ಮುಂಬೈ: ಬಾಲಿವುಡ್ನ ಕಾಮಿಡಿಯನ್ ಸುನೀಲ್ ಪಾಲ್ ವೆಬ್ ಸೀರಿಸ್ ಗಳ ವಿರುದ್ಧ ಹರಿಹಾಯ್ದಿದ್ದಾರೆ. ಸೆನ್ಸಾರ್ ಮಾಡಿಸಿಕೊಳ್ಳದ ಈ ವೆಬ್ ಸೀರಿಸ್ ಗಳು ಪೋರ್ನ್ ಸಿನಿಮಾಗಳಿದ್ದಂತೆ ಎಂದು ಕಿಡಿಕಾರಿದ್ದಾರೆ.
ಇತ್ತೀಚಿಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುನೀಲ್, ರಾಷ್ಟ್ರ ಪ್ರಶಸ್ತಿ ವಿಜೇತ ಮನೋಜ್ ಬಾಜ್ ಪೇಯಿ ಅವರನ್ನೂ ಟೀಕಿಸಿದ್ದಾರೆ.
‘ಕೆಲ ದೊಡ್ಡ ನಟರು ವೆಬ್ ಸೀರಿಸ್ಗಳಲ್ಲಿ ಸೆನ್ಸಾರ್ಶಿಪ್ ಇಲ್ಲ ಎಂಬುದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಈಗ ಬರುತ್ತಿರುವ ವೆಬ್ ಸೀರಿಸ್ಗಳನ್ನು ಮನೆಯಲ್ಲಿ ಕೂತು ನೋಡೋಕೆ ಸಾಧ್ಯವಿಲ್ಲ. ನನಗೆ ಮನೋಜ್ ಬಾಜ್ಪೇಯಿ ಸೇರಿ ಮೂರ್ನಾಲ್ಕು ನಟರು ಇಷ್ಟವಾಗುವುದಿಲ್ಲ. ಮನೋಜ್ ಅವರಷ್ಟು ದುರ್ವರ್ತನೆ ತೋರುವ ನಟನನ್ನು ನಾನು ಈವರೆಗೆ ನೋಡಿಲ್ಲ’ ಎಂದಿದ್ದಾರೆ ಅವರು.
‘ನಿಮಗೆ (ಮನೋಜ್ ಬಾಜ್ಪೇಯಿ) ರಾಷ್ಟ್ರಪ್ರಶಸ್ತಿ ಸಿಕ್ಕಿದೆ. ಹೀಗಿರುವಾಗ ಫ್ಯಾಮಿಲಿ ಆಡಿಯನ್ಸ್ಗಾಗಿ ನೀವೇನು ಮಾಡುತ್ತಿದ್ದೀರಿ? ನಿಮ್ಮ ಪತ್ನಿ ಬೇರೆಯವರ ಜತೆ ಅಕ್ರಮ ಸಂಬಂಧ ಇಟ್ಟುಕೊಳ್ಳುವ ವೆಬ್ ಸೀರಿಸ್ಗಳನ್ನು (ದಿ ಫ್ಯಾಮಿಲಿ ಮ್ಯಾನ್) ಮಾಡುತ್ತಿದ್ದೀರಿ. ನಿರ್ದೇಶಕರು ಲೋನಾವಾಲದಲ್ಲಿ ಏನಾಯಿತು ಎಂಬ ಕುತೂಹಲವನ್ನು ಪ್ರೇಕ್ಷಕರಲ್ಲಿ ಹಾಗೆಯೇ ಉಳಿಸಿದ್ದಾರೆ. ಇದು ವೆಬ್ ಸೀರಿಸ್ಗಳೇ? ಫ್ಯಾಮಿಲಿ ಮ್ಯಾನ್, ಮಿರ್ಜಾಪುರ್ ವೆಬ್ ಸೀರಿಸ್ಗಳು ಪೋರ್ನ್ ಸಿನಿಮಾಗಳಿದ್ದಂತೆ. ಇದರಲ್ಲಿ ಸ್ಟಾರ್ ನಟರು ನಟಿಸಿದ್ದಾರೆ. ಈ ರೀತಿಯ ವೆಬ್ ಸೀರಿಸ್ಗಳನ್ನು ಅಶ್ಲೀಲತೆ ಸಾರುತ್ತವೆ ಎಂದು ಬ್ಯಾನ್ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.