Advertisement

ಬೇಸಗೆ ರಜೆ; ವಿದೇಶ ಪ್ರವಾಸ ಬುಕ್ಕಿಂಗ್‌ ರದ್ದುಗೊಳಿಸುತ್ತಿರುವ ಪ್ರವಾಸಿಗರು !

01:17 AM Mar 10, 2020 | Sriram |

ಮಹಾನಗರ: ದೇಶ-ವಿದೇಶಗಳಲ್ಲಿ ಕೊರೊನಾ ಭೀತಿ ಹೆಚ್ಚಾಗುತ್ತಿದ್ದಂತೆ, ಅದು ಜಾಗತಿಕ ಮಟ್ಟದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಅತಿಹೆಚ್ಚು ಪೆಟ್ಟು ಉಂಟುಮಾಡುತ್ತಿದೆ.

Advertisement

ಅದರಲ್ಲಿಯೂ ಮುಂಬರುವ ಬೇಸಗೆ ರಜೆಯ ದೇಶ-ವಿದೇಶ ಪ್ರವಾಸದ ಲೆಕ್ಕಾ ಚಾರವನ್ನು ಈ ಕೊರೊನಾ ವೈರಸ್‌ ಭೀತಿ ಅಕ್ಷರಶಃ ಉಲ್ಟಾ ಮಾಡಿದೆ. ಇನ್ನೇನು ಕೆಲವು ದಿನಗಳಲ್ಲಿ ಶಾಲಾ-ಕಾಲೇಜಿಗೆ ಬೇಸಗೆ ರಜೆ ಬರಲಿದ್ದು, ಆ ವೇಳೆ ದೇಶ-ವಿದೇಶಕ್ಕೆ ಪ್ರವಾಸ ಹೋಗೋಣ ಎಂದು ಯೋಚಿಸಿದ್ದವರೆಲ್ಲ ಇದೀಗ ನಿರಾಶರಾಗುತ್ತಿದ್ದಾರೆ. ಅಷ್ಟೇಅಲ್ಲ, ಈಗಾಗಲೇ ವಿದೇಶಕ್ಕೆ ತೆರಳು ವುದಕ್ಕೆ ಮುಂಚಿತವಾಗಿನ ಟಿಕೇಟ್‌ ಬುಕ್ಕಿಂಗ್‌ ಮಾಡಿಕೊಂಡಿದ್ದವರು ಅದನ್ನು ರದ್ದುಗೊಳಿಸುತ್ತಿದ್ದಾರೆ. ಇದರಿಂದ ಅತ್ತ ಟೂರ್‌-ಟ್ರಾವೆಲ್ಸ್‌ ಏಜೆನ್ಸಿ ಗಳು ಕೂಡ ಪ್ರವಾಸಿಗರಿಲ್ಲದೆ, ನಷ್ಟ ಅನು ಭವಿಸುತ್ತಿದ್ದಾರೆ. ಬೇಸಗೆ ವೇಳೆ ಶಾಲಾ-ಕಾಲೇಜುಗಳಿಗೆ ರಜೆ ಇರುವ ಕಾರಣ ಹೆಚ್ಚಿನವರು ಮನೆ ಮಂದಿಯೊಂದಿಗೆ ಪ್ರವಾಸ ಕೈಗೊಳ್ಳುತ್ತಾರೆ. ಸಾಮಾನ್ಯವಾಗಿ ಮಂಗಳೂರಿನಿಂದ ಯುರೋಪ್‌ ದೇಶಗಳು, ಸಿಂಗಾಪುರ, ಥ್ಯಾಲಂಡ್‌, ಮಲೇಶ್ಯಾ, ವಿಯೆಟ್ನಾಂಗೆ ಪ್ರವಾಸಕ್ಕೆ ಹೆಚ್ಚು ಬೇಡಿಕೆ ಬರುತ್ತದೆ. ಆದರೆ, ಈ ಬಾರಿ ಪ್ರವಾಸಕ್ಕೆ ಶೇ.75ರಷ್ಟು ಬೇಡಿಕೆ ಕಡಿಮೆಯಾಗಿದೆ ಎನ್ನುತ್ತಾರೆ ಇಲ್ಲಿನ ಪ್ರವಾಸಿ ಏಜೆನ್ಸಿಯವರು.

ಮಾರ್ಚ್‌ನಿಂದ ಮೇ ತಿಂಗಳವರೆಗೆ ವಿದೇಶಗಳಿಗೆ ತೆರಳಲು ಪ್ರವಾಸಿಗರು ಹೆಚ್ಚಾಗಿ ಬುಕ್ಕಿಂಗ್‌ ಮಾಡುತ್ತಾರೆ. ಆದರೆ ಕೊರೊನಾ ಭೀತಿಯಿಂದಾಗಿ ಈಗಾಗಲೇ ಬುಕ್ಕಿಂಗ್‌ ಮಾಡಿದವರು ಕೂಡ ರದ್ದುಗೊಳಿಸುತ್ತಿದ್ದಾರೆ.

