ಮುಂಬಯಿ: ಸದ್ಯ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಜನ ತರಕಾರಿಗಳನ್ನು ಖರೀದಿಸುತ್ತಿದ್ದಾರೆ ಆದರೆ ಟೊಮ್ಯಾಟೋ ಕೊಳ್ಳಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಟೊಮ್ಯಾಟೋ ಬೆಲೆ ಏರಿಕೆ ಎಲ್ಲರಿಗೂ ಶಾಕ್ ನೀಡಿದೆ.
ಸಾಮಾನ್ಯ ಜನರಿಗೆ ಮಾತ್ರವಲ್ಲದೆ ಬಾಲಿವುಡ್ ಸೂಪರ್ ಸ್ಟಾರ್ ಗಳ ಅಡುಗೆ ಮನೆಗೂ ಟೊಮ್ಯಾಟೋ ಬೆಲೆ ಏರಿಕೆ ಬಿಸಿ ತಟ್ಟಿದೆ. ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರು ತಮ್ಮ ಮನೆಗೂ ಟೊಮ್ಯಾಟೋ ಬೆಲೆ ಏರಿಕೆಯ ಬಿಸಿ ತಟ್ಟಿದೆ ಎನ್ನುವುದರ ಬಗ್ಗೆ ಮಾತನಾಡಿದ್ದಾರೆ.
“ನನ್ನ ಪತ್ನಿ ಮನಾ ಕಳೆದ ಕೆಲ ದಿನಗಳಿಂದ ಎರಡು ಮೂರು ದಿನಕ್ಕೆ ಆಗುವಷ್ಟು ಮಾತ್ರ ತರಕಾರಿಯನ್ನು ತರುತ್ತಿದ್ದಾಳೆ. ನಾವು ತಾಜಾವಾಗಿರುವ ಉತ್ನನ್ನಗಳನ್ನು ಸೇವಿಸಲು ಇಷ್ಟುಪಡುತ್ತೇವೆ. ಇತ್ತೀಚಿನ ದಿನಗಳಲ್ಲಿ ಟೊಮ್ಯಾಟೋ ಬೆಳೆಯ ಬೆಲೆ ಸಾಕಷ್ಟು ಏರಿಕೆ ಆಗಿದೆ. ಇದು ನಮ್ಮ ಮನೆಯ ಅಡುಗೆ ಮನೆಗೂ ತಟ್ಟಿದೆ. ನಾನು ಸೂಪರ್ ಸ್ಟಾರ್ ಆಗಿದ್ದೇನೆ ಆದುದ್ದರಿಂದ ನನಗೇನು ಇದರಿಂದ ಸಮಸ್ಯೆ ಆಗುವುದಿಲ್ಲ ಎಂದು ಜನ ಭಾವಿಸಬಹುದು. ಹಾಗೇನಿಲ್ಲ ನಮ್ಮ ಮನೆಗೂ ಟೊಮ್ಯಾಟೋ ಬೆಲೆ ಏರಿಕೆ ಬಿಸಿ ತಟ್ಟಿದೆ. ಹಾಗಾಗಿ ನಾನು ಹೀಗೀಗಾ ಟೊಮ್ಯಾಟೋ ಸೇವಿಸುವುದನ್ನು ಕಡಿಮೆ ಮಾಡಿದ್ದೇನೆ” ಎಂದು ನಟ “ಆಜ್ ತಕ್” ಸಂದರ್ಶನದಲ್ಲಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು “ನೀವು ಆ್ಯಪ್ ಗಳಲ್ಲಿ ತರಕಾರಿ ಬೆಲೆಗಳನ್ನು ನೋಡಿದರೆ ಶಾಕ್ ಆಗ್ತೀರಾ ಏಕೆಂದರೆ ಅಲ್ಲಿ ಅಂಗಡಿಗಳಿಗಿಂತ ಕಡಿಮೆ ಬೆಲೆಯಲ್ಲಿ ತರಕಾರಿಗಳು ಸಿಗುತ್ತವೆ. ನಾನು ಈ ಆ್ಯಪ್ ಗಳ ಮೂಲಕವೇ ತರಕಾರಿಯನ್ನು ಆರ್ಡರ್ ಮಾಡುತ್ತೇನೆ. ಕಡಿಮೆಯಲ್ಲಿ ಸಿಗುತ್ತದೆ ಎನ್ನುವುದಕ್ಕಲ್ಲ. ಉತ್ಪನ್ನಗಳು ತಾಜಾವಾಗಿರುತ್ತದೆ ಎನ್ನುವ ಕಾರಣಕ್ಕಾಗಿ. ನಾನೊಬ್ಬ ರೆಸ್ಟೊರೆಂಟರ್ ಕೂಡ ಆಗಿರುವುದಕ್ಕಾಗಿ ಯಾವಾಗಲೂ ಉತ್ತಮ ಬೆಲೆಗಳಿಗಾಗಿ ಚೌಕಾಶಿ ಮಾಡುತ್ತೇನೆ. ಆದರೆ ಟೊಮ್ಯಾಟೋ ಬೆಲೆ ಏರಿಕೆಯಿಂದ ಜನರು ರುಚಿ ಮತ್ತು ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಕಾಗಿದೆ” ಎಂದರು.
ಇತ್ತೀಚೆಗೆ ಅಮೆಜಾನ್ ಮಿನಿ ಟಿವಿಯ ಸರಣಿ “ಹಂಟರ್ ಟೂಟೆಗಾ ನಹಿ ತೊಡೆಗಾ” ಸಿರೀಸ್ ನಲ್ಲಿ ಪೊಲೀಸ್ ಆಗಿ ಸುನೀಲ್ ಶೆಟ್ಟಿ ಕಾಣಿಸಿಕೊಂಡಿದ್ದರು. ಇದೇ ವರ್ಷದ ಫೆಬ್ರವರಿಯಲ್ಲಿ “ಹೇರಾ ಫೆರಿ 3” ಚಿತ್ರವನ್ನು ಸುನೀಲ್ ಶೆಟ್ಟಿ ಅನೌನ್ಸ್ ಮಾಡಿದ್ದಾರೆ.