Advertisement

Sandalwood: ಬಿಸಿಲ ಧಗೆ ಎಫೆಕ್ಟ್; ಔಟ್‌ಡೋರ್‌ ಶೂಟಿಂಗ್‌ನಿಂದ ಸಿನಿಮಂದಿ ದೂರ

03:03 PM May 01, 2024 | Team Udayavani |

ಬಿಸಿಲಿನ ಶಾಖಾ ಜೋರಾಗಿದೆ. ಇವತ್ತು ಮಳೆ ಬರುತ್ತೆ, ನಾಳೆ ಬರುತ್ತೆ, ಭೂಮಿ ತಂಪಾಗುತ್ತೆ… ಎಂದು ಆಶಾಭಾವನೆಯಿಂದ ಇದ್ದ ಜನ ದಿನದಿಂದ ದಿನಕ್ಕೆ ಧಗೆಗೆ ಸುಸ್ತಾಗಿದ್ದಾರೆ. ಇದರಿಂದ ಸಿನಿಮಾ ಮಂದಿ ಕೂಡಾ ಹೊರತಾಗಿಲ್ಲ. ಬಿಸಿಲಿನ ಧಗೆ ತಡೆಯಲಾರದೇ ಬಹುತೇಕ ಸಿನಿಮಾ ತಂಡಗಳು ಔಟ್‌ ಡೋರ್‌ ಶೂಟಿಂಗ್‌ನಿಂದ ದೂರವೇ ಉಳಿದಿದೆ. ಈ ಮೂಲಕ ಅಂದುಕೊಂಡ ಶೆಡ್ಯೂಲ್‌ನಲ್ಲಿ ಸಿನಿಮಾ ಚಿತ್ರೀಕರಣ ನಡೆಯುತ್ತಿಲ್ಲ.

Advertisement

ಸದ್ಯದ ಬಿಸಿಲಿನ ಧಗೆಯಲ್ಲಿ ಶೂಟಿಂಗ್‌ ಮಾಡೋದು ಕಷ್ಟ ಸಾಧ್ಯ. ಕಲಾವಿದರಿಂದ ಹಿಡಿದು ಇಡೀ ಶೂಟಿಂಗ್‌ ತಂಡ ಬೇಗನೇ ಸುಸ್ತಾಗಿಬಿಡುತ್ತದೆ. ಅಂದುಕೊಂಡ ಮಟ್ಟಕ್ಕೆ ಕೆಲಸವಾಗುತ್ತಿಲ್ಲ. ದಿನಕ್ಕೆ ಮೂರ್‍ನಾಲ್ಕು ದೃಶ್ಯಗಳನ್ನಾದರೂ ಔಟ್‌ ಡೋರ್‌ನಲ್ಲಿ ಸೆರೆಹಿಡಿಯಬೇಕೆಂದುಕೊಂಡ ನಿರ್ದೇಶಕನಿಗೆ ಈ ಬಿಸಿಲಿನ ಧಗೆಗೆ ಅದು ಸಾಧ್ಯವಾಗುತ್ತಿಲ್ಲ. ಇದರಿಂದ ನಿರ್ಮಾಪಕನಿಗೂ ನಷ್ಟ.

ಫ್ರೆಶ್‌ನೆಸ್‌ ಇರಲ್ಲ: ಸದ್ಯದ ಬಿಸಿಲಿನ ಧಗೆ ಮುಖ್ಯವಾಗಿ ಸಿನಿಮಾದ ಹಾಡು ಹಾಗೂ ಫೈಟಿಂಗ್‌ ಸೀನ್‌ಗಳ ಮೇಲೆ ಪರಿಣಾಮ ಬೀರಿದೆ. ಔಟ್‌ಡೋರ್‌ನ ಸುಂದರ ಲೊಕೇಶನ್‌ ನಲ್ಲಿ ಹಾಡನ್ನು ಚಿತ್ರೀಕರಿಸಬೇಕೆಂದುಕೊಂಡ ಸಿನಿಮಾ ತಂಡಗಳು ಈಗ ಅದನ್ನು ಮುಂದೂಡಿವೆ. ಅದಕ್ಕೆ ಕಾರಣ ಕಲಾವಿದರ ಮುಖದಲ್ಲಿ ಫ್ರೆಶ್‌ನೆಸ್‌ ಇರಲ್ಲ.

ಒಂದು ಕಡೆ ಮೇಕಪ್‌, ಮತ್ತೂಂದು ಕಡೆ ಸ್ಟೈಲಿಶ್‌ ಕಾಸ್ಟ್ಯೂಮ್‌ ಇವೆಲ್ಲವನ್ನು ಹಾಕಿಕೊಂಡ ಈ ಬಿಸಿಲಿನ ಧಗೆಗೆ ಐದು ನಿಮಿಷ ಶೂಟಿಂಗ್‌ ಮಾಡಿದರೂ ಕಲಾವಿದರು ಸುಸ್ತಾಗಿಬಿಡುತ್ತಾರೆ. ಇದರ ನೇರಪರಿಣಾಮ ಸ್ಕ್ರೀನ್‌ಮೇಲೆ ಆಗುತ್ತದೆ. ಬಿಸಿಲಿನ ಧಗೆಗೆ ಕಲಾವಿದರ ಮುಖದಲ್ಲಿ ಫ್ರೆಶ್‌ನೆಸ್‌ ಹೊರಟು ಹೋಗಿರುತ್ತದೆ.