ಅಷ್ಟೇ ಅಲ್ಲದೆ ಕೆಲವೊಂದು ಟೂರ್‌ ಏಜೆನ್ಸಿ ಕೂಡ ವಿದೇಶಿ ಪ್ರವಾಸ ಪ್ಯಾಕೇಜ್‌ ಅನ್ನು ಕೆಲವು ತಿಂಗಳ ಮಟ್ಟಿಗೆ ರದ್ದುಗೊಳಿಸಿವೆ. ಭಾರತದಲ್ಲಿ ಈಗಾಗಲೇ ಸುಮಾರು 39 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಇದೇ ಕಾರಣಕ್ಕೆ ದೇಶದೊಳಗೇ ಸುತ್ತಾಡಲೂ ಕೆಲವರು ಹಿಂಜರಿಯುತ್ತಿದ್ದಾರೆ. ಇದರಿಂದ ಟ್ಯಾಕ್ಸಿ ಮಾಲಕರು ಕೂಡ ನಷ್ಟ ಅನುಭವಿಸುತ್ತಿದ್ದಾರೆ.

10 ಟ್ರಿಪ್‌ಗೆ ಇಳಿಕೆ
ಸೀಸನ್‌ ದಿನಗಳಲ್ಲಿ ಒಂದು ಕಾರಿನಿಂದ ತಿಂಗಳಿಗೆ 20 ಟ್ರಿಪ್‌ ಆಗುತ್ತಿತ್ತು. ಸದ್ಯ 10 ಟ್ರಿಪ್‌ಗೆ ಇಳಿಕೆಯಾಗಿದೆ.ಮಾರ್ಚ್‌ನಿಂದ ಮೇವರೆಗೆ ದಕ್ಷಿಣ ಕನ್ನಡಕ್ಕೆ ಆಗಮಿಸುವ ವಿದೇಶಿ, ಅನ್ಯ ರಾಜ್ಯದ ಪ್ರವಾಸಿಗರು ಮಡಿಕೇರಿ, ಮೈಸೂರು, ಮಂಗಳೂರು ಸಹಿತ ವಿವಿಧ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ಆದರೆ, ಕೆಲವು ತಿಂಗಳುಗಳಿಂದ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದೆ.

Advertisement

ವಿಮಾನ ಯಾನವೂ ನಷ್ಟದಲ್ಲಿ
ದೇಶ-ವಿದೇಶಗಳಲ್ಲಿ ಕೊರೊನಾ ಭೀತಿ ಇರುವ ಕಾರಣ, ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸುವ ಅನೇಕ ವಿಮಾನ ಯಾನ ಈಗಾಗಲೇ ತಾತ್ಕಾಲಿಕವಾಗಿ ರದ್ದುಗೊಂಡಿವೆ. ವಿದೇಶಗಳಿಗೆ ವಿಮಾನದಲ್ಲಿ ತೆರಳುವ ಮಂದಿ ತಮ್ಮ ಪ್ರವಾಸವನ್ನು ಮೊಟಕುಗೊಳಿಸುತ್ತಿದ್ದಾರೆ.

ಅದೇ ರೀತಿ ವಿದೇಶಿಗಳಿಂದಲೂ ಭಾರತಕ್ಕೆ ಹೆಚ್ಚಿನ ಮಂದಿ ಆಗಮಿಸುತ್ತಿಲ್ಲ. ಅಲ್ಲದೆ ಕುವೈಟ್‌ ಸರಕಾರವು ಭಾರತ ಸಹಿತ 7 ದೇಶಗಳಿಗೆ ವಿಮಾನಯಾನವನ್ನು ತಾತ್ಕಾಲಿಕವಾಗಿ ನಿಲ್ಲಿದೆ. ಇದೇ ಕಾರಣಕ್ಕೆ ಮಾ. 6ರಿಂದ ಒಂದು ವಾರ ಕಾಲ ಕುವೈಟ್‌ನಿಂದ ಮಂಗಳೂರಿಗೆ ಹಾಗೂ ಮಂಗಳೂರಿನಿಂದ ಕುವೈಟ್‌ಗೆ ವಿಮಾನ ಸಂಚಾರ ಇರುವುದಿಲ್ಲ.

ಇದರಿಂದಾಗಿ ವಿಮಾನ ನಿಲ್ದಾಣಗಳು ಕೂಡ ನಷ್ಟದಲ್ಲಿವೆ. ನವಮಂಗಳೂರಿನ ಬಂದರಿಗೆ ಬರುವ ಪ್ರವಾಸಿ ಹಡಗುಗಳಿಗೆ ಈಗಾಗಲೇ ಮಾ. 31ರ ವರೆಗೆ ಬಂದರು ಪ್ರವೇಶಿಸದಂತೆ ನಿರ್ಬಂಧಿಸಲಾಗಿದೆ.

