Advertisement

ಸಂಡೇ ಕರ್ಫ್ಯೂ ಬಹುತೇಕ ಸಕ್ಸಸ್‌ ; ಅಗತ್ಯ ಸೇವೆ ಹೊರತುಪಡಿಸಿ ಉಳಿದೆಲ್ಲವೂ ಸ್ತಬ್ಧ

08:40 AM May 25, 2020 | mahesh |

ಬೆಂಗಳೂರು: ಲಾಕ್‌ಡೌನ್‌ ನಾಲ್ಕನೇ ಹಂತದ ಭಾಗವಾಗಿ ಭಾನುವಾರ ರಾಜ್ಯಾದ್ಯಂತ ಜಾರಿಗೊಳಿಸಲಾಗಿದ್ದ ಕರ್ಫ್ಯೂ ಬಹುತೇಕ ಯಶಸ್ವಿಯಾಗಿದೆ. ಸಂಪೂರ್ಣ ಲಾಕ್‌ಡೌನ್‌ ಅಂಗವಾಗಿ ರಾಜ್ಯಾದ್ಯಂತ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿದ್ದವು. ಅಗತ್ಯ ಸೇವೆಗಳಾದ ದಿನಸಿ, ಹಾಲು, ತರಕಾರಿ, ಮಾಂಸದ ಅಂಗಡಿಗಳಿಗೆ ವಿನಾಯಿತಿ ನೀಡಿದ್ದರಿಂದ ಬೆಳಗ್ಗೆ ಮಾರುಕಟ್ಟೆಗಳಲ್ಲಿ ಜನದಟ್ಟಣೆ ಕಂಡುಬಂದಿತ್ತಾದರೂ ನಂತರ ಜನ ಸಂಚಾರ ವಿರಳವಾಗಿತ್ತು.

Advertisement

ಕೈಗಾರಿಕೆಗಳು, ಕಾರ್ಖಾನೆಗಳು ಸೇರಿ ವಾಣಿಜ್ಯ ಮಳಿಗೆಗಳು ಸಂಪೂರ್ಣವಾಗಿ ಬಂದ್‌ ಆಗಿದ್ದವು. ಪೂರ್ವನಿಗದಿಯಾಗಿದ್ದ ವಿವಾಹಕ್ಕೆ ಅವಕಾಶ ಇದ್ದ
ಕಾರಣ ಭಾನುವಾರದ ಮಹೂರ್ತದಲ್ಲಿ ನವ ಜೀವನಕ್ಕೆ ಕಾಲಿಟ್ಟವರು ಸರಳವಾಗಿ ವಿವಾಹ ನೆರವೇರಿಸಿಕೊಂಡರು. ಲಾಕ್‌ಡೌನ್‌ ಒಂದು ಹಾಗೂ ಎರಡನೇ ಹಂತದಲ್ಲಿ ಜಾರಿ ಮಾಡಿದ್ದಂತೆ ಶನಿವಾರ ರಾತ್ರಿ 7 ಗಂಟೆಯಿಂದಲೇ ಪ್ರಮುಖ ರಸ್ತೆ, ಮೇಲ್ಸೇತುವೆಗಳನ್ನು ಬ್ಯಾರೀಕೇಡ್‌ಗಳಿಂದ ಮುಚ್ಚಿ ಸಂಚಾರ ನಿಷೇಧಿಸಲಾಗಿತ್ತು. ಲಾಕ್‌ಡೌನ್‌ ವಿನಾಯಿತಿಯಿಂದ ವಾರವಿಡೀ ಕೆಲಸ ಕಾರ್ಯಗಳಲ್ಲಿ ತೊಡಗಿದ್ದವರು ಭಾನುವಾರದ ರಜೆ ಮನೆಯಲ್ಲೇ ಕಳೆದರು. ರಂಜಾನ್‌ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ದಟ್ಟಣೆ ಉಂಟಾಗಿದ್ದರಿಂದ ಕೆಲವೆಡೆ ಪೊಲೀಸರು ಮಧ್ಯಪ್ರವೇಶಿಸಿ ಬೇಗ ಖರೀದಿ ಮುಗಿಸಿ ವಾಪಸ್‌ ಕಳುಹಿಸಿದರು.

ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ಸರ್ಕಾರಿ ಹಾಗೂ
ಖಾಸಗಿ ಬಸ್‌ ಸಂಚಾರ, ರೈಲು ಸಂಚಾರ ಸ್ಥಗಿತಗೊಂಡಿತ್ತು. ಆಟೋ, ಟ್ಯಾಕ್ಸಿ ಸೇವೆಯೂ ಇರಲಿಲ್ಲ. ಅನಗತ್ಯವಾಗಿ ಓಡಾಡುತ್ತಿದ್ದ ದ್ವಿಚಕ್ರ ಹಾಗೂ ಕಾರು ಸೇರಿ ಇತರೆ ವಾಹನಗಳನ್ನು ಜಪ್ತಿ ಮಾಡಲಾಯಿತು. ಬಡಾವಣೆಗಳಲ್ಲಿ ಓಡಾಡುತ್ತಿದ್ದ ಜನರಿಗೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದರು.

