Advertisement

ಮೆರವಣಿಗೆ

09:30 PM Feb 08, 2020 | Hari Prasad |

ಹೊರಗೆ ಹರಿದಿದೆ ಬೆಳಕು
ತೆರೆಯಬೇಕು ಮುಚ್ಚಿದ ಕಿಟಕಿ ಬಾಗಿಲು
ಬೇಸರದ ನೇಸರನ ಹಣೆಗೆ ಅಂಟಿಸಬೇಕು
ನನ್ನ ಚೇತನವನ್ನು ವಿಧಿಗೆ ನಂಟಿಸಬೇಕು
ಹೊರಬಂದೆ ಕಾಣಲು ಬೆಳಕು.

Advertisement

ಒಮ್ಮೆಲೇ ಗಾಬರಿ,
ಏನು ಈ ಬದಲಾವಣೆ?

ನಿನ್ನೆ ಹೊರಬಂದಿದ್ದೆ
ಬೆಳಗು ಹೀಗೆಯೇ ತೋರಿತ್ತು
ಭಾನುವಿನ ಬರವ,
ಹೂಹಾಸ, ಹಸಿವಿನ ಕುಣಿತ ಪವನದ ಚಲನ
ಬೆಳಕಿನ ಜೊತೆಗೆ ಸ್ಪರ್ಧಿಸುವ ಪ್ರೇರಕ ಚಿತ್ತ
ಸೆಳೆದಿತ್ತು ನಿನ್ನೆ ಸಂಪೂರ್ಣ ತನ್ನತ್ತ
ಈಗೆಲ್ಲಿ… ಈಗೆಲ್ಲಿ…

ಇಂದು ಬೆಳಕಿನ ಮುಖಕೆ
ಕರಿಮೋಡದೋಡ
ಎಲ್ಲಿ ಹೋಯಿತು ಸ್ಪಷ್ಟ ನಿಲುವಿನ ತಿಳಿವು
ಇಲ್ಲಿ ಸುತ್ತಲೂ ಎತ್ತೆತ್ತಲೂ
ಬರಿಯೆ ಅಂಧ ಮೇಘಗಳು,
ಕಪ್ಪು ನೆರಳುಗಳು
ಕೊಂಕು ಕೊರಳು, ಮುಖವಾಡ,
ಹುಸಿತು ಕೆಲೆದಾಟ,
ವಿಷ ಬೆರೆತ ಆ ಹಾರ ಭಾರಗಳು
ಮನಸಿರದ ಭಾರ ನಗೆ ಖಾರಗಳು.

ವಯಸ್ಸಾಗಿದೆ ಕಣ್ಣು ಮಂಜಾಗತೊಡಗಿವೆ
ಬೆಳಕು ನೋಡಲಾಗದೇ ಮೊಗ ಕವಾಟುಗಳನ್ನೆ
ಮುಖವಾಡ ಎಂದು ತಿಳಿದಿರಬೇಕು ನಾ
ಅಂದರೆ
ಇದು ನನ್ನ ಸ್ವಂತದ್ದೇ ಮುಖವಾಡವೇ?

Advertisement

ಬರುವದೇನುಂಟೋ ಅದು
ಬರುವುದು ಖಚಿತ
ಮಂಜುಗಣ್ಣಿನ ಜೊತೆಗೆ
ಮಬ್ಬುಗತ್ತಲೆ ಬಾಚಿ ತನ್ನಲ್ಲಿ ಅಡಗಿಸಿಕೊಳ್ಳಲು ಸದ್ಯ
ಬಾರಿಸುತಿದೆ ಕತ್ತಲದ ರಣಹಲಗೆ
ಬೆಳತನಕ ಆಟಾ ಆಡುವ
ಕಿಳ್ಳಿàಕ್ಯಾತರ ಹಾಡಿನ ನಾದ
ಮೋಹಕ ರಣವಾದ್ಯದ
ಮೈಮರೆಸುವ ವೇಷ ಅಗಾಧ
ಹಳೆಯ ಮೃದಂಗದ ಆ ಆ
ಹಾ ಹಾ ಹಾಹೂಹೂ
ಕತ್ತಲ ಹಾದಿಯ ಹಡದಿಯ ತುಂಬಾ
ಮಲ್ಲಿಗೆ ಸೇವಂತಿಗೆ ಹೂ ಪಕಳೆ
ನೆನಪಾಗಿದೆ
ಅಪ್ಪನ ಸಿದಿಗೆಯ ಸಿಂಗಾರದ ಮೆರವಣಿಗೆ
ಇನ್ನೆಲ್ಲಿದೆ ಸಾವಿನ ಹೊಸ ಉರವಣಿಗೆ…

– ಸಿದ್ಧಲಿಂಗ ಪಟ್ಟಣ ಶೆಟ್ಟಿ ; sipa1939@gmail.com


Advertisement

Udayavani is now on Telegram. Click here to join our channel and stay updated with the latest news.

Next