17 ಹಡಗು, 17,115 ಮಂದಿ ವಿದೇಶಿಗರು
2019ನೇ ವರ್ಷದ ಜನವರಿ ಎಪ್ರಿಲ್‌ನಿಂದ ಕಳೆದ ವರ್ಷದ ಕೊನೆಯವರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಪ್ರವಾಸಕ್ಕೆಂದು ಎನ್‌ಎಂಪಿಟಿಗೆ ವಿವಿಧ ಹಡಗುಗಳ ಮುಖೇನ 17,115 ಮಂದಿ ವಿದೇಶಿಗರು ಆಗಮಿಸಿದ್ದರು. ಎಪ್ರಿಲ್‌ 1ರಿಂದ ಡಿಸೆಂಬರ್‌ 24ರ ವರೆಗೆ ಒಟ್ಟು 17 ಪ್ರವಾಸಿ ಹಡಗುಗಳು ಆಗಮಿಸಿತ್ತು. ಇವುಗಳಲ್ಲಿ ಬಂದ ಪ್ರವಾಸಿಗರು ಉಭಯ ಜಿಲ್ಲೆಗಳ ವಿವಿಧ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ವಿದೇಶಗಳಲ್ಲಿ ಕೊರೊನಾ ಭೀತಿ ಇದ್ದು, ಕಳೆದ ತಿಂಗಳಿನಿಂದ ಯಾವುದೇ ಪ್ರವಾಸಿ ಹಡಗುಗಳು ಎನ್‌ಎಂಪಿಟಿಗೆ ಬರುತ್ತಿಲ್ಲ.

ವಿದೇಶಿ ಪ್ರವಾಸಿಗರು ಆಗಮಿಸುತ್ತಿಲ್ಲ
ಜಿಲ್ಲೆಗೆ ವಿದೇಶಿ ಪ್ರವಾಸಿಗರು ಯಾರು ಕೂಡ ಆಗಮಿಸುತ್ತಿಲ್ಲ. ಬದಲಾಗಿ ಹೊರ ರಾಜ್ಯದ ಪ್ರವಾಸಿಗರು ಬರುತ್ತಿದ್ದಾರೆ. ಕಳೆದ ವರ್ಷ ಒಟ್ಟು 2 ಕೋಟಿಯಷ್ಟು ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದಾರೆ. ಕೊರೊನಾ ಭೀತಿ ಆರಂಭವಾ ಗಿದ್ದು, ಇದರ ಪರಿಣಾಮ ಜಿಲ್ಲೆಗೆ ಸದ್ಯ ಬೀರಿಲ್ಲ.
– ಸುಧೀರ್‌ ಗೌಡ, ದ.ಕ. ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ

ಬುಕ್ಕಿಂಗ್‌ ರದ್ದುಗೊಳಿಸುತ್ತಿದ್ದಾರೆ
ಸಾಮಾನ್ಯವಾಗಿ ಬೇಸಗೆ ವೇಳೆ ಮಂಗಳೂರಿನಿಂದ ವಿದೇಶಕ್ಕೆ ಪ್ರವಾಸಕ್ಕೆ ತೆರಳಲು ಹೆಚ್ಚಿನ ಮಂದಿ ಮುಂಗಡ ಬುಕ್ಕಿಂಗ್‌ ಮಾಡುತ್ತಾರೆ. ಆದರೆ ಕೊರೊನಾ ಭೀತಿಯಿಂದಾಗಿ ಈಗಾಗಲೇ ಬುಕ್ಕಿಂಗ್‌ ಮಾಡಿದವರು ಕೂಡ ರದ್ದುಗೊಳಿಸುತ್ತಿದ್ದಾರೆ.
 - ಅರುಣ್‌, ಪ್ರವಾಸಿ ಬುಕ್ಕಿಂಗ್‌ ಏಜೆನ್ಸಿ

ಟ್ಯಾಕ್ಸಿ ಮಾಲಕರಿಗೆ ನಷ್ಟ
ವಿಮಾನ ನಿಲ್ದಾಣ, ರೈಲು ನಿಲ್ದಾಣದಿಂದ ಪ್ರಯಾಣಿಕರನ್ನು, ಪ್ರವಾಸಿಗರನ್ನು ಕರೆದೊಯ್ಯುವ ಟ್ಯಾಕ್ಸಿ ಮಾಲಕರು ನಷ್ಟ ಅನುಭವಿಸುತ್ತಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದಾಗಿ ನಮಗೆ ಬಾಡಿಗೆ ಕೂಡ ಸಿಗುತ್ತಿಲ್ಲ.
-ಆನಂದ್‌, ಪ್ರದ.ಕ. ಜಿಲ್ಲಾ ಟ್ಯಾಕ್ಸಿ ಮೆನ್ಸ್‌ ಆ್ಯಂಡ್‌ ಮ್ಯಾಕ್ಸಿ ಕ್ಯಾಬ್‌ ಸಂಘದ ಪ್ರ. ಕಾರ್ಯದರ್ಶಿ

-ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next