Advertisement

ಉಗ್ರರ ಅಟ್ಟಹಾಸಕ್ಕೆ 5 ಯೋಧರು ಹುತಾತ್ಮ

06:00 AM Feb 12, 2018 | |

ಸಂಜ್ವಾನ್‌: ಜಮ್ಮುವಿನ ಸಂಜ್ವಾನ್‌ನಲ್ಲಿನ ಸೇನಾ ಶಿಬಿರದ ವಸತಿ ಕಟ್ಟಡದ ಮೇಲೆ ಜೈಶ್‌ ಉಗ್ರರು ನಡೆಸಿದ ದಾಳಿಯಿಂದ ಹುತಾತ್ಮರಾದ ಯೋಧರ ಸಂಖ್ಯೆ ಭಾನುವಾರ 5ಕ್ಕೇರಿದೆ. ದಾಳಿಯಲ್ಲಿ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ. ಇದೇ ವೇಳೆ, ಗುಂಡು ತಗಲಿ ತೀವ್ರ ಗಾಯಗೊಂಡಿದ್ದ ಗರ್ಭಿಣಿಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ-ಮಗು ಆರೋಗ್ಯವಾಗಿದ್ದಾರೆ.

Advertisement

ಗುಂಡಿನ ದಾಳಿ ನಡೆಸಿದ ಪಾಕಿಸ್ತಾನ ಮೂಲದ ಜೈಶ್‌ ಉಗ್ರರ ವಿರುದ್ಧದ ಕಾರ್ಯಾಚರಣೆ ಭಾನುವಾರ ಸಂಜೆಯವರೆಗೂ ಮುಂದುವರಿದಿದೆ. ವಸತಿ ಸಂಕೀರ್ಣದಲ್ಲಿ ಅಡಗಿದ್ದ ಮೂವರು ಉಗ್ರರನ್ನು ಸೇನಾಪಡೆ ಹೊಡೆದುರುಳಿಸಿದೆ. ಜತೆಗೆ, ಮೃತ ಉಗ್ರರಿಂದ ಎಕೆ 56 ರೈಫ‌ಲ್‌ಗ‌ಳು, ಅಂಡರ್‌ ಬ್ಯಾರೆಲ್‌ ಗ್ರೆನೇಡ್‌ ಲಾಂಚರ್‌ಗಳು, ಗ್ರೆನೇಡ್‌ಗಳು ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದು 2016ರ ಉರಿ ಸೇನಾ ನೆಲೆ ದಾಳಿಯ ನಂತರ ನಡೆದ ಅತಿದೊಡ್ಡ ಉಗ್ರರ ದಾಳಿಯಾಗಿದೆ.

ಶನಿವಾರದ ದಾಳಿ ವೇಳೆ ಇಬ್ಬರು ಜೂನಿಯರ್‌ ಕಮಿಷನ್‌ ಆಫೀಸರ್‌ಗಳು ಹುತಾತ್ಮರಾಗಿದ್ದರು. ಇಬ್ಬರು ಉಗ್ರರನ್ನೂ ಸೇನಾಪಡೆ ಹತ್ಯೆಗೈದಿತ್ತು. ಆದರೆ, ಸೇನಾ ಸಮವಸ್ತ್ರ ಧರಿಸಿಕೊಂಡಿದ್ದ ಒಬ್ಬ ಉಗ್ರ ಒಳಗೇ ಅವಿತಿದ್ದ. ಭಾನುವಾರ ಕಾರ್ಯಾಚರಣೆ ನಡೆಸಿ ಆತನನ್ನೂ ಹತ್ಯೆಗೈಯ್ಯಲಾಯಿತು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಇದೇ ವೇಳೆ, ವಸತಿ ಕಟ್ಟಡದಲ್ಲಿ ಶೋಧ ಕಾರ್ಯ ನಡೆಸುವಾಗ ಮತ್ತೂಬ್ಬ ಜೂನಿಯರ್‌ ಕಮಿಷನ್ ಅಧಿಕಾರಿ, ಇಬ್ಬರು ಯೋಧರು ಹಾಗೂ ಯೋಧರೊಬ್ಬರ ಅಪ್ಪನ ಮೃತದೇಹ ಪತ್ತೆಯಾಗಿದೆ. ಈ ಮೂಲಕ ಮೃತರ ಸಂಖ್ಯೆ 6ಕ್ಕೇರಿತು ಎಂದು ಸೇನಾ ವಕ್ತಾರರು ಮಾಹಿತಿ ನೀಡಿದ್ದಾರೆ.

