Advertisement

ರವಿವಾರವೂ ಎಚ್ಚರವಿದೆ ಚುನಾವಣಾ ಕಚೇರಿ!

07:51 AM Apr 02, 2018 | |

ಉಡುಪಿ: ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ, ಸಿಬಂದಿಯದ್ದು ಈಗ ಬಿಡುವಿಲ್ಲದ ಕೆಲಸ. ರವಿವಾರ ಸಹಿತ  ರಜಾದಿನಗಳಲ್ಲಿಯೂ ಕಾರ್ಯ ನಿರ್ವಹಣೆಯನ್ನು ಕಡ್ಡಾಯ ಮಾಡಲಾಗಿದೆ. ಕಳೆದೆರಡು ದಿನಗಳಿಂದ ಬೆಳಗ್ಗೆ 9.30ರಿಂದ ತಡರಾತ್ರಿಯವರೆಗೂ ಚುನಾವಣಾ ಕಚೇರಿಗಳು ತೆರೆದೇ ಇದ್ದವು. ಎ. 1ರಂದು ಕೂಡ ಉಡುಪಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಮತ್ತು ತಾಲೂಕು ಚುನಾವಣಾಧಿಕಾರಿ ಕಚೇರಿಗಳು ಬೆಳಗ್ಗಿನಿಂದಲೇ ಚಟುವಟಿಕೆಯಲ್ಲಿ ತೊಡಗಿದ್ದವು.

Advertisement

ಉಡುಪಿ ಮತ್ತು ಕಾಪು ಕ್ಷೇತ್ರಗಳ ಚುನಾವಣಾಧಿಕಾರಿಗಳ ಕಚೇರಿಯನ್ನು ಈ ಹಿಂದಿನ ಹಳೆಯ ಜಿಲ್ಲಾಧಿಕಾರಿ ಕಚೇರಿಯಿಂದ (ತಾಲೂಕು ಕಚೇರಿ) ಅಲ್ಲಿಯೇ ಎದುರಿನಲ್ಲಿರುವ ನಗರಾಭಿವೃದ್ಧಿ ಪ್ರಾಧಿಕಾರದ ಹಳೆಯ ಕಟ್ಟಡಕ್ಕೆ (ಹಳೆಯ ಜಿ.ಪಂ. ಕಟ್ಟಡ) ಸ್ಥಳಾಂತರಿಸಲಾಗಿದೆ. ಇಲ್ಲಿ ರವಿವಾರವೂ ಹಲವಾರು ಮಂದಿ ವಿವಿಧ ರೀತಿಯ ಅನುಮತಿ ಪತ್ರಕ್ಕಾಗಿ ಆಗಮಿಸಿದ್ದರು. 

