Advertisement

ಚೌಹಾಣ್‌ಗೆ ಎರಡು ಸಲ ಸೆಂಚುರಿ ತಪ್ಪಿಸಿದ್ದ ಗಾವಸ್ಕರ್‌!

08:38 PM Aug 17, 2020 | mahesh |

ಮುಂಬಯಿ: ಚೇತನ್‌ ಚೌಹಾಣ್‌ ಅವರನ್ನು ಅತ್ಯಂತ ಹತ್ತಿರದಿಂದ ಕಂಡವರು, ಅವರ ದೀರ್ಘ‌ ಕಾಲ ಒಡನಾಡಿಯಾಗಿ ಎಲ್ಲವನ್ನೂ ಬಲ್ಲವರೆಂದರೆ ಸುನೀಲ್‌ ಗಾವಸ್ಕರ್‌. ಒಂದೆಡೆ ಗಾವಸ್ಕರ್‌ ಶತಕಗಳ ರಾಶಿ ಪೇರಿಸುತ್ತಿದ್ದರೆ, ಇನ್ನೊಂದೆಡೆ ಚೌಹಾಣ್‌ ಮೂರಂಕೆಯ ಗಡಿ ತಲುಪಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದರು. ಕೊನೆಗೂ ಸೆಂಚುರಿ ಕಾಣದೆ ಅವರು ಟೆಸ್ಟ್‌ ಬದುಕನ್ನು ಮುಗಿಸಬೇಕಾದುದೊಂದು ದುರಂತವೇ ಆಗಿದೆ. ಚೇತನ್‌ ಚೌಹಾಣ್‌ ಅವರ ಅಗಲಿಕೆಯ ಸಂದರ್ಭದಲ್ಲಿ ಗಾವಸ್ಕರ್‌ ಇದನ್ನು ನೆನಪಿಸಿಕೊಂಡಿದ್ದಾರೆ. ಅವರಿಗೆ ತಾನು ಎರಡು ಸಲ ಶತಕ ತಪ್ಪಿಸಿದ್ದೆ ಎಂಬುದಾಗಿ ಹೇಳಿದ್ದಾರೆ.

Advertisement

ಮುಳುವಾದ ಮೂಢನಂಬಿಕೆ
ಸಾಮಾನ್ಯವಾಗಿ ಆಟಗಾರನೊಬ್ಬ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾಗ ಗಾವಸ್ಕರ್‌ ಕ್ರೀಡಾಂಗಣದ ಬಾಲ್ಕನಿಗೆ ಹೋಗಿ ವೀಕ್ಷಿಸುವುದಿಲ್ಲ. ಆಗ ಆತ ಔಟಾಗುತ್ತಾನೆ ಎಂಬ ಮೂಢನಂಬಿಕೆಯೊಂದು ಅವರಲ್ಲಿತ್ತು. ಹೀಗಾಗಿ ಡ್ರೆಸ್ಸಿಂಗ್‌ ರೂಮ್‌ನಲ್ಲಿದ್ದ ಟಿವಿಯಲ್ಲಿ ಪಂದ್ಯ ನೋಡುತ್ತಿದ್ದರು. ಆಟಗಾರ ಸಾಧನೆಗೈದ ಬಳಿಕ ಬಾಲ್ಕನಿಗೆ ಬಂದು ಅಭಿನಂದಿಸುತ್ತಿದ್ದರು.

