ಮುಂಬೈ: ಭಾರತದ ಅತ್ಯಂತ ಯಶಸ್ವಿ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಅವರು ಶನಿವಾರ ಟೆಸ್ಟ್ ನಾಯಕತ್ವಕ್ಕೆ ವಿದಾಯ ಘೋಷಿಸಿದ್ದಾರೆ. ಈ ಮೂಲಕ ವಿರಾಟ್ ಟೆಸ್ಟ್, ಏಕದಿನ, ಟಿ20 ಮತ್ತು ಆರ್ ಸಿಬಿ ಹೀಗೆ ಎಲ್ಲಾ ತಂಡಗಳ ನಾಯಕತ್ವದಿಂದ ಹೊರಬಂದಿದ್ದಾರೆ. ಇನ್ನೇನಿದ್ದರೂ ಕೇವಲ ಆಟಗಾರನಾಗಿ ಮುಂದುವರಿಯುತ್ತೇನೆ ಎಂದು ವಿರಾಟ್ ಖಚಿತ ಪಡಿಸಿದ್ದಾರೆ.
ವಿರಾಟ್ ವಿದಾಯದಿಂದ ಟೆಸ್ಟ್ ನಾಯಕನ ಜಾಗ ಖಾಲಿಯಾಗಿದೆ. ಹೊಸ ನಾಯಕನ ಹೆಸರನ್ನು ಬಿಸಿಸಿಐ ಇನ್ನೂ ಘೋಷಣೆ ಮಾಡಿಲ್ಲ. ರೋಹಿತ್ ಶರ್ಮಾ, ಕೆ.ಎಲ್ ರಾಹುಲ್, ಜಸ್ಪ್ರೀತ್ ಬುಮ್ರಾ, ರವಿ ಅಶ್ವಿನ್ ಹೀಗೆ ಹಲವು ಹಸೆರುಗಳು ಕೇಳಿ ಬರುತ್ತಿದೆ. ಹಲವು ದಿಗ್ಗಜರು ಹೊಸ ನಾಯಕನ ಆಯ್ಕೆ ಕುರಿತಾಗಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸುನೀಲ್ ಗಾವಸ್ಕರ್, “ಭಾರತೀಯ ಕ್ರಿಕೆಟನ್ನು ಯಾರು ಮುಂದಕ್ಕೆ ಕೊಂಡೊಯ್ಯಬೇಕು ಎಂಬುದರ ಕುರಿತು ಆಯ್ಕೆ ಸಮಿತಿಯಲ್ಲಿ ಸಾಕಷ್ಟು ಚರ್ಚೆಯಾಗಲಿದೆ. ಮೂರು ಮಾದರಿಯ ತಂಡಕ್ಕೆ ನೇರವಾಗಿ ಆಯ್ಕೆಯಾಗುವ ಯಾರಾದರೂ ಆಗಿರಬೇಕು. ನೀವು ನನ್ನನ್ನು ಕೇಳಿದರೆ, ನಾನು ಭಾರತದ ಮುಂದಿನ ನಾಯಕನಾಗಿ ರಿಷಬ್ ಪಂತ್ ಅವರನ್ನು ನೋಡುತ್ತೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ:ವಿರಾಟ್ ಕೊಹ್ಲಿ ಭಾರತದ ಅತ್ಯುತ್ತಮ ನಾಯಕ ಎನ್ನುವುದಕ್ಕೆ ಇಲ್ಲಿದೆ ದಾಖಲೆಗಳ ಸಾಕ್ಷಿ
“ರಿಕಿ ಪಾಂಟಿಂಗ್ ಕೆಳಗಿಳಿದಾಗ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವವನ್ನು ರೋಹಿತ್ ಶರ್ಮಾಗೆ ನೀಡಲಾಯಿತು, ನಂತರ ಅವರ ಬ್ಯಾಟಿಂಗ್ ನಲ್ಲಿನ ಬದಲಾವಣೆಯನ್ನು ನೋಡಿ. ಇದ್ದಕ್ಕಿದ್ದಂತೆ ನಾಯಕನ ಜವಾಬ್ದಾರಿಯು ಅವರನ್ನು ಉತ್ತಮ ಬ್ಯಾಟ್ಸಮನ್ನಾಗಿಸಿತು. ನ್ಯೂಲ್ಯಾಂಡ್ಸ್ ನಲ್ಲಿ ಒತ್ತಡದ ಮಧ್ಯೆ ಅವರ ಶತಕವು ಅವರ ಜವಾಬ್ದಾರಿ ಪ್ರಜ್ಞೆಯನ್ನು ತೋರಿಸುತ್ತದೆ” ಎಂದು ಗಾವಸ್ಕರ್ ಹೇಳಿದ್ದಾರೆ.
ನಾರಿ ಕಂಟ್ರಾಕ್ಟರ್ ಗಾಯಗೊಂಡಾಗ 21 ನೇ ವಯಸ್ಸಿನ ಟೈಗರ್ ಪಟೌಡಿ ಅವರು ಪ್ರತಿಕೂಲ ಪರಿಸ್ಥಿತಿಯಲ್ಲಿ ನಾಯಕರಾಗಿದ್ದರು. ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ನಾಯಕರಾಗಿರುವ ಪಂತ್ ಅವರು ಭಾರತೀಯ ಕ್ರಿಕೆಟ್ ಅನ್ನು ಮುಂದಕ್ಕೆ ಕೊಂಡೊಯ್ಯುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ನಾನು ನಂಬುತ್ತೇನೆ, ”ಎಂದು ಅವರು ಸುನಿಲ್ ಗಾವಸ್ಕರ್ ಹೇಳಿದರು.