Advertisement
ಜು. 10ರಂದು ಮೊದಲ ಶಿಬಿರದ ಉದ್ಘಾಟನೆ ಮಾಡಿದ್ದ ಸಚಿವ ಸಿ. ಟಿ. ರವಿ ಅವರು ಶುಭ ಹಾರೈಸಿದರು. ಮೊದಲ ಹಂತದಲ್ಲಿ 100 ಕ್ಕೂ ಹೆಚ್ಚು ಪರಿವಾರಗಳು ನೋಂದಣಿಯಾಗಿದ್ದವು. ಕನ್ನಡಿಗರು ಯುಕೆ ಸಂಸ್ಥೆಯು ಅತೀ ಕಡಿಮೆ ಶುಲ್ಕಕ್ಕೆ ಇಡೀ ಕುಟುಂಬದವರೂ, ಮಕ್ಕಳೂ ಸೇರಲು ಅವಕಾಶ ಮಾಡಿಕೊಡಲಾಯಿತು.
Related Articles
Advertisement
ಇದಕ್ಕೆ ಕಾರಣ ಭಾಗೀರಥಿಯವರ ಪ್ರಾವೀಣ್ಯತೆ. 20 ವರ್ಷಗಳಿಗೂ ಮೇಲ್ಪಟ್ಟು ಯೋಗ ಕಲಿಸಿದ ಅನುಭವ. ಕಲಿಸುವ ಪದ್ಧತಿ, ಅವರ ಸಂವಹನ, ಜತೆಗೆ ಸೂಚನೆಯನ್ನು ಕೊಡುವ ಕಲೆ. ಆಂಗ್ಲ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಸುಲಲಿತವಾಗಿ ಮಾತನಾಡುವ ಅವರು ಎರಡು ಮೂರು ವಾರಗಳಲ್ಲೆ ಎಲ್ಲರಿಗೂ ಆತ್ಮೀಯರಾಗಿಬಿಟ್ಟಿದ್ದರು. ವಯಸ್ಸಿನ ಕಾರಣ ಶಾರೀರಿಕ ನಿರ್ಬಂಧತೆಗಳಿಂದ ಬದ್ಧರಾದ ಕೆಲವು ಹಿರಿಯರಿಗೂ ಸಮಜಾಯಿಷಿ ಸುಲಭ ಸೂತ್ರದ ಯೋಗ ವಿಧಾನಗಳನ್ನು ಅಳವಡಿಸಿದ್ದು ಶಿಬಿರದ ಸಾಫಲ್ಯಕ್ಕೆ ಕಾರಣವಾಯಿತು.
ಶಿಸ್ತಿನಿಂದ ಪಾಠ ಕೇಳಬೇಕಿತ್ತು. ತಪ್ಪಿದರೆ ಮಾತಿನ ಛಡಿಯೇಟು ಸಿಗುತ್ತಿತ್ತು. ಹೀಗಾಗಿ ಎಲ್ಲರೂ ಅವರು ಹೇಳಿದ ನಿಯಮವನ್ನು ಪಾಲಿಸುತ್ತಿದ್ದರು. ಕೊನೆಯ ದಿನ ಕೊರೋನಾ ಕಾಲದಲ್ಲಿ ತಮ್ಮ ಸ್ವಾಸ್ಥ್ಯ ವರ್ಧಿಸಿದ್ದಕ್ಕೆ ಇಲ್ಲಿಯ ಅವರ ಶಿಷ್ಯಂದಿರೆಲ್ಲ ಕೃತಜ್ಞತೆ ಸಲ್ಲಿಸಿದರು. ಗುರುಮಾ ಭಾಗೀರಥಿ ಅವರ ಕನ್ನಡವನ್ನು ನಿರಂತರ ಕೇಳುತ್ತಲೇ ಇರಬೇಕು ಎಂದೆನಿಸುತ್ತದೆ ಎಂದು ವಿಜಯ್ ಬಡಿಗೇರ ಹೇಳಿದರು.
ಮಮತಾ ಗೌಡ ಮಾತನಾಡಿ, ಆ ಒಂದು ತಾಸಿನ ಯೋಗಾಭ್ಯಾಸದ ವರ್ಗವೋ ಕ್ಷಣದಲ್ಲಿ ಮುಗಿದಂಥ ಅನುಭವ ಆಗುತ್ತಿತ್ತು. ಆಸನಗಳು, ಧ್ಯಾನ ಕಲಿಸುವ ಪರಿ, ಅವರು ಉಪಯೋಗಿಸುವ ಭಾಷೆ, ಅದರಿಂದ ರೂಪಿಸುವ ಪ್ರತಿಮೆಗಳು ನಮ್ಮನ್ನು ಮಂತ್ರಮೂಢರನ್ನಾಗಿ ಮಾಡಿಸಿತ್ತು ಎಂದರು.
