ಮೈಸೂರು: ಕೋವಿಡ್ 19 ಸೋಂಕು ಹರಡುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ ಘೋಷಿಸಿರುವ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ಸಾಂಸ್ಕೃತಿಕ ನಗರಿ ಮೈಸೂರು ಭಾನುವಾರ ಸ್ತಬ್ಧಗೊಂಡಿತ್ತು. ನಗರದಲ್ಲಿ ಭಾನುವಾರ ಅಗತ್ಯ ಸೇವೆಗಳು ಹೊರತುಪಡಿಸಿ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿತ್ತು. ಆರ್ಥಿಕ ಸಂಕಷ್ಟದ ನಡುವೆಯೂ ವ್ಯಾಪಾಸ್ಥರು ಆರ್ಥಿಕ ಚಟುವಟಿಕೆ ಸ್ಥಗಿತಗೊಳಿಸಿ ಸರ್ಕಾರದ ಆದೇಶ ಪಾಲಿಸಿದರು. ಶನಿವಾರ ಸಂಜೆ 6 ಗಂಟೆಯಿಂದಲೇ ಸ್ವಯಂ ನಿರ್ಬಂಧ ವಿಧಿಸಿಕೊಂಡ ಕಾರಣ, ನಗರಾದ್ಯಂತ ಸಂಚಾರ ಪೂರ್ಣ ಬಂದ್ ಆಗಿತ್ತು.
ಅಗತ್ಯ ಸೇವೆ: ಭಾನುವಾರ ರಜೆ ಹಿನ್ನೆಲೆಯಲ್ಲಿ ಮಾಂಸದಂಗಡಿಗಳಿಗೆ ವಿನಾಯಿತಿ ನೀಡಲಾಗಿತ್ತು. ದೇವರಾಜ ಮಾರುಕಟ್ಟೆ ಬಳಿಯ ಮಟನ್ ಮಾರುಕಟ್ಟೆ ಹೊರತುಪಡಿಸಿ, ಬೇರೆ ಕಡೆ ಮಾಂಸದಂಗಡಿ ಎದುರು ಸರದಿಯಲ್ಲಿ ನಿಂತಿದ್ದರು. ಉಳಿದಂತೆ ಆಸ್ಪತ್ರೆ, ಔಷಧ, ಹಾಲು, ತರಕಾರಿ, ಹಣ್ಣು, ಪೆಟ್ರೋಲ್ ಬಂಕ್‌ಗಳು ತೆರೆದು ಸಾರ್ವಜನಿಕರಿಗೆ ಸೇವೆ ಕಲ್ಪಿಸಿ ಕೊಟ್ಟವು. ಆದರೂ, ಗ್ರಾಹಕರ ಪ್ರತಿಕ್ರಿಯೆ ನೀರಸವಾಗಿತ್ತು. ಸಾರ್ವಜನಿಕರ ಸಂಚಾರ, ವಾಣಿಜ್ಯ ಮಳಿಗೆಗಳು, ಬಾರ್, ಸಲೂನ್, ಉದ್ಯಾನ, ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಬಂದ್ ಆಗಿದ್ದವು. ಎರಡೂವರೆ ತಿಂಗಳ ಲಾಕ್‌ಡೌನ್ ನಂತರ ಇತ್ತೀಚೆಗಷ್ಟೇ ನಗರದಲ್ಲಿ ವ್ಯಾಪಾರ ವಹಿವಾಟಿಗೆ ವಿನಾಯಿತಿ ನೀಡಲಾಗಿತ್ತು.
ಭಣಗುಟ್ಟಿದ ರಸ್ತೆಗಳು: ಪ್ರತಿದಿನ ಸಾವಿರಾರು ವಾಹನಗಳಿಂದ ಗಿಜಿಗುಡುತ್ತಿದ್ದ ನಗರದ ದೇವರಾಜ ಅರಸು ರಸ್ತೆ, ಸಯ್ನಾಜಿರಾವ್ ರಸ್ತೆ, ನ್ಯೂ ಕಾಂತರಾಜ ಅರಸು ರಸ್ತೆ, ಅರಮನೆ ಸುತ್ತ-ಮುತ್ತ, ಅಶೋಕ ರಸ್ತೆ, ಬೆಂಗಳೂರು ರಸ್ತೆ, ಊಟಿ ರಸ್ತೆ, ಕೆ.ಡಿ.ರೋಡ್, ಹುಣಸೂರು ರಸ್ತೆ, ಬನ್ನೂರು ರಸ್ತೆ, ರಿಂಗ್ ರಸ್ತೆ, ಕೆ.ಟಿ.ಸ್ಟ್ರೀಟ್, ಎನ್.ಆರ್.ಮೊಹಲ್ಲಾ, ಅಗ್ರಹಾರ, ದೇವರಾಜ ಮೊಹಲ್ಲಾ, ಸರಸ್ವತಿಪುರಂ ರಸ್ತೆಗಳು ಖಾಲಿಯಾಗಿದ್ದವು.
ರಸ್ತೆಗಿಳಿಯದ ಬಸ್‌ಗಳು: ಕೆಎಸ್‌ಆರ್‌ಟಿಸಿ, ಖಾಸಗಿ ಬಸ್, ಲಾರಿಗಳು ರಸ್ತೆಗಿಳಿಯದ ಹಿನ್ನೆಲೆಯಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ನಗರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲಾ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳು ಜೀರೋ ಟ್ರಾಫಿಕ್ ಇದ್ದಂತೆ ಇತ್ತು. ಗೂಡ್ಸ್ ಗಾಡಿಗಳು ಮಾತ್ರ ಓಡಾಡುತ್ತಿದ್ದವು. ಗ್ರಾಮೀಣ ಪ್ರದೇಶ ಹಾಗೂ ತಾಲೂಕು ಕೇಂದ್ರಗಳಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳಂತೂ ಬಿಕೋ ಎನ್ನುತ್ತಿದ್ದವು. ನಗರ ರೈಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಕೆಎಸ್‌ಆರ್‌ಟಿಸಿ ಬಸ್‌ಗಳೂ ರಸ್ತೆಗಿಳಿಯಲಿಲ್ಲ. ಇದರಿಂದ ಗ್ರಾಮಾಂತರ, ನಗರ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.