ಸ್ಯಾನ್‌ಫ್ರಾನ್ಸಿಸ್ಕೋ: ಇಂಟರ್‌ನೆಟ್ ಸರ್ಚ್ ಎಂಜಿನ್ ಗೂಗಲ್ ಮಾತೃಸಂಸ್ಥೆ ಆಲ್ಫಾಬೆಟ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿ ನೇಮಕಗೊಂಡಿರುವ ಭಾರತೀಯ ಸುಂದರ್ ಪಿಚೈಗೆ 2020ರಲ್ಲಿ ವಾರ್ಷಿಕ 14 ಕೋಟಿ ರೂ. (2 ಮಿಲಿಯನ್ ಡಾಲರ್) ವೇತನ ಸಿಗಲಿದೆ. ಇದಲ್ಲದೆ ಅವರಿಗೆ 3 ವರ್ಷಗಳ ಅವಧಿಗೆ 1,770 ಕೋಟಿ ರೂ. (240 ಮಿಲಿಯ ಡಾಲರ್) ಮೌಲ್ಯದ ಷೇರುಗಳನ್ನು ನೀಡಲಾಗಿದೆ. ಈ ಬಗ್ಗೆ ಆಲ್ಫಾಬೆಟ್ ಶುಕ್ರವಾರ ಸ್ಟಾಕ್‌ಎಕ್ಸ್‌ಚೇಂಜ್‌ಗೆ ನೀಡಿದ ಹೇಳಿಕೆಯಲ್ಲಿ ಮಾಹಿತಿ ನೀಡಿದೆ.
ಸಂಸ್ಥೆಯ ಸಿಇಒ ಹುದ್ದೆಯಲ್ಲಿದ್ದ ಲಾರಿ ಪೇಜ್‌ಗೆ 7.11 ಕೋಟಿ ರೂ. ವೇತನ ಸಿಗುತ್ತಿತ್ತು. ಆ್ಯಪಲ್ ಕಂಪನಿ ಸಿಇಒ ಆಗಿರುವ ಟಿಮ್ ಕುಕ್ ಅವರಿಗೆ 2,674 ಕೋಟಿ ರೂ. (376 ಮಿಲಿಯ ಡಾಲರ್) ವೇತನ ಇದೆ. ಅವರಿಗೆ ಹೋಲಿಕೆ ಮಾಡಿದರೆ ಪಿಚೈ ಸದ್ಯ ಪಡೆಯುತ್ತಿರುವ ಸಂಬಳ ಕಡಿಮೆ.
ಗೂಗಲ್‌ನಲ್ಲಿಯೇ 15 ವರ್ಷದ ಕೆಲಸದ ಅನುಭವ ಇರುವ ಪಿಚೈ, ಅದು ಅಭಿವೃದ್ಧಿ ಪಡಿಸಿದ ಗೂಗಲ್ ಕ್ರೋಮ್‌ನ ಜನಪ್ರಿಯತೆಗೆ ದುಡಿದ ಹೆಗ್ಗಳಿಕೆ ಇದೆ. ಗೂಗಲ್ ಮುಖ್ಯಸ್ಥರಾಗಿ 2015ರಲ್ಲಿ ಅಧಿಕಾರ ವಹಿಸಿಕೊಂಡ ವೇಳೆ ಅವರಿಗೆ 6,52,500 ಡಾಲರ್ ವೇತನ ಇತ್ತು. ನಂತರದ ವರ್ಷಗಳಲ್ಲಿ ಅವರ ವಾರ್ಷಿಕ ವೇತನ ಏರಿಕೆಯ ದಾರಿ ಹಿಡಿಯಿತು. ಅದಕ್ಕೆ ಮೂಲ ಕಾರಣ 199 ಮಿಲಿಯ ಡಾಲರ್ ಮೌಲ್ಯ ಷೇರುಗಳನ್ನು ಅವರಿಗೆ ನೀಡಿದ್ದು.
ಕಂಪನಿ ಇತ್ತೀಚೆಗೆ ನೀಡಿದ ಹೇಳಿಕೆ ಪ್ರಕಾರ 2018ರಲ್ಲಿ ಪಿಚೈ 1.9 ಮಿಲಿಯ ಡಾಲರ್ ವೇತನ ಪಡೆದಿದ್ದರು. ಅಮೆರಿಕದ ತಾಂತ್ರಿಕ ಸಂಸ್ಥೆ ಈಕ್ವಿಲಾರ್ ನಡೆಸಿದ ಅಧ್ಯಯನ ಪ್ರಕಾರ, ಅಮೆರಿಕದ ಕಂಪನಿಗಳಲ್ಲಿ ಸಿಇಒ ಹುದ್ದೆಗೆ ಆಗಮಿಸಿದ ಯಾರಿಗೇ ಆಗಲಿ ಆರಂಭಿಕ ವೇತನವೇ 2018ರಲ್ಲಿ 1.2 ಮಿಲಿಯ ಡಾಲರ್ ಆಗಿತ್ತು.