Advertisement

ಸುನೀಲ, ರೋಹಿತ್‌ ಮನೆಗೆ ಬಂದಿದ್ದು ನಿಜ

11:35 AM Feb 13, 2017 | |

ಬೆಂಗಳೂರು: “ಯಲಹಂಕದ ಕೋಗಿಲು ಕ್ರಾಸ್‌ ಬಳಿ ದಾಸನಪುರ ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ್‌ ಮೇಲೆ ನಡೆದ ಶೂಟೌಟ್‌ ಪ್ರಕರಣದ ಆರೋಪಿಗಳು ಎನ್ನಲಾದ ಸೈಲೆಂಟ್‌ ಸುನೀಲ ಮತ್ತು ಒಂಟೆ ರೋಹಿತ್‌ ನನ್ನ ಮನೆಗೆ ಬಂದಿದ್ದು ನಿಜ,” ಎಂದು ಅಗ್ನಿ ಶ್ರೀಧರ್‌ ಹೇಳಿದ್ದಾರೆ.

Advertisement

“ಶೂಟೌಟ್‌ ನಡೆದ ಒಂದು ದಿನ ಮುಂಚೆ ಸುನೀಲ ನಮ್ಮ ಮನೆಗೆ ಬಂದಿದ್ದ. ಶೂಟೌಟ್‌ ದಿನ ಒಂಟೆ ರೋಹಿತ್‌ ಬಂದಿದ್ದ. ಆದರೆ, ಅವರಿಬ್ಬರೂ ಮನೆಗೆ ಬಂದಿದ್ದು ಕರುನಾಡ ಸೇನೆಯ ಬಗ್ಗೆ ಮಾತನಾಡುವುದಕ್ಕಾಗಿಯೇ ಹೊರತು ಬೇರೆ ಕಾರಣಗಳಿಗೆ ಅಲ್ಲ,” ಎಂದು ಸ್ಪಷ್ಟಪಡಿಸಿದರು.

ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಫೆ.7 ರಂದು ಪೊಲೀಸ್‌ ಅಧಿಕಾರಿಗಳು ಮನೆ ಬಳಿ ಬಂದು ರೋಹಿತ್‌, ಸೈಲಂಟ್‌ ಸುನೀಲ ನಿಮ್ಮ ಮನೆಯಲ್ಲಿ ಇದ್ದಾರೆ. ಅವರನ್ನು ವಶಕ್ಕೆ ಪಡೆಯಲು ಸರ್ಚ್‌ ವಾರೆಂಟ್‌ ತಂದಿದ್ದೇವೆ ಎಂದರು. ಅದಕ್ಕೆ ಒಪ್ಪಿ ಮನೆಯ ಶೋಧಕ್ಕೆ ಸಹಕರಿಸಿದೆ.  

ಮನೆ ಶೋಧದ ವೇಳೆ ಮಗ ಮಲಗಿದ್ದ ಕೊಠಡಿಯ ಬಾಗಿಲು ತೆರೆಯುವಂತೆ ಪೊಲೀಸ್‌ ಅಧಿಕಾರಿಗಳು ಸೂಚಿಸಿದ್ದರು. ಮಧ್ಯಾಹ್ನ 1.30ರ ತನಕ ಆತ ನಿದ್ರೆಯಿಂದ ಏಳುವುದಿಲ್ಲ ಎಂದು ಹೇಳಿದಾಗ ಸುಮ್ಮನಾದ ಪೊಲೀಸರು ಆತ ಎದ್ದ ಬಳಿಕವೇ ಶೋಧ ನಡೆಸಿದ್ದರು. ಆದರೆ, ಆ ವೇಳೆ ಸುನೀಲ ಮತ್ತು ರೋಹಿತ್‌ ಇಬ್ಬರೂ ಮನೆಯಲ್ಲಿರಲಿಲ್ಲ,” ಎಂದು ಹೇಳಿದರು.