ಜಿಲ್ಲಾ ಹಾಗೂ ರಾಜ್ಯದ ಗಡಿಗಳನ್ನು ಬಂದ್‌ ಮಾಡಲಾಗಿತ್ತು. ಕರ್ನಾಟಕ ಆಂಧ್ರದ ಗಡಿ ನಂಗಲಿ, ಕರ್ನಾಟಕ ತಮಿಳುನಾಡಿನ ಕುಪ್ಪಂ, ಹೊಸೂರು ಮೂಲಕ ಒಳಗೆ ಬರಲು ಹಾಗೂ ಹೊರಗೆ ಹೋಗಲು ಯತ್ನಿಸಿದ ಪ್ರಕರಣಗಳು ನಡೆದಿದ್ದು ಪೊಲೀಸರು ಅಂತವರನ್ನು ತಡೆದು ಗಡಿಯಲ್ಲೇ ರಾತ್ರಿವರೆಗೂ ವಶದಲ್ಲಿಟ್ಟುಕೊಂಡಿದ್ದರು.

ಬೆಂಗಳೂರು, ರಾಯಚೂರು, ಯಾದಗಿರಿ, ಕೋಲಾರ, ಚಿಕ್ಕಬಳ್ಳಾಪುರದಲ್ಲಿ ನಿಯಮ ಉಲ್ಲಂಘಿಸಿ ಓಡಾಡುತ್ತಿದ್ದ ಕೆಲವರನ್ನು ವಶಕ್ಕೆ ಪಡೆದು ಪ್ರಕರಣ
ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿಯೂ ನಡೆದಿದೆ. ಲಾಠಿ ಪ್ರಹಾರ ನಡೆಸಿ ಪೊಲೀಸರು
ಗುಂಪು ಚದುರಿಸಿದ್ದಾರೆ. ಬೆಂಗಳೂರಿನ ಅತ್ತಿಬೆಲೆಯಲ್ಲಿ ಪೊಲೀಸರ ಸೂಚನೆ ದಿಕ್ಕರಿಸಿದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿದರು. ಈ
ಮಾರ್ಗದಲ್ಲಿ ಅಗತ್ಯ ಸೇವೆ ಒದಗಿಸುವ ಲಾರಿಯಲ್ಲಿ ಕೆಲವರು ತಮಿಳುನಾಡು ಕಡೆಯಿಂದ ರಾಜ್ಯದೊಳಗೆ ಬರಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕು ಬಿದ್ದರು.
ಅದೇ ರೀತಿ ಬಾಗೇಪಲ್ಲಿ ಕಡೆಯಿಂದ ಆಂಧ್ರದ ಕಡೆಯ ಕಾರ್ಮಿಕರನ್ನು ಕರೆದುಕೊಂಡು ಬರುತ್ತಿದ್ದಾಗಲೂ ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದರು.
ಶಿವಮೊಗ್ಗದಲ್ಲಿ ಅಗತ್ಯ ಸೇವೆ ಸಿಬ್ಬಂದಿ ಎಂದು ಸುಳ್ಳು ಹೇಳಿ ಪಾಸ್‌ ಹೊಂದಿರದ ಐವರನ್ನು ಬಂಧಿಸಲಾಗಿದೆ. ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಬೆಳಗಾವಿ,
ಮೈಸೂರು, ಕಲಬುರಗಿ, ಶಿವಮೊಗ್ಗ, ವಿಜಯಪುರ, ಬಳ್ಳಾರಿ ಸೇರಿ ಪ್ರಮುಖ ನಗರಗಳಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಿನ ಜಾರಿ ಮಾಡಲಾಗಿತ್ತಾದರೂ ಗ್ರಾಮೀಣ
ಭಾಗದಲ್ಲಿ ಲಾಕ್‌ಡೌನ್‌ ಬಗ್ಗೆ ಜನ ಅಷ್ಟಾಗಿ ತಲೆಕೆಡಿಸಿಕೊಂಡಿರಲಿಲ್ಲ. ಲಾಕ್‌ಡೌನ್‌ ನಡುವೆಯೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಗೌಡಹಳ್ಳಿಯಲ್ಲಿ
ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಗುಂಪುಗಳ ನಡುವೆ ನೀರು ಬಿಡುವ ವಿಚಾರವಾಗಿ ಹೊಡೆದಾಟ ನಡೆದು ಓರ್ವ ಮೃತಪಟ್ಟಿದ್ದಾನೆ.