ಇದು ಹಾಡಿನ ವಿಚಾರವಾದರೆ ಔಟ್‌ಡೋರ್‌ ಫೈಟಿಂಗ್‌ನದ್ದು ಮತ್ತೂಂದು ಕಥೆ. ಫೈಟಿಂಗ್‌ ಎಂದರೆ ಹೀರೋ, ವಿಲನ್‌, ಫೈಟರ್ … ಹೀಗೆ ಸಾಕಷ್ಟು ಮಂದಿ ಇರುತ್ತಾರೆ. ಇದರ ಜೊತೆಗೆ ರೋಪ್‌, ಕ್ರೇನ್‌, ಲೈಟ್‌… ಇವೆಲ್ಲವನ್ನು ಈ ಬಿಸಿಲಿನಲ್ಲಿ ಸಹಿಸಿಕೊಳ್ಳುವುದು ಸುಲಭದ ಮಾತಲ್ಲ. ಇದೇ ಕಾರಣದಿಂದ ಕೆಲವು ಸಿನಿಮಾ ತಂಡಗಳು ಹಾಡು, ಫೈಟ್‌ ದೃಶ್ಯಗಳಿಂದ ದೂರವೇ ಉಳಿದಿವೆ.

Advertisement

ಚಿತ್ರೀಕರಣ ಜೋರು: ಮೊದಲೇ ಹೇಳಿದಂತೆ ಔಟ್‌ ಡೋರ್‌ ಶೂಟಿಂಗ್‌ ಬಿಸಿಲನ ಧಗೆಗೆ ಕಷ್ಟವಾದ ಕಾರಣಕ್ಕೆ ಸಿನಿಮಾ ತಂಡಗಳು ಇನ್‌ಡೋರ್‌ ಶೂಟಿಂಗ್‌ನತ್ತ ಮುಖ ಮಾಡಿವೆ. ಮನೆಯೊಳಗಿನ ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳುತ್ತಿವೆ. ಇದರ ಜೊತೆಗೆ ಈಗಾಗಲೇ ಶೂಟಿಂಗ್‌ ಮುಗಿಸಿ, ಹಾಡು, ಫೈಟ್‌ ಅಥವಾ ಔಟ್‌ಡೋರ್‌ ದೃಶ್ಯಗಳನ್ನಷ್ಟೇ ಬಾಕಿ ಉಳಿಸಿಕೊಂಡಿರುವ ಚಿತ್ರತಂಡಗಳು ಎಡಿಟಿಂಗ್‌, ಡಬ್ಬಿಂಗ್‌, ರೀರೆಕಾರ್ಡಿಂಗ್‌ ಸೇರಿದಂತೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ಬಿಝಿಯಾಗಿವೆ.

ತಾಂತ್ರಿಕವಾಗಿಯೂ ಅತಿ ಬಿಸಿಲು ಕಷ್ಟ : ಒಂದು ಕಡೆ ಬಿಸಿಲಿನ ಧಗೆ ತಡೆದುಕೊಳ್ಳಲಾರದೇ ಔಟ್‌ಡೋರ್‌ ಶೂಟಿಂಗ್‌ ಮುಂದೆ ಹೋದರೆ, ಸದ್ಯದ ಅತಿಯಾದ ಬಿಸಿಲು ತಾಂತ್ರಿಕವಾಗಿಯೂ ಚಿತ್ರೀಕರಣಕ್ಕೆ ಅಡ್ಡಬರುತ್ತಿದೆ. ಸಾಮಾನ್ಯವಾಗಿ ಔಟ್‌ಡೋರ್‌ ಶೂಟಿಂಗ್‌ನಲ್ಲಿ ಬೆಳಕು ಕಡಿಮೆ ಇದ್ದಾಗ, ಅದಕ್ಕಾಗಿ ಬೇರೆ ಲೈಟ್‌ ಬಳಸುತ್ತಾರೆ. ಆದರೆ, ಈಗ ಪ್ರಖರವಾದ ಬೆಳಕು ಇರುವುದರಿಂದ ತಾಂತ್ರಿಕವಾಗಿ ಅಂದುಕೊಂಡಂತೆ ಚಿತ್ರೀಕರಣ ಮಾಡುವುದು ಕಷ್ಟ. ಮಾಡಲೇಬೇಕಾದ ಅನಿವಾರ್ಯತೆ ಬಂದರೆ ಅದಕ್ಕೊಂದು ಬೇರೆ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತದೆ. ಇಂತಹ “ಎರಡೆರಡು’ ಕೆಲಸ ಬೇಡವೆಂಬ ಕಾರಣಕ್ಕೆ ಔಟ್‌ಡೋರ್‌ ಶೂಟಿಂಗ್‌ ಕಡಿಮೆಯಾಗಿರುವುದಂತೂ ನಿಜ.

ಅತಿಯಾದ ಲೈಟಿಂಗ್‌ನಲ್ಲಿ ಶೂಟಿಂಗ್‌ ಕಷ್ಟ: ಬಿಸಿಲ ಧಗೆಯಲ್ಲಿ ಔಟ್‌ ಡೋರ್‌ ಶೂಟಿಂಗ್‌ ಮಾಡೋದು ಖಂಡಿತಾ ಕಷ್ಟವಿದೆ. ಅದೇ ಕಾರಣದಿಂದ ಸಿನಿಮಾ ತಂಡಗಳು ಇನ್‌ ಡೋರ್‌ನತ್ತ ಮುಖ ಮಾಡಿವೆ. ಅತಿಯಾದ ಲೈಟ್‌ನಲ್ಲಿ ದೃಶ್ಯಗಳನ್ನು ಸೆರೆಹಿಡಿಯೋದು ಕೂಡಾ ಕಷ್ಟ. ಜತೆಗೆ ಕಲಾವಿದರು, ತಂತ್ರಜ್ಞರು ಕೂಡ ಬೇಗ ಸುಸ್ತಾಗುತ್ತಾರೆ. -ಚೇತನ್‌ (ಬಹದ್ದೂರ್‌) ನಿರ್ದೇಶಕ

ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next