Advertisement

ರಮೇಶ ಜಿಗಜಿಣಗಿ ಹ್ಯಾಟ್ರಿಕ್‌ಗೆ ಸುನೀತಾ ಸವಾಲು

11:15 PM Apr 15, 2019 | Lakshmi GovindaRaju |

ವಿಜಯಪುರ: ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಕೇಸರಿ ಧ್ವಜ ಹಾರಿಸಿರುವ ವಿಜಯಪುರ, ಬಿಜೆಪಿಯ ಭದ್ರಕೋಟೆ ಎನಿಸಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ ಪ್ರಸಕ್ತ ಚುನಾವಣೆಯಲ್ಲಿ ಅಂತಿಮ ಕಣದಲ್ಲಿ 12 ಸ್ಪರ್ಧಿಗಳಿದ್ದಾರೆ. ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿಜಯಪುರದಿಂದ ಹ್ಯಾಟ್ರಿಕ್‌ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

Advertisement

ಎರಡು ಬಾರಿಯೂ ಮೇಲ್ವರ್ಗದ ಬೆಂಬಲದಿಂದಲೇ ಆಯ್ಕೆಯಾಗಿರುವ ರಮೇಶ ಜಿಗಜಿಣಗಿ, ತಮ್ಮ ಹ್ಯಾಟ್ರಿಕ್‌ ವಿಜಯಕ್ಕೂ ಇದೇ ಮೂಲ ಎಂದು ನಂಬಿದ್ದಾರೆ. ಅದರೆ, ಸಂಸದರಾಗಿ, ಸಚಿವರಾಗಿ ದಶಕಗಳ ಕಾಲ ಕ್ಷೇತ್ರಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಿಲ್ಲ ಎಂಬ ಆಡಳಿತ ವಿರೋಧಿ ಅಲೆ ಅವರನ್ನು ಕಾಡುತ್ತಿದೆ.

ಇದಕ್ಕೆ ಪೂರಕ ಎಂಬಂತೆ ನಾಮಪತ್ರ ಸಲ್ಲಿಕೆಗೂ ಮುನ್ನವೇ ಸ್ವಯಂ ಜಿಗಜಿಣಗಿ ಅವರು, “ನನ್ನ ಮುಖ ನೋಡಬೇಡಿ, ಮೋದಿ ಮುಖ ನೋಡಿ ಓಟ್‌ ಹಾಕಿ’ ಎಂದು ಹೇಳಿದ್ದು, ವಿರೋಧಿ ಪಾಳೆಯಕ್ಕೆ ದೊಡ್ಡ ಅಸ್ತ್ರ ನೀಡಿದಂತಾಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಮೋದಿ ಅಲೆಯನ್ನು ನೆಚ್ಚಿಕೊಂಡಿದ್ದಾರೆ.

ಡಾ.ಸುನಿತಾ ಸವಾಲು: ಜಿಗಜಿಣಗಿಯ ಈ ಹೇಳಿಕೆಯನ್ನೇ ಅಸ್ತ್ರವಾಗಿಸಿಕೊಂಡಿರುವ ಜೆಡಿಎಸ್‌ ಅಭ್ಯರ್ಥಿ ಡಾ| ಸುನಿತಾ ಚವ್ಹಾಣ, ಮೋದಿ ಮುಖ ನೋಡಿ ಓಟು ಹಾಕಲು ಮೋದಿ ಈ ಕ್ಷೇತ್ರಕ್ಕೆ ಮಾಡಿದ್ದಾದರೂ ಏನು ಎಂದು ಪ್ರಶ್ನಿಸುತ್ತಿದ್ದಾರೆ. ಇನ್ನು, ಸುನಿತಾ ನಂಬಿಕೊಂಡಿರುವ ಮುಸ್ಲಿಂ ಮತದಾರರೂ ಪೂರ್ಣ ಪ್ರಮಾಣದಲ್ಲಿ ಇವರ ಪರವಾಗಿಲ್ಲ.

ಈ ಹಿಂದೆ ಇದೇ ಬಂಜಾರಾ ಸಮುದಾಯದ ಹಾಲಿ ಮೇಲ್ಮನೆ ಸದಸ್ಯ-ಮಾಜಿ ಕ್ರಿಕೆಟಿಗ ಪ್ರಕಾಶ ರಾಠೊಡ ಅವರು ಕಾಂಗ್ರೆಸ್‌ನಿಂದ ಸತತ ಮೂರು ಸೋಲು ಅನುಭವಿಸಿದ್ದಾರೆ. ಹೀಗಾಗಿ, ಬಂಜಾರಾ ಸಮುದಾಯಕ್ಕೆ ಈ ಕ್ಷೇತ್ರ ನೆಚ್ಚಿನದಾಗಿಲ್ಲ ಎಂಬ ಮಾತಿದೆ.

Advertisement

ಬಿಎಸ್ಪಿ ಅಭ್ಯರ್ಥಿ ಶ್ರೀನಾಥ ಪೂಜಾರಿ, ವಿದ್ಯಾರ್ಥಿ ಹಾಗೂ ನಿರುದ್ಯೋಗ ಸಮಸ್ಯೆ ಮುಂದಿರಿಸಿಕೊಂಡು ಹೋರಾಟದಲ್ಲಿ ಸಕ್ರಿಯರಾಗಿರುವ ತಮ್ಮನ್ನು ಜಿಲ್ಲೆಯ ಅಸಂಘಟಿತ ಕಾರ್ಮಿಕ ವಲಯ ಬೆಂಬಲಿಸಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಬಿಜೆಪಿ ಹಾಗೂ ಜೆಡಿಎಸ್‌ ಆಭ್ಯರ್ಥಿಗಳನ್ನು ತಿರಸ್ಕರಿಸುವ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದು, ಈ ಇಬ್ಬರ ಅತೃಪ್ತ ಮತದಾರರು ತಮ್ಮ ಕೈ ಹಿಡಿಯಲಿದ್ದಾರೆ ಎಂಬ ನಿರೀಕ್ಷೆ ಇರಿಸಿಕೊಂಡಿದ್ದಾರೆ.

