ದುಬೈ: ಸತತ ಸೋಲುಗಳಿಂದ ಕಂಗಟ್ಟಿದ್ದ ಸನ್ ರೈಸರ್ಸ್ ಹೈದರಾಬಾದ್ ಸೋಮವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಜಯ ಸಾಧಿಸಿದೆ. ಆಡಿದ 10 ಪಂದ್ಯಗಳಲ್ಲಿ ಹೈದರಾಬಾದ್ ಎರಡನೇ ಜಯ ದಾಖಲಿಸಿದೆ.
ತಂಡಕ್ಕೆ ಮೇಜರ್ ಸರ್ಜರಿ ಮಾಡಿದ ಕೇನ್ ವಿಲಿಯಮ್ಸನ್ ಪಡೆ ರಾಜಸ್ಥಾನ್ ವಿರುದ್ಧ ಸುಲಭವಾಗಿಯೇ ಜಯ ಸಾಧಿಸಿತು. ಮಾಜಿ ನಾಯಕ ಡೇವಿಡ್ ವಾರ್ನರ್, ಅನುಭವಿಗಳಾದ ಮನೀಷ್ ಪಾಂಡೆ, ಕೇದಾರ್ ಜಾದವ್ ರನ್ನು ಕೈಬಿಟ್ಟ ಆರೆಂಜ್ ಆರ್ಮಿ ಸಫಲತೆಯನ್ನೂ ಕಂಡಿತು. ಜೇಸನ್ ರಾಯ್, ಪ್ರಿಯಂ ಗರ್ಗ್, ಅಭಿಷೇಕ್ ಶರ್ಮಾ ಅವರು ಸೋಮವಾರ ಅವಕಾಶ ಪಡೆದಿದ್ದರು.
ಎರಡು ಪಂದ್ಯ ಗೆದ್ದು ನಾಲ್ಕು ಅಂಕ ಹೊಂದಿರುವ ಎಸ್ಆರ್ ಎಚ್ ಅಂಕಪಟ್ಟಿಯಲ್ಲಿ ಸದ್ಯ ಕೊನೆಯ ಸ್ಥಾನದಲ್ಲಿದೆ. ಪ್ಲೇ ಆಫ್ ಬಾಗಿಲು ಬಹುತೇಕ ಮುಚ್ಚಿದಂತಿದೆ. ಆದರೆ ಲೆಕ್ಕಾಚಾರವನ್ನು ಗಮನಿಸಿದರೆ ಕೇನ್ ವಿಲಿಯಮ್ಸನ್ ಪಡೆಗೆ ಇನ್ನೂ ಪ್ಲೇ ಆಫ್ ಅವಕಾಶ ಜೀವಂತವಿದೆ.
ಇದನ್ನೂ ಓದಿ:ಕಂಬಳ ಓಟಗಾರರಿಗೆ ತರಬೇತಿ: ತುಳು ಸಾಹಿತ್ಯ ಅಕಾಡೆಮಿ ಮನ್ನಣೆ
ಎಲ್ಲಾ ತಂಡಗಳು ಇದುವರೆಗೆ 10 ಪಂದ್ಯಗಳಾಡಿದ್ದು, ಇನ್ನು 4 ಪಂದ್ಯಗಳು ಬಾಕಿಯಿದೆ. ಹೈದರಾಬಾದ್ ಪ್ಲೇ ಆಫ್ ಪ್ರವೇಶ ಪಡೆಯಬೇಕಾದರೆ ಉಳಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಗೆಲ್ಲಬೇಕು. ಚೆನ್ನೈ, ಕೆಕೆಆರ್, ಆರ್ ಸಿಬಿ ಮತ್ತು ಮುಂಬೈ ವಿರುದ್ದ ಇನ್ನು ಎಸ್ಆರ್ ಎಚ್ ಆಡಲಿದ್ದು, ಈ ನಾಲ್ಕು ಪಂದ್ಯ ಗೆಲ್ಲಬೇಕಾಗಿದೆ.
ಅಷ್ಟೇ ಅಲ್ಲದೆ ಸದ್ಯ ಎಂಟು ಅಂಕ ಹೊಂದಿರುವ ಕೆಕೆಆರ್, ಮುಂಬೈ, ರಾಜಸ್ಥಾನ್ ಮತ್ತು ಪಂಜಾಬ್ ತಂಡಗಳು ಇನ್ನು ಕೇವಲ ಒಂದು ಪಂದ್ಯವನ್ನಷ್ಟೇ ಗೆಲ್ಲಬೇಕು. ಹೀಗಾದಲ್ಲಿ 12 ಅಂಕ ಪಡೆಯುವ ಹೈದರಾಬಾದ್ ನಾಲ್ಕನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಬಹುದು.