ಹುಬ್ಬಳ್ಳಿ: ವಿಫಲವಾದ ವಿದ್ಯುತ್ ಪರಿವರ್ತಕಗಳನ್ನು 24 ಗಂಟೆ ಒಳಗಾಗಿ ಬದಲಾಯಿಸಲು ಹೆಸ್ಕಾಂ ಕ್ರಮ ಕೈಗೊಂಡಿರುವ ಕುರಿತಾಗಿ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ ಕುಮಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಚಿವರು ಬುಧವಾರ ಇಲ್ಲಿನ ಕಾರವಾರ ರಸ್ತೆಯಲ್ಲಿನ ವಿದ್ಯುತ್ ನಗರಕ್ಕೆ ಭೇಟಿ ನೀಡಿ, 100 ದಿನದ ಕಾರ್ಯಕ್ರಮ ಅಂಶಗಳಲ್ಲಿ ಒಂದಾದ 24 ಗಂಟೆಯೊಳಗಾಗಿ ವಿಫಲವಾದ ವಿದ್ಯುತ್ ಪರಿವರ್ತಕಗಳನ್ನು ಬದಲಾಯಿಸಲು ಸಂಗ್ರಹಣ ಮಾಡಿರುವ ವಿದ್ಯುತ್ ಪರಿವರ್ತಕಗಳ ಬ್ಯಾಂಕ್‌ಗಳನ್ನು ವೀಕ್ಷಣೆ ಮಾಡಿದರು.
ವಿಫಲವಾದ ಪರಿವರ್ತಕಗಳನ್ನು 24 ಗಂಟೆ ಒಳಗಾಗಿ ಬದಲಾಯಿಸಲು ಕೈಗೊಂಡ ಕ್ರಮಗಳ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಉಗ್ರಾಣ, ಎಂಟಿ ವಿಭಾಗದ ಮಾಪಕ ತಪಾಸಣೆ ಪರಿವೀಕ್ಷಣಾಲಯವನ್ನು ವೀಕ್ಷಿಸಿದರು. ನಂತರ ಕೆಪಿಟಿಸಿಎಲ್ ಎಸ್ ಆರ್‌ಎಸ್‌ದಲ್ಲಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್ ದುರಸ್ತಿ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದರಲ್ಲದೆ, ಹೆಸ್ಕಾಂ ಹುಬ್ಬಳ್ಳಿ ವಿಭಾಗದಲ್ಲಿರುವ ಪರಿವರ್ತಕ ಬ್ಯಾಂಕ್ ನಲ್ಲಿರುವ ನಗದ ಗ್ರಾಮೀಣ ವಿಭಾಗಕ್ಕೆ ಮೀಸಲಿರಿಸಿದ ವಿವಿಧ ಸಾಮರ್ಥ್ಯ ಪರಿವರ್ತಕಗಳು ದಾಸ್ತಾನಿನಲ್ಲಿರುವುದನ್ನು ವೀಕ್ಷಿಸಿದರು.
ಹುಬ್ಬಳ್ಳಿ ವಿಭಾಗದಲ್ಲಿ ಪರಿವರ್ತಕ ವೈಫಲ್ಯತೆ ಪ್ರಮಾಣ ಕಡಿಮೆ ಇರುವುದಾಗಿ, ವಿಫಲವಾದ ಕೂಡಲೇ 24 ಗಂಟೆ ಒಳಗಾಗಿ ಬದಲಾಯಿಸಲು ಕ್ರಮ ಕೈಗೊಳ್ಳುತ್ತಿರುವುದಾಗಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಡಿ.ಭಾರತಿ ಸಚಿವರಿಗೆ ಮಾಹಿತಿ ನೀಡಿದರು.
ಹೆಸ್ಕಾಂ ತಾಂತ್ರಿಕ ನಿರ್ದೇಶಕ ಅಂತು ಕಾಂಬಳೆ, ಮುಖ್ಯ ಎಂಜಿನಿಯರ್ ರಮೇಶ ಬೆಂಡಿಗೇರಿ, ಅಧೀಕ್ಷಕ ಇಂಜನಿಯರ್ ಎಂ.ಆರ್.ಶಾನಬಾಗ, ಕಾರ್ಯನಿರ್ವಾಹಕ ಎಂಜಿನಿಯರ್ ಗಳಾದ ಕೃಷ್ಣಪ್ಪ, ಎಸ್.ಜಗದೀಶ, ಪಾಲಿಕೆ ಸದಸ್ಯ ಸಂತೋಷ ಚವ್ಹಾಣ ಹಾಗೂ ಅಧಿಕಾರಿಗಳು ಇದ್ದರು.