ಹುತಾತ್ಮ ಯೋಧರನ್ನು ಮದನ್‌ ಲಾಲ್‌ ಚೌಧರಿ, ಮೊಹಮ್ಮದ್‌ ಅಶ್ರಫ್ ನಿರ್‌, ಹವಿಲ್ದಾರ್‌ ಹಬೀಬುಲ್ಲಾ ಖುರೇಷಿ, ಮಂಜೂರ್‌ ಅಹ್ಮದ್‌ ಮತ್ತು ಲ್ಯಾನ್ಸ್‌ ನಾಯ್ಕ ಮೊಹಮ್ಮದ್‌ ಇಕ್ಬಾಲ್‌ ಎಂದು ಗುರುತಿಸಲಾಗಿದೆ. ದಾಳಿಯಲ್ಲಿ 6 ಮಂದಿ ಮಹಿಳೆಯರು, ಮಕ್ಕಳು ಸೇರಿದಂತೆ 10 ಮಂದಿ ಗಾಯಗೊಂಡಿದ್ದಾರೆ. 14 ವರ್ಷದ ಬಾಲಕನ ತಲೆಗೂ ಗುಂಡು ಹೊಕ್ಕಿದ್ದು, ಆತನ ಸ್ಥಿತಿ ಗಂಭೀರವಾಗಿದೆ. ಭಾನುವಾರ ಸಂಜೆ 4 ಫೈರ್‌ ಬ್ರಿಗೇಡ್‌ಗಳ ಜತೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡವೂ ಸಂಜ್ವಾನ್‌ಗೆ ಆಗಮಿಸಿದೆ.

ಈ ನಡುವೆ, ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಅವರು ಉನ್ನತ ಮಟ್ಟದ ಸಭೆ ನಡೆಸಿದ್ದು, ಜಮ್ಮುವಿನ ಸೇನಾ ಆಸ್ಪತ್ರೆಗೆ ತೆರಳಿ ಗಾಯಾಳುಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

Advertisement

ಹೆಣ್ಣು ಮಗುವಿಗೆ ಜನ್ಮ ನೀಡಿದ ಗಾಯಾಳು ಗರ್ಭಿಣಿ
ಶನಿವಾರದ ದಾಳಿ ವೇಳೆ ಸೇನಾ ವಸತಿ ಸಂಕೀರ್ಣದಲ್ಲಿದ್ದ ಗರ್ಭಿಣಿಯೊಬ್ಬರು ಬೆನ್ನಿಗೆ ಗುಂಡು ತಗುಲು ತೀವ್ರ ಗಾಯಗೊಂಡಿದ್ದರು. ತಮ್ಮ ಪತಿ ರೈಫ‌ಲ್‌ಮಾÂನ್‌ ನಜೀರ್‌ ಅಹ್ಮದ್‌ ಜತೆಗಿದ್ದಾಗಲೇ ಮಹಿಳೆಗೆ ಗುಂಡು ತಾಕಿತ್ತು. ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆಯನ್ನು ಮತ್ತು ಹೊಟ್ಟೆಯಲ್ಲಿದ್ದ ಶಿಶುವನ್ನು ರಕ್ಷಿಸಲು ರಾತ್ರಿಯಿಡೀ ವೈದ್ಯರು ಹರಸಾಹಸ ಪಟ್ಟರು. ಭಾನುವಾರ ಬೆಳಗ್ಗೆ ಸಿಸೇರಿಯನ್‌ ಮೂಲಕ ಮಗುವನ್ನು ಹೊರೆತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ಈಗ ಹೆಣ್ಣು ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಲೆ. ಕ. ದೇವೇಂದರ್‌ ಆನಂದ್‌ ತಿಳಿಸಿದ್ದಾರೆ.

ಯೋಧರಿಗೆ ಊಟ-ತಿಂಡಿ ಒದಗಿಸಿದ ಸ್ಥಳೀಯರು
ಜೈಶ್‌ ಉಗ್ರರ ಅಟ್ಟಹಾಸದ ಮಧ್ಯೆಯೂ ಅವರ ವಿರುದ್ಧ ಹೋರಾಡುತ್ತಾ, ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ ಯೋಧರಿಗೆ ಸ್ಥಳೀಯರೇ ಊಟ, ತಿಂಡಿ ಪೂರೈಸಿದ್ದಾರೆ. ಸ್ಥಳೀಯ ನಿವಾಸಿಗಳ ಈ ನಡೆ ಮೆಚ್ಚುಗೆಗೆ ಕಾರಣವಾಗಿದೆ. ಸೇನಾಶಿಬಿರದ ಸುತ್ತಲೂ ನೆರೆದಿದ್ದ ಪೊಲೀಸರು, ಅರೆಸೇನಾ ಪಡೆ ಯೋಧರು ಹಾಗೂ ಪತ್ರಕರ್ತರಿಗೆ ಆಹಾರ, ಟೀ, ನೀರನ್ನು ಪೂರೈಸುತ್ತಿದ್ದೇವೆ. ಕಣಿವೆ ರಾಜ್ಯದಲ್ಲಿ ದಾರಿತಪ್ಪಿದ ಯುವಕರು ಭದ್ರತಾ ಪಡೆಗಳ ಮೇಲೆ ಸತತ ಕಲ್ಲುತೂರಾಟ ನಡೆಸುತ್ತಾರೆ. ಅಂಥವರಿಗೆ ಈ ಮೂಲಕ ನಾವು ಸಂದೇಶ ಕಳುಹಿಸುತ್ತಿದ್ದೇವೆ ಎಂದಿದ್ದಾರೆ ಸ್ಥಳೀಯರು.

Advertisement

Udayavani is now on Telegram. Click here to join our channel and stay updated with the latest news.

Next