ವಿನಾಯಕ ಅರಳುಸುರಳಿ ; vinayaka.mb@gmail.com
Advertisement
ಜೊತೆಗೊಂದು ಲೋಟ ಕಾಫಿಯಿದ್ದರಂತೂ ಆ ಸ್ವಾದವೇ ಬೇರೆ! ಒಂದೊಂದು ಪುಟ ಮುಂದಕ್ಕೆ ಹೋದಾಗಲೂ ಹಾಯಿದೋಣಿಯಲ್ಲಿ ಒಂದೊಂದು ಮೈಲು ಮುಂದೆ ತೇಲಿದಂತಿರುತ್ತದೆ. ಪುಸ್ತಕದ ಭೌತಿಕ ಸ್ಪರ್ಶ, ಪುಟಗಳ ಘಮಗಳೆಲ್ಲ ಮಿಶ್ರಿತವಾಗಿ ಕೊಡುವ ಅನುಭೂತಿ ಮೊಬೈಲ್, ಕಂಪ್ಯೂಟರ್‌ಗಳ ಪರದೆಯಲ್ಲಿ ಸಿಗುವುದಿಲ್ಲ.
Related Articles
Advertisement
ಎಲ್ಲವೂ ಚಿಕ್ಕ ಹಾಗೂ ಚೊಕ್ಕದಾಗಿರಬೇಕು, ಇಡೀ ಭಗವದ್ಗೀತೆಯೇ ನಾಲ್ಕು ಸಾಲಿನಲ್ಲಿ ಮುಗಿದುಹೋಗಬೇಕು, ಮಹಾಕಾವ್ಯಗಳೂ ಟೀ ವಿರಾಮದಲ್ಲಿ ಸಿಗುವ ಐದು ನಿಮಿಷದ ಬಿಡುವಿನಲ್ಲಿ ಓದುವಂತಿರಬೇಕು ಎಂಬ ಗಡಿಬಿಡಿಯೇ ಎಲ್ಲರಲ್ಲೂ. ಮುನ್ನೂರು ಪುಟದ ಪುಸ್ತಕವೊಂದನ್ನು ಹಿಡಿದಾಗ ಮನಸ್ಸಿನಲ್ಲಿದ್ದ ತಾಳ್ಮೆಯನ್ನು ಮೂರೂವರೆ ಇಂಚಿನ ಮೊಬೈಲ್ ಸದ್ದಿಲ್ಲದಂತೆ ನುಂಗುತ್ತಿರುವುದು ಅದನ್ನು ಕಂಡುಹಿಡಿದವನಾಣೆಗೂ ಸತ್ಯ!
ಜಗತ್ತಿನ ಹಲವಾರು ಭಾಷೆಗಳಂತೆ ಕನ್ನಡವೂ “ಇ’ ಮಾಧ್ಯಮಕ್ಕೆ ಹೊಂದಿಕೊಳ್ಳುತ್ತಿದೆ. ಇದನ್ನು, ಒಂದಾನೊಂದು ಕಾಲದಲ್ಲಿ ತಾಳೆಗರಿಯಲ್ಲಿದ್ದ ಲಿಪಿಯು ಪುಸ್ತಕ ಮಾಧ್ಯಮಕ್ಕೆ ತೇರ್ಗಡೆಯಾದ ಬೆಳವಣಿಗೆಗೆ ಹೋಲಿಸುವಂತಿಲ್ಲವಾದರೂ ಇಂದಿನ ಕಾಲಮಾನಕ್ಕಿದು ಸೂಕ್ತ ಬೆಳವಣಿಗೆಯೇ. ಯಾವ ಭಾಷೆ ಮನುಷ್ಯನ ಭಾವನೆಗಳ ಹರಿವಿನ ಮಾಧ್ಯಮವಾಗಿರುತ್ತದೋ ಆ ಭಾಷೆ ನಿರಂತರವಾಗಿರುತ್ತದೆ.
ನಾವು ‘ಊಟ ಆಯ್ತಾ, ತಿಂಡಿ ಆಯ್ತಾ?’ ಗಳಿಂದ ಹಿಡಿದು ತತ್‌ಕ್ಷಣಕ್ಕೆ ಹೊಳೆವ ಯೋಚೆನೆಗಳ ತನಕ ಎಲ್ಲವನ್ನೂ ಕನ್ನಡದಲ್ಲೇ ಟೈಪಿಸಿ ಸೋಶಿಯಲ್ ಮೀಡಿಯಾದಲ್ಲೋ, ಮತ್ತೆಲ್ಲೋ ಸಂಭಾಷಿಸುತ್ತೇವೆ, ಅಂಟಿಸುತ್ತೇವೆ. ಅಷ್ಟರಮಟ್ಟಿಗೆ ಅದು ನಮ್ಮೊಳಗೆ ನಿರಂತರವಾಗಿದೆ.