ಏಕಗವಾಕ್ಷಿ  ಸೇವೆ
ಶನಿವಾರದಿಂದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಏಕಗವಾಕ್ಷಿ ಸೇವೆಯನ್ನು (ಸಿಂಗಲ್‌ ವಿಂಡೋ ಸಿಸ್ಟಂ) ಪೂರ್ಣ ಪ್ರಮಾಣದಲ್ಲಿ ಕಾರ್ಯಗತಗೊಳಿಸ ಲಾಗಿದೆ. ರಾಜಕೀಯ, ಧಾರ್ಮಿಕ, ಇತರ ಕಾರ್ಯಕ್ರಮ, ಸಭೆಗಳಿಗೆ ಬೇಕಾಗಿರುವ ವಿವಿಧ ಇಲಾಖೆಗಳ ಅನುಮತಿಯನ್ನು ಒಂದೇ ಕಚೇರಿಯಲ್ಲಿ ನೀಡಲಾಗುತ್ತಿದೆ. ಮೈಕ್‌ ಪರವಾನಿಗೆಗಾಗಿ ಮತ್ತೂಮ್ಮೆ ಪೊಲೀಸ್‌ ಠಾಣೆಗಳಿಗೆ ಅಲೆದಾಡ ಬೇಕಾಗಿಲ್ಲ. ಸ್ಥಳೀಯ ಗ್ರಾ.ಪಂ. ಮತ್ತು ಇತರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ತೆರಳಬೇಕಾಗಿಲ್ಲ. “ರಾಜಕೀಯ ಮತ್ತು ಖಾಸಗಿ ಸೇರಿ ದಂತೆ ಬಹುತೇಕ ಎಲ್ಲ ಕಾರ್ಯಕ್ರಮ ಗಳಿಗೂ 24 ತಾಸುಗಳ ಒಳಗೆ ಅನುಮತಿ ನೀಡಲಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದ.ಕ.: ಖಾಸಗಿ ಕಾರ್ಯಕ್ರಮಕ್ಕೆ ಅನುಮತಿ ಬೇಕಾಗಿಲ್ಲ?
ಎಲ್ಲ ಕಾರ್ಯಕ್ರಮಗಳಿಗೂ ಅನುಮತಿ ಕಡ್ಡಾಯವಲ್ಲ. ಸಾರ್ವಜನಿಕವಾಗಿ ನಡೆಯುವ ಮತ್ತು ರಾಜಕೀಯ ಕಾರ್ಯಕ್ರಮಗಳಿಗೆ ಮಾತ್ರ ಅನುಮತಿ ಕಡ್ಡಾಯ ಮಾಡಲಾಗಿದೆ. ಖಾಸಗಿಯಾಗಿ ಸಭಾಂಗಣದೊಳಗೆ ನಡೆಯುವ ಕಾರ್ಯಕ್ರಮಗಳಿಗೆ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕಾಗಿಲ್ಲ ಎಂದು ದ.ಕ. ಜಿಲ್ಲಾಧಿಕಾರಿ ಯವರು “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ. ದ.ಕ. ಜಿಲ್ಲೆಯಲ್ಲಿ ಕೂಡ ರಜಾದಿನಗಳಲ್ಲಿಯೂ ಚುನಾವಣಾಧಿಕಾರಿಗಳ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. 

ಅರ್ಜಿ ನಮೂನೆ ಬೇಕಾಗಿಲ್ಲ
ಕಾರ್ಯಕ್ರಮಗಳಿಗೆ ಅನುಮತಿ ಪಡೆಯುವುದಾದರೆ ಬಿಳಿ ಹಾಳೆಯಲ್ಲಿ ಬರೆದು ಕಾರ್ಯಕ್ರಮದ ಆಹ್ವಾನಪತ್ರಿಕೆಯನ್ನು ಲಗತ್ತಿಸಿ ನೀಡಬೇಕಾಗುತ್ತದೆ. ಅನಂತರ ಚುನ ವಣಾಧಿಕಾರಿಗಳು ನಿರ್ದಿಷ್ಟವಾದ ನಮೂನೆಯಲ್ಲಿ ವಿವಿಧ ಷರತ್ತುಗಳನ್ನೊಳಗೊಂಡ ಅನುಮತಿ ಪತ್ರವನ್ನು ನೀಡುತ್ತಾರೆ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದ ಅನಂತರ ಉಡುಪಿ ವಿ. ಸಭಾ ಕ್ಷೇತ್ರದಲ್ಲಿ 116 ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಅದರಲ್ಲಿ 113 ಖಾಸಗಿ ಹಾಗೂ 3 ರಾಜಕೀಯಕ್ಕೆ ಸಂಬಂಧಿಸಿದವುಗಳು. ಕಾಪು ಕ್ಷೇತ್ರದಲ್ಲಿ 70 ಖಾಸಗಿ ಹಾಗೂ 21 ರಾಜಕೀಯ ಕಾರ್ಯ ಕ್ರಮಗಳಿಗೆ ಅನುಮತಿ ನೀಡಲಾಗಿದೆ. 