Advertisement

ಮದ್ಯ ಮಾರಾಟ ಬಂದ್‌ ಆಗಿದ್ದರಿಂದ ಶನಿವಾರವೇ ಖರೀದಿಸಿ ಇಟ್ಟುಕೊಂಡಿದ್ದ ಕೆಲವರು ಕಿರಾಣಿ ಅಂಗಡಿಗಳ ಮೂಲಕ ಮಾರಾಟ ಮಾಡಿದ್ದು ಸಾರ್ವಜನಿಕರ
ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮದ್ಯ ವಶಕ್ಕೆ ಪಡೆದಿದ್ದಾರೆ. ಹಾಸನ ಹಾಗೂ ಮಂಡ್ಯದಲ್ಲಿ ನಮ್ಮ ಕಡೆ ಮಾಂಸ ಚೆನ್ನಾಗಿಲ್ಲ ಎಂದು ಬೇರಡೆ ಮಾಂಸ ಖರೀದಿಸುವ ನೆಪ ಹೇಳಿ ಅಕ್ರಮವಾಗಿ ಮದ್ಯ ಮಾರಾಟ ಸ್ಥಳಕ್ಕೆ ತೆರಳುತ್ತಿದ್ದವರನ್ನು ಪೊಲೀಸರು ತಡೆದು ವಾಪಸ್‌ ಕಳುಹಿಸಿದ ಪ್ರಸಂಗ ನಡೆದಿದೆ.
ಹೊಟೇಲ್‌ಗ‌ಳಲ್ಲಿ ಪಾರ್ಸೆಲ್‌ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತಾದರೂ ಖರೀದಿಸುವವರಿಲ್ಲದಂತಾಗಿತ್ತು. ಸಂಜೆ ವೇಳೆಗೆ ಹೋಟೆಲ್‌ಗ‌ಳಲ್ಲಿ ಪಾರ್ಸೆಲ್‌ ಸೇವೆಗೆ
ಸ್ವಲ್ಪ ಮಟ್ಟಿನ ಬೇಡಿಕೆ ಬಂದಿತ್ತು. ಲಾಕ್‌ಡೌನ್‌ ನಡುವೆಯೂ ಕೆಲವರು ಓಡಾಟ ನಡೆಸುತ್ತಿದ್ದರಾದರೂ ಮಧ್ಯಾಹ್ನ 3 ಗಂಟೆ ವೇಳಗೆ ಬೆಂಗಳೂರು ಸೇರಿ
ರಾಜ್ಯದ ಕೆಲವೆಡೆ ಮಳೆ ಸುರಿದ ಕಾರಣ ಜನರು ಮನೆಯಿಂದ ಹೊರಗೆ ಬರಲಿಲ್ಲ.

ಮಾಂಸ ಖರೀದಿಗೆ ಮುಗಿಬಿದ್ದ ಜನ
ಭಾನುವಾರದ ಕರ್ಫ್ಯೂ ನಡುವೆಯೂ ಮಾಂಸ ಮಾರಾಟಕ್ಕೆ ಅನುಮತಿ ಇದ್ದ ಕಾರಣ ಕೆಲವು ನಗರಗಳಲ್ಲಿ ಬೆಳಗ್ಗೆ 10 ಗಂಟೆ ವೇಳೆಗೆ ಅಂಗಡಿ ಮುಚ್ಚಲು ಸಹ ಆದೇಶಸಿದ್ದರಿಂದ ಬೆಳ್ಳಂಬೆಳಗ್ಗೆ ಮಾಂಸ ಖರೀದಿಗಾಗಿ ಜನ ಸಾಲು ಗಟ್ಟಿ ನಿಂತಿದ್ದರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಈಗಾಗಲೇ 750 ರೂ. ಮುಟ್ಟಿದ್ದ ಮಟನ್‌ ದರ ಭಾನುವಾರ 800 ರೂ.ಗೆ ಏರಿಕೆಯಾಗಿತ್ತು. ಚಿಕನ್‌ ದರ 250 ರಿಂದ 300 ರೂ.ವರೆಗೆ ಮಾರಾಟ ಮಾಡಲಾಯಿತು. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಹಕರು ಹಾಗೂ ಅಂಗಡಿ ಮಾಲೀಕರ ನಡುವೆ ಮಾತಿನ ಚಕಮಕಿಯೂ ಕೆಲವೆಡೆ ನಡೆಯಿತು.

ಪೊಲೀಸರಿಂದ ಎಚ್ಚರಿಕೆ
ಸೋಮವಾರ ರಂಜಾನ್‌ ಇದ್ದ ಕಾರಣ ಕೆಲವೆಡೆ ಮಾರುಕಟ್ಟೆಗಳಲ್ಲಿ ಭಾನುವಾರ ಬೆಳಗ್ಗೆ ದಟ್ಟಣೆ ಉಂಟಾಗಿತ್ತು. ಸಾಮಾಜಿಕ ಅಂತರ ಪಾಲನೆಯಾಗಲಿ, ಕಡ್ಡಾಯ ಮಾಸ್ಕ್ ಧರಿಸಿರುವುದು ಕೂಡ ಕಂಡು ಬರಲಿಲ್ಲ. ಈ ಸಂದರ್ಭದಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿ ದಿನಸಿ, ತರಕಾರಿ, ಹಣ್ಣು ಅಂಗಡಿಗಳ ಮಾಲೀಕರಿಗೆ ಎಚ್ಚರಿಕೆ ನೀಡಿದರು. ಮಾರುಕಟ್ಟೆಗೆ ಖರೀದಿಗೆ ಬಂದಿದ್ದ ಸಾರ್ವಜನಿಕರನ್ನೂ ಅಲ್ಲಿಂದ ಜಾಗ ಖಾಲಿ ಮಾಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next