ಮೈಸೂರು: ಕೋವಿಡ್- ಸೋಂಕು ನಿಯಂತ್ರಣ ಸಂಬಂಧ ಸಂಡೇ ಲಾಕ್‌ಡೌನ್‌ಗೆ ಸಾಂಸ್ಕೃತಿಕ ನಗರಿ ಮೈಸೂರು ಮತ್ತೆ ಸ್ತಬ್ಧವಾಯಿತು. ನಗರದಲ್ಲಿ ಭಾನುವಾರ ಅಗತ್ಯ ಸೇವೆ ಹೊರತುಪಡಿಸಿ ಬಹುತೇಕ ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದಲ್ಲದೇ, ಸಂಪೂರ್ಣ ಲಾಕ್‌ಡೌನ್‌ಗೆ ಜನತೆ ಬೆಂಬಲ ನೀಡಿದರು.
ಜೊತೆಗೆ ಆರ್ಥಿಕ ಸಂಕಷ್ಟದ ನಡುವೆಯೂ ವ್ಯಾಪಾರಸ್ಥರು ಆರ್ಥಿಕ ಚಟುವಟಿಕೆ ಸ್ಥಗಿತಗೊಳಿಸಿ ಸರ್ಕಾರದ ಆದೇಶ ಪಾಲಿಸಿದರು. ಸತತ ಎರಡನೇ ಭಾನುವಾರವೂ ಕರ್ಫ್ಯೂ ಮಾದರಿಯಲ್ಲಿ ಲಾಕ್‌ಡೌನ್ ವಿಧಿಸಿದ ಹಿನ್ನೆಲೆ ನಗರದ ಎಲ್ಲೆಡೆ ವಾಹನ, ಜನ ಸಂಚಾರ ಇಲ್ಲದೆ ಸ್ತಬ್ಧವಾಗಿತ್ತು. ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರ ಬರಲಿಲ್ಲ. ಜನ ಮತ್ತು ವಾಹನ ಸಂಚಾರ ವಿರಳವಾಗಿದ್ದರಿಂದ ಮೈಸೂರು ನಗರದ ಹೃದಯ ಸಂಪೂರ್ಣ ಬಿಕೋ ಎನ್ನುತ್ತಿತ್ತು.
ಭಣಗುಟ್ಟಿದ ರಸ್ತೆಗಳು: ಪ್ರತಿದಿನ ಸಾವಿರಾರು ವಾಹನಗಳಿಂದ ಗಿಜಿಗುಟ್ಟುತ್ತಿದ್ದ ನಗರದ ದೇವರಾಜ ಅರಸು ರಸ್ತೆ, ಸಯ್ನಾಜಿ ರಾವ್ ರಸ್ತೆ, ನ್ಯೂ ಕಾಂತರಾಜ ಅರಸು ರಸ್ತೆ, ಅರಮನೆ ಸುತ್ತ-ಮುತ್ತ, ಅಶೋಕ ರಸ್ತೆ, ಬೆಂಗಳೂರು ರಸ್ತೆ, ಊಟಿ ರಸ್ತೆ, ಕೆ.ಡಿ.ರೋಡ್, ಹುಣಸೂರು ರಸ್ತೆ, ಬನ್ನೂರು ರಸ್ತೆ, ರಿಂಗ್ ರಸ್ತೆ, ಕೆ.ಟಿ.ಸ್ಟ್ರೀಟ್, ಎನ್.ಆರ್.ಮೊಹಲ್ಲಾ, ಅಗ್ರಹಾರ, ದೇವರಾಜ ಮೊಹಲ್ಲಾ, ಸರಸ್ವತಿಪುರಂ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಪೊಲೀಸರ ಹದ್ದಿನ ಕಣ್ಣಿನ ನಡುವೆಯೂ ವೈದ್ಯಕೀಯ ಸೇರಿದಂತೆ ವಿವಿಧ ತುರ್ತು ಅವಶ್ಯಕತೆ ಇರುವ ಕೆಲವರು ಮಾತ್ರ ನಗರದಲ್ಲಿ ಸಂಚರಿಸುತ್ತಿದ್ದ ದೃಶ್ಯಗಳು ಕಂಡು ಬಂದಿತು.
ಸಾರ್ವಜನಿಕರ ಸಂಚಾರ, ವಾಣಿಜ್ಯ ಮಳಿಗೆಗಳು, ಬಾರ್, ಸಲೂನ್, ಉದ್ಯಾನ, ಆಟೋ, ಟ್ಯಾಕ್ಸಿ, ಕ್ಯಾಬ್ ಸೇವೆ ಬಂದ್ ಆಗಿದ್ದವು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳು ರಸ್ತೆಗಳು ರಸ್ತೆಗಿಳಿಯದ ಕಾರಣ, ನಗರದ ಗ್ರಾಮಾಂತರ ಬಸ್ ನಿಲ್ದಾಣ, ನಗರ ಬಸ್ ನಿಲ್ದಾಣ ಖಾಲಿಯಾಗಿತ್ತು. ಆಟೋ, ಟ್ಯಾಕ್ಸಿಗಳು ಕೂಡ ರಸ್ತೆಗೆ ಇಳಿಯದ ಕಾರಣ ವಾಹನ ದಟ್ಟಣೆ ಕಂಡು ಬರಲಿಲ್ಲ. ಅಲ್ಲಲ್ಲಿ ಸರಕುಗಳನ್ನು ಸಾಗಿಸುವ ಗೂಡ್ಸ್ ವಾಹನಗಳು ಮಾತ್ರ ಸಂಚರಿಸುತ್ತಿದ್ದವು.