ ಬಿಟ್ಟು ಹೋದ ಬಳಿಕ ಕೆ.ಜಿ. ಹಳ್ಳಿಯ ಸಮಾಧಾನ ನಗರ ನಿವಾಸಿ ರುತು ಎಂಬಾಕೆಯನ್ನು ಪ್ರೀತಿಸಿ ಮದುವೆಯಾಗಿದ್ದ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕೌಟುಂಬಿಕ ವಿಚಾರವಾಗಿ ದಂಪತಿ ನಡುವೆ ಜಗಳ ನಡೆದಿದ್ದು, ಪತ್ನಿ ಒಂದು ಮಗುವನ್ನು ತನ್ನೊಂದಿಗೆ ತವರು ಮನೆಗೆ ಕರೆದೊಯ್ಯಿದ್ದಳು. ಮತ್ತೂಂದು ಮಗು ಕೃಷ್ಣಮೂರ್ತಿ ಬಳಿಯೇ ಇತ್ತು.
ಇದನ್ನೂ ಓದಿ:ಸಚಿವರಾದ ಬೆನ್ನಲ್ಲೇ ಜ್ಯೋತಿರಾದಿತ್ಯ ಸಿಂಧಿಯಾ ಫೇಸ್ ಬುಕ್ ಖಾತೆ ಹ್ಯಾಕ್!
ಈ ನಡುವೆ ಕೃಷ್ಣಮೂರ್ತಿ ಮದ್ಯ ಸೇವಿಸಿ ಆಕೆಯ ತವರು ಮನೆಗೆ ಹೋಗಿ ಗಲಾಟೆ ಮಾಡಿದಲ್ಲದೆ, ಮನೆಯೊಳಗೆ ಕಲ್ಲು ಎತ್ತಿ ಹಾಕಿ ಹಲ್ಲೆ ನಡೆಸಿದ್ದ. ಅದರಿಂದ ಬೇಸರಗೊಂಡಿದ್ದ ರುತು, ಪತಿಯನ್ನು ಸರಿ ಮಾಡಲು ಸಾಕಷ್ಟು ಪ್ರಯತ್ನಿಸಿದ್ದಾಳೆ. ಆದರೂ ಕೃಷ್ಣಮೂರ್ತಿ ಬದಲಾಗಿರಲಿಲ್ಲ. ಅಲ್ಲದೆ, ನಿತ್ಯ ತವರು ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದರು.
2ನೇ ಪತ್ನಿಯಿಂದಲೇ ಸುಪಾರಿ: ಪತಿಯ ವರ್ತನೆಯಿಂದ ಆಕ್ರೋಶಗೊಂಡಿದ್ದ ಪತ್ನಿ ರುತು, ಅಪರಾಧ ಹಿನ್ನೆಲೆಯುಳ್ಳ ಮನೆ ಸಮೀಪದ ದಿನೇಶ್‌ನನ್ನು ಸಂಪರ್ಕಿಸಿ ಪತಿ ಕೃಷ್ಣಮೂರ್ತಿ ಹತ್ಯೆಗೆ ಐದು ತಿಂಗಳ ಹಿಂದೆಯೇ 2 ಲಕ್ಷ ರೂ. ಸುಪಾರಿ ಕೊಟ್ಟಿದ್ದಳು. ಹೀಗಾಗಿ ಆರೋಪಿ ತನ್ನ ಸಹಚರರ ಜತೆ ಸೇರಿಕೊಂಂಡು ಸತತ ಮೂರು ತಿಂಗಳ ಕಾಲ ಕೃಷ್ಣಮೂರ್ತಿ ಹತ್ಯೆಗೆ ಯತ್ನಿಸಿದ್ದಾರೆ. ಆದರೆ, ಸಾಧ್ಯವಾಗಿಲ್ಲ. ಜು. 3ರಂದು ಮದ್ಯ ಅಮಲಿನಲ್ಲಿ ಬೈಕ್ ನಲ್ಲಿ ಹೋಗುವಾಗ ಅಡ್ಡಗಟ್ಟಿ ಹತ್ಯೆಗೈದಿದ್ದಾರೆ. ಸುಪಾರಿ ಕೊಟ್ಟ ರುತು ಹಾಗೂ ಆಕೆಗೆ ಸಹಕಾರ ನೀಡಿದ ಆಕೆಯ ಕುಟುಂಬ ಸದಸ್ಯರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.