ವಿಜಯಪುರ: ಕೋವಿಡ್ -19 ಸೋಂಕು ಸಾಂಕ್ರಾಮಿಕ ಹರಡುವಿಕೆ ತಡೆಗೆ ರಾಜ್ಯ ಸರ್ಕಾರ ಭಾನುವಾರದ ಕರ್ಫ್ಯೂಗೆ ಜಿಲ್ಲೆಯಲ್ಲಿ ಸೂಕ್ತ ಸ್ಪಂದನೆ ವ್ಯಕ್ತವಾಗಿದೆ. ಕರ್ಫ್ಯೂ ಮೀರಿ ಅನಗತ್ಯ ರಸ್ತೆಗೆ ಇಳಿದವರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಶನಿವಾರ ರಾತ್ರಿಯಿಂದಲೇ ಕರ್ಫ್ಯೂ ಜಾರಿಗೆ ಬಂದ ಕಾರಣ ಜಿಲ್ಲೆಯಾದ್ಯಂತ ಯಾವುದೇ ಅಂಗಡಿ ಮುಂಗಟ್ಟುಗಳು ತೆರೆಯಲಿಲ್ಲ. ಬೀದಿ ಬದಿ ವ್ಯಾಪಾರ ಕೂಡ ಇಲ್ಲದೇ ನಿರ್ಜನ ರಸ್ತೆಗಳು ಬಿಕೋ ಎನ್ನುತ್ತಿದ್ದವು.
ನಗರ ಸಾರಿಗೆ ಸೇರಿದಂತೆ ಎಲ್ಲ ಬಸ್ ಸಂಚಾರ ಸ್ಥಗಿತಗೊಂಡ ಕಾರಣ ಬೆಂಗಳೂರು ಸೇರಿದಂತೆ ವಿವಿಧ ಕಡೆಗಳಿಂದ ಜಿಲ್ಲೆಯ ವಿವಿಧ ನಗರ ಪ್ರದೇಶಗಳಿಗೆ ಬಂದಿಳಿದ ಜನರು ತಮ್ಮ ಊರು ಸೇರಿಕೊಳ್ಳಲು ಪರದಾಡುತ್ತಿದ್ದರು.
ಪರಿಸ್ಥಿತಿ ದುರ್ಲಾಭ ಪಡೆಯಲು ಮುಂದಾದ ಗಲ್ಲಿ ರಸ್ತೆ ಬಳಸಿ ಕದ್ದು ಓಡಾಡುತ್ತಿದ್ದ ಆಟೋ ಚಾಲಕರು, ಬಸ್ ಇಲ್ಲದೇ ಮಕ್ಕಳೊಂದಿಗೆ ಪರದಾಡುತ್ತಿದ್ದ ಜನರಿಗೆ ಎರಡೂವರೆ ಮೂರು ಸಾವಿರ ರೂ. ಬೇಡಿಕೆ ಇಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಾಣಿಸುತ್ತಿದ್ದವು.