ಯೋಗವೆಂದರೆ ಬರೀ ದೈಹಿಕವಲ್ಲದೇ ಮಾನಸಿಕ ಚಿಕಿತ್ಸೆ ಕೂಡ. ದುಬೈನಲ್ಲಿ ಕೋರಾನಾದಿಂದಾಗಿ ಹದಗೆಟ್ಟ ಆಸ್ಥಿಕ ಮತ್ತು ಮಾನಸಿಕ ಪರಿಸ್ಥಿತಿಯಿಂದ ಸಂತ್ರಸ್ತರಾದ ಕೂಲಿ ಕೆಲಸ ಮಾಡುತ್ತಿದ್ದ ನೂರಾರು ಕಾರ್ಮಿಕರನ್ನು ಪ್ರೋತ್ಸಾಹಿಸುತ್ತಿದ್ದಾರೆ ಈ ಭಾಗೀರಥಿ.
ಈವರೆಗೆ ವಿವಿಧ ಪ್ರಕಾರದ ಯೋಗ, ಪ್ರಾಣಾಯಾಮ ಮತ್ತು ಧ್ಯಾನ ಪದ್ಧತಿಗಳಲ್ಲಿ ಅವರಿಗೆ ಅನುಭವ ಮತ್ತು ಡಿಗ್ರಿ ಇದೆ. ಗೌರವ ಡಾಕ್ಟರೇಟ್ ಸಹ ಲಭಿಸಿದೆ. ಆದರೆ ಯೋಗವನ್ನು ಜನರಿಗೆ ತಲುಪಿಸುವುದಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಅವರು ಯಾವ ಧನ- ಧಾನ್ಯದ ಆಮಿಷವಿಲ್ಲದೆ ಸಂಪೂರ್ಣ ಸೇವಾವೃತ್ತಿಯಲ್ಲಿ ತೊಡಗಿಸಿಕೊಂಡು ಭಾರತಾದ್ಯಂತ ದೂರ ದೂರದ ಹಳ್ಳಿಗಳಿಗೆ ಸಹ ಹೋಗಿ ಕಳೆದ ಎರಡಕ್ಕೂ ಹೆಚ್ಚಿನ ದಶಕಗಳಲ್ಲಿ ಲಕ್ಷಾಂತರ ಜನರು ಯೋಗಾಭ್ಯಾಸದ ಲಾಭ ಪಡೆಯಲು ಸಾಧ್ಯವಾಯಿತು ಎಂದು ನನಗಿತ್ತ ಟೆಲಿಫೋನು ಸಂದರ್ಶನದಲ್ಲಿ ಹೇಳಿದರು.
ಇದರ ಜತೆಗೆ ಕನ್ನಡೇತರರಿಗೆ ಕನ್ನಡ ಕಲಿಸುವ ಅಭಿಯಾನದಲ್ಲಿ, 20 ಸಾವಿರಕ್ಕೂ ಹೆಚ್ಚಿನ ಜನರಿಗೆ ಕಲಿಸಿ ಕನ್ನಡ ಸಾಹಿತ್ಯ ಪರಿಷತ್ತಿನ ಮೆಚ್ಚುಗೆ ಪಡೆದಿದ್ದಾರೆ. ಅವರಿಗೆ ಸಂದ ಅನೇಕ ಪ್ರಶಸ್ತಿಗಳಲ್ಲಿ ಭಾರತ ಸರಕಾರದ ಯೋಗ ಭೂಷಣ ಪ್ರಶಸ್ತಿ- 2016, ಕರ್ನಾಟಕ ಸರಕಾರದ ಕೆಂಪೇಗೌಡ ಪ್ರಶಸ್ತಿ- 2018, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ- 2019 ಪ್ರಮುಖವಾದದ್ದು.
ಈಗಾಗಲೇ 25 ದೇಶಗಳಲ್ಲಿ ಯೋಗವನ್ನು ತೆಗೆದುಕೊಂಡು ಹೋಗಿರುವ ಭಾಗೀರಥಿ ಅವರು ತಮ್ಮ ಅನುಭವ ಮತ್ತು ಯೋಗಾಭ್ಯಾಸವನ್ನು ಇನ್ನೂ ಹೆಚ್ಚು ಜನರಿಗೆ ತಲುಪಿಸುವುದೇ ಅವರ ಧ್ಯೇಯ ಎಂದು ಹೇಳುತ್ತಾರೆ.
– ಡಾ| ಶ್ರೀವತ್ಸ ದೇಸಾಯಿ, ಡೋಂಕಾಸ್ಟರ್, ಯು ಕೆ.