ಮೈಸೂರು: ಸಂಡೆ ಲಾಕ್‌ಡೌನ್ ತೆರವಾದ ಮೊದಲ ಭಾನುವಾರ ನಗರದಲ್ಲಿ ಮಿಶ್ರ ಪ್ರತಿ ಕ್ರಿಯೆ ವ್ಯಕ್ತವಾಗಿದೆ. ಜನ ಜೀವನ, ವ್ಯಾಪಾರ ವಹಿವಾಟು ಕೆಲವು ಕಡೆ ಸಹಜ ಸ್ಥಿತಿ ಮರುಳಿತ್ತಾದರೂ, ಇನ್ನೂ ಕೆಲವೆಡೆ ಜನರು ಮನೆಯಿಂದ ಹೊರಬಾರದೇ ಮನೆಯಲ್ಲೇ ಉಳಿದರು.
ರಜೆ ದಿನವಾದ ಭಾನುವಾರ ಸಾರ್ವಜನಿಕ ಸ್ಥಳ ಹಾಗೂ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜನ ಸಂದಣಿ ಉಂಟಾಗಬಾರದೆಂದು ಸರ್ಕಾರ ಸಂಡೆ ಲಾಕ್‌ಡೌನ್ ವಿಧಿಸಿತ್ತು. ಈಗ ತಿಂಗಳ ಬಳಿಕ ಸರ್ಕಾರ ಸಂಡೆ ಲಾಕ್‌ಡೌನ್‌ನನ್ನು ವಾಪಸ್ಸು ಪಡೆದಿದ್ದರೂ, ನಗರದಲ್ಲಿ ವ್ಯಾಪಾರ ವಹಿವಾಟು, ಜನ ಮತ್ತು ವಾಹನ ಸಂಚಾರ ಕಡಿಮೆಯಾಗಿತ್ತು.
ನಿಷೇಧಾಜ್ಞೆ ಮತ್ತು ಲಾಕ್‌ಡೌನ್ ತೆರವು ಮಾಡಿದ್ದ ಹಿನ್ನೆಲೆ ನಗರದ ಬಹುತೇಕ ಕಡೆ ವ್ಯಾಪಾರ ವಹಿವಾಟು ಆರಂಭವಾಯಿತು. ಆನ್‌ಲಾಕ್‌ನ ಮೊದಲ ಭಾನುವಾರ ಆಗಿರುವು ದರಿಂದ ಜನ ಬರುವುದಿಲ್ಲ ಎಂಬ ಭಾವನೆ ಯಿಂದ ಹಲವು ಮಳಿಗೆಗಳು ತೆರೆದಿರಲಿಲ್ಲ. ಉಳಿದಂತೆ ಮಾರುಕಟ್ಟೆ, ಶಾಪಿಂಗ್ ಮಾಲ್‌ಗಳಿಗೆ ಭೇಟಿ ನೀಡಿ ಅಗತ್ಯ ವಸ್ತುಗಳನ್ನು ಖರೀದಿಸಿದರು.
ಭಣಗುಟ್ಟಿದ ಬಸ್ ನಿಲ್ದಾಣ: ನಿರ್ಬಂಧ ತೆರವುಗೊಂಡಿರುವ ಹಿನ್ನೆಲೆ ನಗರದಲ್ಲಿ ಸಾರಿಗೆ ಬಸ್‌ಗಳ ಜತೆಗೆ ಆಟೊ, ಕ್ಯಾಬ್‌ಗಳು ರಸ್ತೆಗಿಳಿದಿದವು. ಆದರೆ, ನಗರ ಸಾರಿಗೆ ಬಸ್ ಗಳ ಸಂಚಾರ ಎಂದಿನಂತಿದ್ದರೂ, ಪ್ರಯಾಣಿಕರ ಸಂಖ್ಯೆ ತೀರಾ ವಿರಳವಾಗಿತ್ತು. ಪರಿಣಾಮ ನಗರ ಬಸ್ ನಿಲ್ದಾಣ ಹಾಗೂ ಗ್ರಾಮಾಂತರ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದವು. ದೇವರಾಜ ಅರಸು ರಸ್ತೆ ಖಾಲಿ: ಭಾನುವಾರ ಸದಾ ಜನಸಂದಸಣಿಯಿಂದ ಕೂಡಿರುತ್ತಿದ್ದ, ನಗರದ ಪ್ರಮುಖ ವಾಣಿಜ್ಯ ರಸ್ತೆ ದೇವರಾಜ ಅರಸು ರಸ್ತೆಯೂ ಕೂಡ ಭಾನುವಾರ ಜನರಿಲ್ಲದೇ ಭಣಗುಟ್ಟಿತು. ಮಧ್ಯಾಹ್ನದ ನಂತರ ಸ್ವಲ್ಪ ವಾಹನಗಳ ಓಡಾಟ ರಸ್ತೆಯಲ್ಲಿ ಕಂಡುಬಂತು.
ಅಲ್ಲದೇ ಜನರು ಬರುವುದಿಲ್ಲವೆಂದು ನಗರದ ಶಿವರಾಂ ಪೇಟೆ, ಸಂತೆಪೇಟೆ, ಬಳೇಪೇಟೆ, ಅಶೋಕ ರಸ್ತೆಯ ಪ್ರಮುಖ ಮಳೆಗೆಗಳು ಸ್ವಯಂ ಪ್ರೇರಿತವಾಗಿ ಬಾಗಿಲು ಮುಚ್ಚಿದ್ದವು. ಚಿಲ್ಲರೆ ಅಂಗಡಿಗಳು, ಮೆಡಿಕಲ್ ಹೊರತುಪಡಿಸಿ, ಇತರೆ ಅಂಗಡಿಗಳ ವ್ಯಾಪಾರಿಗಳು ಸ್ವಯಂ ಪ್ರೇರಿತವಾಗಿಅಂಗಡಿಗಳನ್ನು ಬಂದ್ ಮಾಡಿದ್ದರು. ಮಾಂಸ ಖರೀದಿ ಜೋರು: ಪ್ರತಿ ಭಾನುವಾರದಂತೆ ಮಾಂಸದಂಗಡಿಗಳಲ್ಲಿ ಜೋರಾಗಿಯೇ ವ್ಯಾಪಾರ ನಡೆಯಿತು.
ಚಿಕನ್, ಮಟನ್ ಕೊಂಡುಕೊಳ್ಳಲು ಜನರು ಮಾಂಸದಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಸರತಿಯಲ್ಲಿ ನಿಂತು ಖರೀದಿಸಿದರು. ಶನಿವಾರ ಬಕ್ರೀದ್ ಹಬ್ಬ ಮುಗಿದಿದ್ದ ಹಿನ್ನೆಲೆ ಮಾರನೇ ದಿನವೂ ಮುಸ್ಲಿಂರು ಮಾಂಸ ಖರೀದಿಗೆ ಮುಗಿಬಿದ್ದ ಹಿನ್ನೆಲೆ ನಗರದಲ್ಲಿ ಮಾಂಸ ವ್ಯಾಪಾರ ಸ್ವಲ್ಪ ಜೋರಾಗಿಯೇ ನಡೆಯಿತು.