Advertisement
ಸೈಕಲ್..! ನನ್ನ ಬಾಲ್ಯದ ಗೆಳೆಯ. ಒಂದು ಹೊತ್ತಿನ ಊಟ ಬಿಟ್ಟರೂ ಸೈಕಲ್ ತುಳಿಯುವುದನ್ನು ಮಾತ್ರ ನಾನು ನಿಲ್ಲಿಸುತ್ತಿರಲಿಲ್ಲ. ಅದೇನೋ ಆಕರ್ಷಣೆ. ನಾಲ್ವರ ಗುಂಪು ಕಟ್ಟಿಕೊಂಡು ಪ್ರತಿದಿನ ನಾಲ್ಕು ರೌಂಡ್ಸ್ ಹಾಕಿದರೇನೆ ಮನಸ್ಸಿಗೆ ಸಮಾಧಾನ. ಕೆಲವೊಮ್ಮೆ ಅದನ್ನು ಓಡಿಸುತ್ತಿದ್ದ ರಭಸಕ್ಕೆ ಅದರ ಬಿಡಿಭಾಗಗಳು ಎಲ್ಲೆಲ್ಲೋ ಹಾರಿ ಹೋಗುತ್ತಿದ್ದವು. ಅದರೂ ಇಂದಿಗೂ ಸೈಕಲ್ ಸವಾರಿಯ ಗೀಳು ಬಿಟ್ಟಿಲ್ಲ.
Related Articles
Advertisement
ಚಳಿಗಾಲದ ತಂಗಾಳಿ ಬಲವಾಗಿ ಬೀಸುತ್ತಿತ್ತು. ಸುಯ್ಯನೆ ಬೀಸುವ ಗಾಳಿಯೊಂದಿಗೆ ನಾನು ಸಮತಟ್ಟು ರಸ್ತೆಗೆ ಬಂದೆ. ಸೈಕಲ್ ಈಗ ಮೊದಲಿನ ತರಹ ಯದ್ವಾತದ್ವಾ ಅಲ್ಲಾಡುತ್ತಿರಲಿಲ್ಲ. ಇದಕ್ಕೆ ಈವಾಗಲಾದರೂ ಬುದ್ದಿ ಬಂತಲ್ಲ ಎಂದು ಮೆಲ್ಲಗೆ ಹಿಂದಕ್ಕೆ ತಿರುಗಿ ನೋಡಿದೆ. ನನ್ನ ಸ್ನೇಹಿತನೇ ಅಲ್ಲಿರಲಿಲ್ಲ… ಗಾಬರಿಯಾಯ್ತು. ಇಷ್ಟುಹೊತ್ತು ನನ್ನ ಹಿಂದೇನೇ ಕುಳಿತಿದ್ದವನು ಎಲ್ಲಿ ಹಾರಿಹೋದ ಎಂದು ಸಿಡಿಮಿಡಿಗೊಂಡು ಸೈಕಲನ್ನು ಅಲ್ಲೇ ನಿಲ್ಲಿಸಿ ಹಿಂದಕ್ಕೆ ಓಡೋಡಿ ಬಂದೆ…
ಆತ ರಸ್ತೆ ಬದಿಯಲ್ಲಿ ಹಾಕಿದ್ದ ಮರಳಿನ ಮೇಲೆ ಕುಳಿತುಕೊಂಡು ನನ್ನನ್ನೇ ಪಿಳಿಪಿಳಿ ನೋಡುತ್ತಿದ್ದ. “ಏನಾಯ್ತು? ಏಕೆ ಇಲ್ಲಿ ಕುಳಿತಿದ್ದಿ? ಸೈಕಲ್‌ನಿಂದ ಯಾಕೆ ಇಳಿದೆ?’ ಎಂದು ಜೋರುಮಾಡಿದಾಗ ಆತ, “ಇನ್ನು ಮುಂದೆ ನಿನ್ನ ಸೈಕಲ್‌ನಲ್ಲಿ ಬರುವುದಿಲ್ಲ ಮಾರಾಯಾ. ಮೊದಲು ಹೋಗಿ ಅದನ್ನು ಗುಜರಿಗೆ ಹಾಕಿ ಹೊಸದನ್ನು ತೆಗೆದುಕೊ’ ಎಂದ.
ನಡೆದದ್ದಿಷ್ಟು..! ನಾನು ಆತನಿಗೆ ಸೀಟ್‌ನ ಬೋಲ್ಟ್ ಬಿಗಿಗೊಳಿಸುತ್ತಾ ಇರು, ಇಲ್ಲದಿದ್ದರೆ ಸಡಿಲವಾಗುತ್ತೆ ಎಂದಿದ್ದೆನಲ್ಲ; ದುರಾದೃಷ್ಟವಶಾತ್, ಆ ಇಳಿಜಾರಿನಲ್ಲಿ ಹೋಗುವ ರಭಸದಲ್ಲಿ ಆತನಿಗೆ ಆ ಕೆಲಸ ಮಾಡಲು ಆಗಿರಲಿಲ್ಲ. ಪರಿಣಾಮ, ಆತ ಕುಳಿತಿದ್ದ ಸೀಟ್ ಕಳಚಿಕೊಂಡಿತ್ತು… ಅದರೊಡನೆ ಆತನೂ ಮರಳಿನ ಮೇಲೆ ಧೊಪ್ಪನೇ ಬಿದ್ದಿದ್ದ.
ಇಲಿಜಾರು ಇದ್ದಿದ್ದರಿಂದ ಹಾಗೂ ಗಾಳಿಯೂ ಜೋರಾಗಿ ಬೀಸುತ್ತಿದ್ದುದರಿಂದ ಗೆಳೆಯ ಬಿದ್ದ ಸದ್ದಾಗಲಿ, ಸೈಕಲ್ ಹಗುರಾದ ಸಂಗತಿಯಾಗಲಿ ನನಗೆ ಗೊತ್ತಾಗಿರಲಿಲ್ಲ. ಈ ಘಟನೆಯಿಂದ ಶಾಲೆಗೆ ಒಂದು ಗಂಟೆ ತಡವಾಗಿ ಹೋಗಬೇಕಾಯಿತು. ಶಾಲೆಯಲ್ಲಿ ನಮ್ಮ ಕಥೆ ಕೇಳಿದ ಅಧ್ಯಾಪಕರೂ ಸಹಸ್ರನಾಮಾರ್ಚನೆ ಮಾಡಿದರು. ನಾವು ಮಾಡಿಕೊಂಡ ಎಡವಟ್ಟಿನ ಕಥೆ ಕೇಳಿ ಇಡೀ ತರಗತಿ ಬಿದ್ದು ಬಿದ್ದು ನಕ್ಕಿತು.
* ಮಿಥುನ್ ಪಿ.ಜಿ., ಮಡಿಕೇರಿ