“ಕಳೆದ ಮೂರು ವರ್ಷಗಳಿಂದ ಈ ಇಬ್ಬರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸವನ್ನು ನಾನು ಮಾಡುತ್ತಿದ್ದೆ. ಅವರನ್ನು ನನ್ನ ಮಕ್ಕಳಂತೆ ನೋಡಿಕೊಳುತ್ತಿದ್ದೆ. ನಮ್ಮ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದೆ. ಇದೀಗ ಅವರ ಮೇಲೆ ಶ್ರೀನಿವಾಸ್‌ ಮೇಲಿನ ಶೂಟೌಟ್‌ ಪ್ರಕರಣದ ಆರೋಪ ಬಂದಿದ್ದು, ಆರೋಪಿಗಳಾಗಿದ್ದರೆ ತನಿಖೆ ಎದುರಿಸುವಂತೆ ಸೂಚಿಸಿದ್ದೇನೆ. ತನಿಖೆ ಮುಗಿದ ನಂತರ ಸತ್ಯಾಂಶ ಹೊರಬರುತ್ತದೆ,” ಎಂದರು.

Advertisement

“ಕೆಲ ಮಾಧ್ಯಮಗಳು ಪೊಲೀಸರು ಬೆಳಗ್ಗೆ ಹತ್ತು ಗಂಟೆಗೆ ಅಗ್ನಿ ಶ್ರೀಧರ್‌ ಮನೆಗೆ ತೆರಳಿದರು. ನಂತರ ನನ್ನ ಮೇಲೆ ಹಲ್ಲೆ ಮಾಡಿದರು. ನಂತರ ನಾನು ಕುಸಿದು ಬಿದ್ದೆ ಎಂದೆಲ್ಲಾ ವರದಿ ಮಾಡಿದವು. ಮನೆಗೆ ಬಂದಿದ್ದ ಡಿಸಿಪಿ ನಾರಾಯಣ್‌, ಶೂಟೌಟ್‌ ಬಗ್ಗೆ ಕೆಲ ಮಾಹಿತಿ ಪಡೆಯಲು ಬಂದಿರುವುದಾಗಿ ಹೇಳಿದ್ದರು.

ಅದಕ್ಕೆ ಒಂದು ದಿನದ ಹಿಂದೆ ಸೈಲಂಟ್‌ ಸುನೀಲ ಬಂದಿದ್ದ. ಶೂಟೌಟ್‌ ಆದ ದಿನ ಸಂಜೆ ಒಂಟೆ ರೋಹಿತ್‌ ಸಹ ಬಂದಿದ್ದ. ಅವರಿಬ್ಬರು ಬಂದಿದ್ದು ಕರುನಾಡ ಸೇನೆ ಬಗ್ಗೆ ಮಾತನಾಡುವ ಸಲುವಾಗಿ. ಈ ಸಂದರ್ಭದಲ್ಲಿ ಶೂಟೌಟ್‌ ಬಗ್ಗೆ ರೋಹಿತ್‌ನನ್ನು ಕೇಳಿದಾಗ ಆತ ನನಗೇನೂ ಗೊತ್ತಿಲ್ಲ ಎಂದು ತಿಳಿಸಿದ್ದ. ಈ ಎಲ್ಲಾ ಅಂಶವನ್ನು ನನ್ನ ಮನೆಗೆ ಬಂದ ಪೊಲೀಸರಿಗೆ ತಿಳಿಸಿ ಸಂಪೂರ್ಣ ಸಹಕಾರ ನೀಡಿದ್ದೆ,” ಎಂದರು.