ತೀರಾ ಪುಸ್ತಕವನ್ನೇ ತೆರೆಯದವರು ಸಹಾ ಮೊಬೈಲ್‌ನಲ್ಲಿ ಕಣ್ಣಿಗೆಟಕುವ ಬರಹಗಳೊಳಗೆ ಸಣ್ಣಗೊಂದು ಸುತ್ತು ಅಡ್ಡಾಡುತ್ತಾರೆ.ಇನ್ನು ಪುಸ್ತಕದ ‘ಸ್ವಾದ’ವನ್ನರಿತವರು ಎರಡೂ ಮಾಧ್ಯಮಗಳಲ್ಲಿ ಓದಿಗೆ ತೊಡಗುತ್ತಾರೆ. ಹೀಗೆ “ಇ’ ಅವತರಣಿಕೆಯು ಕನ್ನಡದ ಹರಿವಿಗೆ ಹೊಸದಾದ ಉಪನದಿಯಂತಾಗಿದೆ. ಇತ್ತೀಚೆಗೆ ಕನ್ನಡದ ಬಹಳ ಹಳೆಯ ಮಾಸಿಕ ಪತ್ರಿಕೆಯೊಂದು 1960-70ರ ದಶಕದ ಸಂಚಿಕೆಗಳೂ ಸೇರಿದಂತೆ ತನ್ನ ಅನೇಕ ಹಳೆಯ ಸಂಚಿಕೆಗಳ ಸ್ಕ್ಯಾನ್ ಪ್ರತಿಗಳನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿತು. ತೆರೆದೋದಿದವರಿಗೆ ಅವು ಆ ಕಾಲಘಟ್ಟವನ್ನು ಮರುಸೃಷ್ಟಿಸುವ ಪಳೆಯುಳಿಕೆಗಳಂತೆ ಭಾಸವಾಗುತ್ತವೆ. ಅಲ್ಲದೆ, ಮರುಮುದ್ರಣ ಕಾಣದ ಅದೆಷ್ಟೋ ಹಳೆಯ ಕೃತಿಗಳ ಪಿಡಿಎಫ್ ಪ್ರತಿಗಳು ದೇಹ ನಶಿಸಿದ ಮೇಲೂ ಉಳಿದ ಆತ್ಮಗಳಂತೆ ಅಂತರ್ಜಾಲದಲ್ಲಿ ಕುಳಿತಿವೆ. ಇವೆಲ್ಲ ಸಾಧ್ಯವಾಗಿರುವುದು “ಇ’ ಮಾಧ್ಯಮದಿಂದ. ಹೀಗೆ ಮನುಷ್ಯ ತನ್ನ ಹೃದಯಕ್ಕೆ ತೀರಾ ಹತ್ತಿರದಲ್ಲಿಟ್ಟುಕೊಳ್ಳುವ ಮೊಬೈಲ್‌ನೊಳಗಿನಿಂದ ಕನ್ನಡವು ಚಿಗುರೊಡೆದಿರುವುದು ಸ್ವಾಗತಾರ್ಹವೇ. ಆದರೆ, ಪುಸ್ತಕಗಳು ದೂರಮಾಡಬಾರದಷ್ಟು ಅನಿವಾರ್ಯವಾದ ವ್ಯಕ್ತಿತ್ವದ ಅಂಗಗಳು. ಎರಡರಲ್ಲೂ ಇರುವುದು ಅಕ್ಷರಗಳೇ ಆದರೂ ಎರಡೂ ಉಂಟುಮಾಡುವ ಅನುಭೂತಿ ವಿಭಿನ್ನವಾದುದು. ತಮ್ಮತಮ್ಮ ಮಿತಿಯಲ್ಲೇ ಮನುಷ್ಯನ ವ್ಯಕ್ತಿತ್ವಕ್ಕೆ ನಿರಂತರ ಕಾವು ಕೊಡುತ್ತ ಈ ಎರಡೂ ಕವಲುಗಳೂ ಕನ್ನಡದ ಹೆಮ್ಮರವನ್ನು ಮತ್ತಷ್ಟು ಹಬ್ಬಿಸುತ್ತಿವೆ.