ಆಸ್ಟ್ರೇಲಿಯ ವಿರುದ್ಧದ 1981ರ ಅಡಿಲೇಡ್‌ ಟೆಸ್ಟ್‌ನಲ್ಲಿ ಚೇತನ್‌ ಚೌಹಾಣ್‌ ಅಮೋಘ ಪ್ರದರ್ಶನ ನೀಡುತ್ತಿದ್ದರು. ಚೊಚ್ಚಲ ಶತಕದ ನಿರೀಕ್ಷೆಯಲ್ಲಿದ್ದರು. ಆಗ ಸಹ ಆಟಗಾರರೆಲ್ಲ ಗಾವಸ್ಕರ್‌ ಅವರನ್ನು ಒತ್ತಾಯಿಸಿ ಬಾಲ್ಕನಿಗೆ ಕರೆ ತಂದರು. ಅಷ್ಟೇ, ಡೆನ್ನಿಸ್‌ ಲಿಲ್ಲಿ ಅವರ ಓವರಿನ ಮೊದಲ ಎಸೆತವನ್ನೇ ಕೀಪರ್‌ ರಾಡ್ನಿ ಮಾರ್ಷ್‌ಗೆ ಕ್ಯಾಚ್‌ ನೀಡಿದ ಚೌಹಾಣ್‌ 97 ರನ್ನಿಗೆ ಔಟ್‌! ತನ್ನಿಂದಾಗಿ ಚೌಹಾಣ್‌ಗೆ ಶತಕ ತಪ್ಪಿತಲ್ಲ ಎಂದು ಬಹಳ ಪಶ್ಚಾತ್ತಾಪ ಅನುಭವಿಸಿದ್ದೆ ಎಂದಿದ್ದಾರೆ ಗಾವಸ್ಕರ್‌. ಈ 97 ರನ್ನೇ ಟೆಸ್ಟ್‌ನಲ್ಲಿ ಚೌಹಾಣ್‌ ಅವರ ಗರಿಷ್ಠ ಗಳಿಕೆಯಾಗಿದೆ.

“ಆದರೆ ಕಾನ್ಪುರದಲ್ಲಿ ಅಜರುದ್ದೀನ್‌ ಹ್ಯಾಟ್ರಿಕ್‌ ಶತಕದ ಹಾದಿಯಲ್ಲಿದ್ದಾಗ ನಾನು ಈ ತಪ್ಪು ಮಾಡಲಿಲ್ಲ. ಅವರು ಈ ಸಾಧನೆಗೈದು ಬಹಳ ಹೊತ್ತಿನ ಬಳಿಕ ಡ್ರೆಸ್ಸಿಂಗ್‌ ರೂಮ್‌ನಿಂದ ಹೊರಬಂದು ಅಭಿನಂದಿಸಿದೆ’ ಎಂಬುದಾಗಿ ಗಾವಸ್ಕರ್‌ ಹೇಳಿದರು. ಆಗ ಮಾಧ್ಯಮ ಮಿತ್ರರು ತನ್ನ ಗೈರನ್ನು ದೊಡ್ಡದಾಗಿ ಬಿಂಬಿಸಿದ್ದರು ಎಂದೂ ಗಾವಸ್ಕರ್‌ ನೆನಪಿಸಿಕೊಂಡರು!

ಅದೊಂದು ವಿವಾದವಾಗಿತ್ತು…
1981ರ ಸರಣಿಯ ಮುಂದಿನ ಮೆಲ್ಬರ್ನ್ ಪಂದ್ಯದಲ್ಲೂ ಚೌಹಾಣ್‌ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಮೊದಲ ವಿಕೆಟಿಗೆ 165 ರನ್‌ ಒಟ್ಟುಗೂಡಿದಾಗ ವಿವಾದವೊಂದು ಘಟಿಸಿತು. ಲಿಲ್ಲಿ ಎಸೆತಕ್ಕೆ ನೀಡಿದ ಲೆಗ್‌ ಬಿಫೋರ್‌ ತೀರ್ಪನ್ನು ವಿರೋಧಿಸಿ ಜತೆಗಾರ ಚೌಹಾಣ್‌ ಅವರನ್ನು ಕರೆದುಕೊಂಡ ಗಾವಸ್ಕರ್‌ ಪೆವಿಲಿಯನ್‌ನತ್ತ ನಡೆದರು. ಆಗ ಚೌಹಾಣ್‌ 85 ರನ್‌ ಮಾಡಿದ್ದರು. ಆಟ ಪುನರಾರಂಭವಾದಾಗ ಮಾನಸಿಕವಾಗಿ ಕುಗ್ಗಿದ್ದ ಚೌಹಾಣ್‌ ಇದೇ ಮೊತ್ತಕ್ಕೆ ಔಟಾಗಿದ್ದರು. ಅವರಿಗೆ ತನ್ನಿಂದಾಗಿ ಸತತ 2 ಶತಕ ತಪ್ಪಿತು ಎಂದರು ಗಾವಸ್ಕರ್‌!

Advertisement
Advertisement

Udayavani is now on Telegram. Click here to join our channel and stay updated with the latest news.

Next