ವಾಷಿಂಗ್ಟನ್: 40 ಕೋಟಿ ಟ್ವಿಟರ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದ್ದು, ಈ ಮಾಹಿತಿಯನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿಡಲಾಗಿದೆ. ಇದು ಟ್ವಿಟರ್ ಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಗೂಗಲ್ ಸಿಇಒ ಸುಂದರ್ ಪಿಚೈ, ಬಾಲಿವುಡ್ ನಟ ಸಲ್ಮಾನ್ ಖಾನ್, ಭಾರತದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೇರಿದಂತೆ ಅನೇಕ ಪ್ರಮುಖರು ಸೇರಿ ಒಟ್ಟು 40 ಕೋಟಿ ಟ್ವಿಟರ್ ಬಳಕೆದಾರರ ವೈಯಕ್ತಿಕ ಮಾಹಿತಿಯನ್ನು ಹ್ಯಾಕರ್ ಒಬ್ಬ ಕದ್ದಿದ್ದು, ಇದನ್ನು ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕೆ ಇಟ್ಟಿದ್ದಾನೆ ಎಂದು ಇಸ್ರೇಲಿ ಗುಪ್ತಚರ ಸಂಸ್ಥೆ ಹಡ್ಸನ್ ರಾಕ್ ವರದಿ ಮಾಡಿದೆ.
ಟ್ವಿಟರ್ ಖಾತೆದಾರರ ವೈಯಕ್ತಿಕ ಮಾಹಿತಿಯಾದ ಇಮೇಲ್, ಯೂಸರ್‌ನೇಮ್ , ಫಾಲೋವರ್ಸ್ ಹಾಗೂ ಪ್ರಮುಖವಾಗಿ ಮೊಬೈಲ್ ನಂಬರ್ ಕೂಡ ಡಾರ್ಕ್‌ವೆಬ್‌ನಲ್ಲಿ ಮಾರಾಟಕ್ಕಿಡಲಾಗಿದೆ.
“ನಾನು 40 ಕೋಟಿ ಪ್ರಮುಖ ಟ್ವಿಟರ್ ಬಳಕೆದಾರರ ಮಾಹಿತಿಯನ್ನು ಮಾರಾಟ ಮಾಡುತ್ತಿದ್ದೇನೆ. ಇದನ್ನು ವಾಮಮಾರ್ಗದಲ್ಲಿ ಸಂಗ್ರಹಿಸಲಾಗಿದೆ.
ಈ ಡೇಟಾ ಸಂಪೂರ್ಣ ಖಾಸಗಿಯಾಗಿದೆ,’ ಎಂದು ಬರೆದು ಡಾರ್ಕ್‌ವೆಬ್‌ನಲ್ಲಿ ಹ್ಯಾಕರ್ ಪೋಸ್ಟ್ ಮಾಡಿದ್ದಾನೆ. ಆದರೆ ಡೇಟಾ ಸೋರಿಕೆ ಬಗ್ಗೆ ಟ್ವಿಟರ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲವು ತಿಂಗಳ ಹಿಂದೆ ಕೂಡ ಎಲಾನ್ ಮಸ್ಕ್ ಒಡೆತನದ ಟ್ವಿಟರ್‌ನ 5.4 ಮಿಲಿಯನ್ ಬಳಕೆದಾರರ ಮಾಹಿತಿ ಸೋರಿಕೆಯಾಗಿತ್ತು.