ಕೋಲಾರ: ಕೋವಿಡ್ 19 ಸೋಂಕು ತೀವ್ರಗತಿಯಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಆದೇಶ ನೀಡಿರುವ ಭಾನುವಾರದ ಲಾಕ್‌ಡೌನ್ ನಗರದಲ್ಲಿ ಯಶಸ್ವಿಯಾಯಿತು. ಎಪಿಎಂಸಿ ಮಾರುಕಟ್ಟೆ ವಹಿವಾಟು ಹೊರತುಪಡಿಸಿ ಉಳಿದಂತೆ ಅಂಗಡಿ ಮುಂಗಟ್ಟು, ವಾಹನ ಸಂಚಾರ ಬಂದ್ ಆಗಿತ್ತು. ಸೋಂಕಿತರ ಪ್ರಮಾಣ ಏರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾರಿಗೆ ತಂದಿರುವ ಭಾನುವಾರದ ಕರ್ಫ್ಯೂಗೆ ಜಿಲ್ಲೆಯಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ಜನತೆ ಮನೆಯಲ್ಲೇ ಉಳಿದಿದ್ದರು.
ಕೋವಿಡ್ 19 ಮಾರಕ ಸ್ಥಿತಿ ಅರಿತಿರುವ ಜನತೆ ಭಾನುವಾರ ಬೆಳಗ್ಗೆ ಮಾಂಸ, ತರಕಾರಿ ಖರೀದಿಗೆ ವಿರಳವಾಗಿ ಬೈಕ್‌ಗಳ ಮೇಲೆ ಓಡಾಡುತ್ತಿದ್ದು ಬಿಟ್ಟರೆ ನಗರದ ಎಲ್ಲಾ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಅಂಗಡಿ ಮುಂಗಟ್ಟುಗಳು, ಹೋಟೆಲ್, ಮಾಲ್, ರಸ್ತೆ ಬದಿ ವ್ಯಾಪಾರ, ತರಕಾರಿ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು. ನಗರದ ಸದಾ ಜನನಿಬಿಡ ಎಂ.ಜಿ.ರಸ್ತೆ, ದೊಡ್ಡಪೇಟೆ, ಕಾಳಮ್ಮ ಗುಡಿ ಬೀದಿ, ಅಮ್ಮವಾರಿಪೇಟೆ, ಬಸ್ ನಿಲ್ದಾಣ ವೃತ್ತ ಜನರಿಲ್ಲದೇ ಬಿಕೋ ಎನ್ನುತ್ತಿತ್ತು.
ಮಾಂಸದಂಗಡಿಗಳ ವಹಿವಾಟು ಜೋರು: ಕರ್ಫ್ಯೂ ಹಿನ್ನೆಲೆಯಲ್ಲಿ ಜನ ಮನೆಯಲ್ಲೇ ಉಳಿದುಕೊಂಡಿರುವ ಕಾರಣ ಭಾನುವಾರದ ಮಾಂಸದ ವ್ಯಾಪಾರ ಜೋರಾಗಿಯೇ ನಡೆದಿತ್ತು. ಹಾಲು, ಔಷಧಿ, ದಿನಸಿ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಬಂದ್ ಆಗಿತ್ತು.
ನಿಲ್ದಾಣದಲ್ಲಿ ಮೌನ: ಸಾರಿಗೆ ಸಂಸ್ಥೆ ಬಸ್ ಗಳನ್ನು ರಸ್ತೆಗಿಳಿಸದ ಕಾರಣ ನಗರದ ಸಾರಿಗೆ ಸಂಸ್ಥೆ ಬಸ್ ನಿಲ್ದಾಣ ಖಾಲಿಯಾಗಿತ್ತು. ಇಡೀ ನಗರದಲ್ಲಿ ಆಟೋ ಸಂಚಾರವೂ ರದ್ದಾಗಿದ್ದು, ಅದೃಷ್ಟಕ್ಕೆಂಬಂತೆ ಒಂದೋ ಎರಡೋ ಆಟೋಗಳು ಅಲ್ಲಲ್ಲಿ ಕಂಡು ಬಂದವಾದರೂ ಪೊಲೀಸರನ್ನು ಕಂಡೊಡನೆ ಮಾಯವಾದವು. ದ್ವಿಚಕ್ರ ವಾಹನಗಳು ಅಲ್ಲೊಂದು, ಇಲ್ಲೊಂದು ಓಡಾಡಿದ್ದು, ಬಿಟ್ಟರೆ ನಗರದಲ್ಲಿ ಯಾವುದೇ ವಾಹನ ಸಂಚಾರ ಕಂಡು ಬರಲೇ ಇಲ್ಲ. ನಾಗರಿಕರು ತಮಗೆ ಅಗತ್ಯವಾದ ವಸ್ತುಗಳನ್ನು ಶನಿವಾರವೇ ಖರೀದಿಸಿದ್ದರಿಂದಾಗಿ ಯಾವುದೇ ತೊಂದರೆಗೆ ಒಳಗಾಗಲಿಲ್ಲ. ಅಲ್ಲಲ್ಲಿ ಮೆಡಿಕಲ್ ಸ್ಟೋರ್, ಹಾಲಿನ ಬೂತ್ ತೆರೆದಿದ್ದು ಕಂಡು ಬಂತಾದರೂ ಜನರಿಲ್ಲದೇ 12 ಗಂಟೆ ವೇಳೆಗೆ ಅವೂ ಬಂದ್ ಆದವು.
ಎಪಿಎಂಸಿ ವಹಿವಾಟಿಗೆ ವಿರಳ ಜನ ಹಾಜರಿ: ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಎಂಬ ಖ್ಯಾತಿಗೆ ಒಳಗಾಗಿದ್ದ ಕೋಲಾರದ ಎಪಿಎಂಸಿ ಮಾರುಕಟ್ಟೆಗೆ ಕರ್ಫ್ಯೂ ಅಡ್ಡಿಯಾಗಲಿಲ್ಲ, ಜಿಲ್ಲಾಡಳಿತವೇ ರೈತರ ಹಿತದೃಷ್ಟಿಯಿಂದ ವಹಿವಾಟಿಗೆ ಅವಕಾಶ ಕಲ್ಪಿಸಿದ್ದರಿಂದಾಗಿ ಯಥಾಸ್ಥಿತಿ ಮುಂದುವರಿಯಿತಾದರೂ, ಪ್ರತಿದಿನ ಇದ್ದಂತೆ ಜನಸಂದಣಿ ಕಂಡು ಬರಲಿಲ್ಲ. ನಗರದಲ್ಲಿ ವರ್ತಕರು ಈಗಾಗಲೇ ಪ್ರತಿ ದಿನ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೂ ಮಾತ್ರ ವಹಿವಾಟು ನಡೆಸಲು ಸ್ವಯಂಪ್ರೇರಿತವಾಗಿ ನಿರ್ಧರಿಸಿದ್ದು, ಭಾನುವಾರ ಅಂಗಡಿ ತೆರೆಯಲು ಮುಂದಾಗಲಿಲ್ಲ.