ಕ್ಷೇತ್ರವ್ಯಾಪ್ತಿ: ಕ್ಷೇತ್ರವ್ಯಾಪ್ತಿಯಲ್ಲಿ 8 ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಬಿಜೆಪಿ-3, ಕಾಂಗ್ರೆಸ್‌-3, ಜೆಡಿಎಸ್‌-2 ಶಾಸಕರನ್ನು ಹೊಂದಿವೆ. ವಿಜಯಪುರ ನಗರ, ಮುದ್ದೇಬಿಹಾಳ ಹಾಗೂ ದೇವರಹಿಪ್ಪರಗಿ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದಾರೆ. ಬಬಲೇಶ್ವರ, ಇಂಡಿ ಹಾಗೂ ಬಸನವನಬಾಗೇವಾಡಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ.

ನಾಗಠಾಣಾ ಹಾಗೂ ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಜಿಲ್ಲೆಯಲ್ಲಿ ಮಿತ್ರ ಪಕ್ಷಗಳ ಐವರು ಶಾಸಕರ ಪೈಕಿ, ಕಾಂಗ್ರೆಸ್‌ನ ಮೂವರು ಶಾಸಕರಲ್ಲಿ ಇಬ್ಬರು ಸಚಿವರು ಹಾಗೂ ಒಬ್ಬರು ನಿಗಮ ಮಂಡಳಿ ಅಧ್ಯಕ್ಷರಾಗಿದ್ದಾರೆ. ಜೆಡಿಎಸ್‌ನಲ್ಲಿ ಒಬ್ಬರು ಸಚಿವರು, ಮತ್ತೂಬ್ಬರು ಸಿಎಂ ಸಂಸದೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ.

ನಿರ್ಣಾಯಕ ಅಂಶ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಕ್ಷೇತ್ರದಲ್ಲಿ ಚುನಾವಣೆ ಸ್ಪ್ರಶ್ಯ -ಅಸ್ಪೃಶ್ಯರ ನಡುವಿನ ಕಾದಾಟ ಎಂದು ವಿಶ್ಲೇಷಿಸಲಾಗುತ್ತಿದೆ. ಮೇಲ್ವರ್ಗ ಹಾಗೂ ಮುಸ್ಲಿಂ ಮತದಾರರೇ ಇಲ್ಲಿ ನಿರ್ಣಾಯಕ. ಮೂಲ ಅಸ್ಪೃಶ್ಯ ಎಡ ಸಮುದಾಯದಿಂದ ರಮೇಶ ಜಿಗಜಿಣಗಿ ಕಣಕ್ಕೆ ಇಳಿದಿದ್ದರೆ, ಬಲ ಸಮುದಾಯದಿಂದ ಬಿಎಸ್ಪಿ ಅಭ್ಯರ್ಥಿ ಶ್ರೀನಾಥ ಪೂಜಾರಿ ಹಾಗೂ ಸ್ಪೃಶ್ಯ, ಬಂಜಾರಾ ಸಮುದಾಯದಿಂದ ಡಾ.ಸುನಿತಾ ಚವ್ಹಾಣ ಸ್ಪರ್ಧಿಸಿದ್ದಾರೆ.

ದಲಿತ ಸಮುದಾಯದ ಎಲ್ಲ ಜಾತಿ-ಉಪ ಜಾತಿಗಳ ಮತಗಳು ಈ ಮೂವರಿಗೂ ಹಂಚಿಕೆಯಾಗಲಿದ್ದು, ಕಾಂಗ್ರೆಸ್‌ ಬೆಂಬಲಿತ ಜೆಡಿಎಸ್‌ ಅಭ್ಯರ್ಥಿ ಮುಸ್ಲಿಂ ಮತಗಳನ್ನು ನೆಚ್ಚಿಕೊಂಡಿದ್ದರೆ, ಬಿಜೆಪಿ ಮೇಲ್ವರ್ಗದ ಮತಗಳನ್ನು ನಂಬಿದೆ. ಈ ಕ್ಷೇತ್ರದ ಸೋಲು-ಗೆಲುವಿನಲ್ಲಿ “ಅಹಿಂದ’ ಮತದಾರರೇ ನಿರ್ಣಾಯಕ.

ಮತದಾರರು
ಒಟ್ಟು – 17,75,839
ಪುರುಷರು – 9,11,667
ಮಹಿಳೆಯರು – 8,63,930
ಇತರರು – 242

ಜಾತಿ ಲೆಕ್ಕಾಚಾರ
ಪರಿಶಿಷ್ಟ ಜಾತಿ – 4,50,000.
ಎಡ – 1, 50,000.
ಬಲ – 1, 80,000.
ಬಂಜಾರಾ – 80,000.
ಲಿಂಗಾಯತ ವೀರಶೈವ – 4,52,000.
ಪಂಚಮಸಾಲಿ – 1, 46,000.
ಮುಸ್ಲಿಂ – 3, 90,000.
ರಡ್ಡಿ – 1, 30,000.
ಕೂಡು ಒಕ್ಕಲಿಗ – 86,000.
ಬಣಜಿಗ – 1,00,000.
ಗಾಣಿಗ – 1,00,000
ಹಾಲುಮತ – 1,00,000.
ಇತರರು – 2,00,000.

* ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next