Advertisement

ಸಿಂಗಾರಗೊಳ್ಳಲಿದೆ ಮತಗಟ್ಟೆ !
ಈ ಬಾರಿ ಹಲವೆಡೆ ಮಹಿಳಾ ಮತಗಟ್ಟೆಗಳನ್ನು ತೆರೆಯಲಾಗುವುದು. ಪೊಲೀಸರು ಸೇರಿದಂತೆ ಚುನಾವಣಾ ಸಿಬಂದಿ, ಅಧಿಕಾರಿಗಳು ಕೂಡ ಮಹಿಳೆಯರೇ ಆಗಿರುವ ಮತಗಟ್ಟೆಗಳು ಇವು. ಮಹಿಳೆಯರು ಮತಗಟ್ಟೆಯನ್ನು ಕೂಡ ಸಂಪೂರ್ಣವಾಗಿ ನಿಭಾಯಿಸಬಲ್ಲರು ಎಂಬುದನ್ನು ತೋರಿಸಿಕೊಟ್ಟು ಮಹಿಳಾ ಸಮಾನತೆಯ ಸಂದೇಶ ಸಾರುವ ಉದ್ದೇಶದಿಂದ ಇಂಥ ಮತಗಟ್ಟೆಗಳನ್ನು ತೆರೆಯಲಾಗುವುದು. ಕೊಲ್ಲೂರು ಸಮೀಪದ ಜಡ್ಕಲ್‌ ಗ್ರಾ.ಪಂ. ವ್ಯಾಪ್ತಿಯ ಒಂದು ಮತಗಟ್ಟೆಯನ್ನು ವಿಶೇಷವಾಗಿ ಅಲಂಕರಿಸಲು ನಿರ್ಧರಿಸಲಾಗಿದೆ. ಈ ಮತಗಟ್ಟೆಯಲ್ಲಿ ಕೊರಗ ಸಮು ದಾಯದ ಜನತೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಳೀಯ ಸಂಪ್ರದಾಯದಂತೆ ಮತಗಟ್ಟೆ ಸಿಂಗರಿಸುವ ಯೋಚನೆ ಇದೆ. ಕೊರಗ ಸಮುದಾಯದವರು ಕೂಡ ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವುದು ಮತ್ತು ಅವರು ಕೂಡ ಸಮಾಜದ ಮುಖ್ಯವಾಹಿನಿ ಜತೆ ಸೇರುವಂತೆ ಮಾಡುವುದು ನಮ್ಮ ಪ್ರಯತ್ನ ಎನ್ನುತ್ತಾರೆ ಜಿ.ಪಂ. ಸಿಇಒ ಮತ್ತು ಸ್ವೀಪ್‌(ಮತದಾರರ ಜಾಗೃತಿ ಅಭಿಯಾನ) ಸಮಿತಿ ಅಧ್ಯಕ್ಷ ಶಿವಾನಂದ ಕಾಪಶಿ.
 
ಅಶಕ್ತರಿಗೆ ವಿಶೇಷ ವ್ಯವಸ್ಥೆ
ಅಂಗವಿಕಲರು ಮತ್ತು ಇತರ ಅಶಕ್ತರನ್ನು ಮತಗಟ್ಟೆಗೆ ಕರೆದುಕೊಂಡು ಬಂದು ಮರಳಿ ಅವರನ್ನು ಮನೆಗೆ ಬಿಡಲು ವಾಹನ ಮತ್ತು ಗಾಲಿ ಕುರ್ಚಿಗಳ ವ್ಯವಸ್ಥೆ ಮಾಡ ಲಾಗುವುದು. ಪ್ರತಿಯೊಂದು ಮತಗಟ್ಟೆಗಳಲ್ಲಿಯೂ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆ ಯರನ್ನೊಳಗೊಂಡ ಸ್ವಯಂಸೇವಕರ ತಂಡ ಇಂತಹ ಮತದಾರರ ನೆರವಿಗೆ ಬರಲಿದೆ. ಮತದಾರರ ಪಟ್ಟಿಯಲ್ಲಿ ಹೆಸರಿನ ಸೇರ್ಪಡೆ, ಮತದಾನ ಕೇಂದ್ರದಲ್ಲಿನ ಸೌಲಭ್ಯ, ಮತದಾನ ದಿನದಂದು ಮತಕೇಂದ್ರಕ್ಕೆ ಬರುವ ವ್ಯವಸ್ಥೆಯ ಕುರಿತು ಸಹಾಯವಾಣಿ 0820-2574811ಗೆ ಕರೆ ಮಾಡ ಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂತೋಷ್‌ ಬೊಳ್ಳೆಟ್ಟು

Advertisement

Udayavani is now on Telegram. Click here to join our channel and stay updated with the latest news.

Next