ಉಡುಪಿ : ಟೋಕಿಯೋ ಒಲಂಪಿಕ್ಸ್‌ನಲ್ಲಿ ಭಾರತದ ಕ್ರೀಡಾಳುಗಳು ಉತ್ತಮ ಸಾಧನೆ ಮಾಡಿದ್ದಾರೆ. ಇವರ ಈ ಸಾಧನೆ ಜಗತ್ತಿನ ಕಣ್ಣು ತೆರೆಸಿದೆ. ಕ್ರೀಡಾಕ್ಷೇತ್ರದಲ್ಲಿ ಇಂದು ಹಲವಾರು ಪ್ರಯೋಗಗಳು ನಡೆಯುತ್ತಿದೆ. ಕ್ರೀಡಾಚಟುವಟಿಕೆಯಿಂದ ಮಾನಸಿಕ ಸದೃಢತೆ ಸಾಧ್ಯವಿದೆ ಎಂದು ಸಚಿವ ವಿ.ಸುನೀಲ್ ಕುಮಾರ್ ಹೇಳಿದರು.
ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಸೋಮವಾರ ಅಜ್ಜರಕಾಡುವಿನ ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಾಜ್ಯಮಟ್ಟದ ಹಿರಿಯರ ಮತ್ತು ಕಿರಿಯರ 23ರ ವಯೋಮಿತಿಯ ಪುರುಷ ಮತ್ತು ಮಹಿಳೆಯರ ಆ್ಯತ್ಲೆಟಿಕ್ ಚಾಂಪಿಯನ್‌ಶಿಪ್ ಉದ್ಘಾಟಿಸಿ ಅವರು ಮಾತನಾಡಿದರು.
ಈ ಚಾಂಪಿಯನ್‌ಶಿಪ್ ಮೂಲಕ ಜಿಲ್ಲೆಯ ಕ್ರೀಡಾಳುಗಳು ರಾಷ್ಟ್ರಮಟ್ಟದಲ್ಲಿ ಮಿಂಚುವಂತಾಗಲಿ ಎಂದು ಹಾರೈಸಿದರು.
ಇದನ್ನೂ ಓದಿ :ಬೈಕ್ ರೈಡಿಂಗ್ ಹೊರಟ್ಟಿದ್ದ ಪುತ್ತೂರಿನ ಯುವಕರ ತಂಡಕ್ಕೆ ಅಪಘಾತ : ಓರ್ವ ಸಾವು, ಇಬ್ಬರು ಗಂಭೀರ
ಶಾಸಕರು ಹಾಗೂ ಕ್ರೀಡಾ ಕೂಟದ ಸಂಘಟನ ಸಮಿತಿಯ ಅಧ್ಯಕ್ಷ ಕೆ.ರಘುಪತಿ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಮಾರು 750ರಷ್ಟು ಮಂದಿ ಕ್ರೀಡಾಳುಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಇಲ್ಲಿ ಆಯ್ಕೆಯಾದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಸರಕಾರ ಈ ಕ್ರೀಡಾಕೂಟಕ್ಕೆ 5 ಲ.ರೂ.ನೆರವು ನೀಡಿದೆ ಎಂದರು.
ಮಾಹೆಯ ಸಹಕುಲಾಧಿಪತಿ ಡಾ| ಎಚ್.ಎಸ್.ಬಲ್ಲಾಳ್ ಅಧ್ಯಕ್ಷತೆ ವಹಿಸಿದ್ದರು. ಮಾಹೆ ಕುಲಪತಿ ಲೆ| ಜ|ಎಂ.ಡಿ.ವೆಂಕಟೇಶ್, ಎನ್‌ಇಬಿ ನ್ಪೋರ್ಟ್ಸ್ ಎಂಟರ್‌ಟೈನ್‌ಮೆಂಟ್‌ನ ಸಿಎಂಡಿ ನಾಗರಾಜ್ ಅಡಿಗ, ರಾಜ್ಯ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಷನ್ ಕಾರ್ಯದರ್ಶಿಗಳಾದ ರಾಜವೇಲು, ರಾಷ್ಟ್ರೀಯ ಕ್ರೀಡಾಪಟು ಅಶ್ವಿನಿ, ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಅಸೋಸಿಯೇಷನ್ ಗೌರವಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ಅಧ್ಯಕ್ಷ ಡಾ| ಕೆಂಪರಾಜ್, ಕೋಶಾಧಿಕಾರಿಗಳಾದ ದೀಪಕ್ ರಾಮ್ ಬಾಯರಿ, ಸಂಘಟನ ಸಮಿತಿ ಕಾರ್ಯದರ್ಶಿಗಳಾದ ಮಹೇಶ್ ಠಾಕೂರ್ ಹಾಗೂ ಪ್ರಮುಖರು ಉಪಸ್ಥಿತರಿದ್ದರು. ಕಾರ್ಯದರ್ಶಿ ದಿನೇಶ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.