ನನ್ನ ಕಪಾಳಕ್ಕೆ ಹೊಡೆದರು, ನಂತರ ವಿಷಾದಿಸಿದರು: ಮನೆಗೆ ಬಂದಿದ್ದ ಕೆಲ ಪೊಲೀಸ್‌ ಅಧಿಕಾರಿಗಳು ಪುಸ್ತಕ, ಟೇಬಲ್‌ಗ‌ಳನ್ನು ತಪಾಸಣೆ ಮಾಡುತ್ತಿದ್ದರೂ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನಾನು, ನೀವು ಬಂದಿರೋದು ಇಬ್ಬರನ್ನು ಹುಡುಕಲು. ಅದು ಬಿಟ್ಟು ಈ ರೀತಿ ಮಾಡುವುದು ಸರಿಯಲ್ಲ ಎಂದಾಗ ಡಿಸಿಪಿ ನಾರಾಯಣ್‌ ಅವರು ಜೋರಾಗಿ ಮಾತನಾಡದಂತೆ ಗಟ್ಟಿ ಧ್ವನಿಯಲ್ಲಿ ಸೂಚಿಸಿದರು.

ಆಗ ಕೆಳಗಡೆ ನಿಂತಿದ್ದ ನನ್ನ ಗನ್‌ ಮ್ಯಾನ್‌ ಮೇಲೆ ಪೊಲೀಸರು ಹಲ್ಲೆ ಮಾಡಿದ್ರು. ಇದರಿಂದ ನಾನು ಕೋಪಗೊಂಡು ಪ್ರತಿಕ್ರಿಯಿಸಿದಾಗ ಅಧಿಕಾರಿಯೊಬ್ಬರು ಕಪಾಳಕ್ಕೆ ಹೊಡೆದರು. ಆ ಅಧಿಕಾರಿಯನ್ನು ನಾನು ದುರುಗುಟ್ಟಿ ನೋಡಿ ಎಚ್ಚರಿಕೆ ನೀಡಿದಾಗ ಡಿಸಿಪಿ ಹರ್ಷ ಸಮಾಧಾನ ಮಾಡಿದರು. ಬಳಿಕ ನನಗೆ ಹೊಡೆದ ಅಧಿಕಾರಿಯೇ ಅದಕ್ಕೆ ವಿಷಾದಿಸಿದರು ಎಂದು ವಿವರಿಸಿದರು.

ಮಾಧ್ಯಮಗಳ ವಿರುದ್ಧ ಅಗ್ನಿ ಆಕ್ರೋಶ 
ತಮ್ಮನ್ನು ಪ್ರಗತಿಪರ ವೇಷಧಾರಿ ಎಂದು ಬಿಂಬಿಸಿದ ಕೆಲ ಮಾಧ್ಯಮಗಳ ವಿರುದ್ಧ ಅಗ್ನಿ ಶ್ರೀಧರ್‌ ಕೆಂಡಕಾರಿದ್ದಾರೆ. ಕೆಲ ಮಾಧ್ಯಮಗಳಲ್ಲಿ  ನನ್ನನ್ನು ಏಕವಚನದಲ್ಲಿ ರೌಡಿಶೀಟರ್‌, ಭೂಗತ ಪಾತಕಿ ಎಂದಿದ್ದರೆ ಬೇಸರವಾಗುತ್ತಿರಲಿಲ್ಲ. ಬದಲಾಗಿ ಪ್ರಗತಿಪರ ವೇಷಧಾರಿ ಎಂದರು.

ಭೂಗತ ಜಗತ್ತು ಬಿಟ್ಟು, ಪ್ರಗತಿಪರ ಧೋರಣೆ ಅಳವಡಿಸಿಕೊಂಡು ಸಾಹಿತ್ಯ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದೇನೆ. ಆದರೆ, ಕೆಲವರು ಉದ್ದೇಶ ಪೂರ್ವಕವಾಗಿ ಮಾಧ್ಯಮಗಳಲ್ಲಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಅಂತಹ ಕೆಲ ಮಾಧ್ಯಮಗಳ ವಿರುದ್ಧ ಮಾನನಷ್ಟ ಮತ್ತು ಕ್ರಿಮಿನಲ್‌ ಮೊಕದ್ದಮೆ ದಾಖಲಿಸುತ್ತೇನೆ ಎಂದು ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next