Advertisement
ಇಂತಹ ಮಟ ಮಟ ಬಿರು ಬೇಸಿಗೆಯಲ್ಲಿ, ಎಲೆಗಳೆಲ್ಲಾ ಉದುರಿ ಬೋಳಾಗುತ್ತಿರುವ ಹೊತ್ತಿನಲ್ಲಿ, ಅಚಾನಕ್ ಒಂದು ಬೆಳಗಿನಲ್ಲಿ ಮರದ ಮೈಯೊಳಗಿಂದ ಹೊಸ ಕಸುವು ಎದ್ದುಬಂದಂತೆ ಹಸಿರೊಡೆದು, ನನ್ನೊಳಗಿನ ಪ್ರಶ್ನೆಗಳಿಗೆಲ್ಲ ಉತ್ತರದಾಯಿಯೆಂಬಂತೆ ಚಿಗುರುತ್ತಿದೆ. ಇದಕ್ಕೆ ಪವಾಡವೆನ್ನುವಿರೋ? ಛಲ ಎಂದು ಕರೆಯುವಿರೋ? ಬರಡಾದ ಮೈಮನಗಳಲ್ಲಿ ಮತ್ತೆ ಜೀವನೋತ್ಸಾಹ. ಅಂತಹ ಜೀವಂತಿಕೆಯನ್ನ ಕಲಿಯಲು ಶಾಲೆಯ ಬಾಗಿಲು ಹತ್ತಬೇಕಿಲ್ಲ. ಅವರಿವರ ಉಪದೇಶಕ್ಕೆ ಕಿವಿಯಾಗಬೇಕಿಲ್ಲ, ಮನೆಯ ಕದ ತೆರೆದು ವಿಶಾಲವಾಗಿ ಕಣ್ಣಾಡಿಸಿದರಷ್ಟೇ ಸಾಕು. ಅದೋ! ಚಿಗುರೆಲೆಗಳು ಈ ಸುಡುಬಿಸಿಲಲ್ಲೂ ಎಳೆ ಗಾಳಿಗೆ ಸಣ್ಣಗೆ ತುಯ್ಯುತ್ತಿವೆ. ಹಕ್ಕಿಗಳ ಚಿಲಿಪಿಲಿ ಮರದ ಎದೆಯೊಳಗಿಂದ ಕೇಳಿಸಿದಂತಿದೆ. ಮರ ಮರದ ಚಿಗುರಿಂದ ಇಡೀ ಪ್ರಕೃತಿಗೆ ಜೀವಕಳೆ ಬಂದಂತಿದೆ!
Related Articles
Advertisement
ನೀವೇನೇ ಹೇಳಿ, ಬದುಕಿನಲ್ಲಿ ಎಲ್ಲವೂ ಸಾಧ್ಯ ಅನ್ನುವು¨ನ್ನು ಕಲಿಸಿಕೊಡುವುದು ಈ ಸುಡು ಬೇಸಿಗೆಯೇ ನೋಡಿ. ಕತ್ತರಿಸಿದ ಮಾವಿನ ಕಾಂಡದ ಬೇರೊಂದು ಎಲ್ಲಿ ಅಡಗಿತ್ತೋ ಏನೋ; ಸೂರ್ಯನಿಗೆ ಸೆಡ್ಡು ಹೊಡೆದಂತೆ ಕೆಂಪೆಲೆಗಳಿಂದ ಮೇಳೈಸಿಕೊಂಡು ಪಲ್ಲವಿಸುತ್ತದೆ. ಉತ್ಸಾಹವೊಂದು ಮೈಮನಗಳನ್ನು ಆವರಿಸಿಕೊಂಡು ಬಿಡುತ್ತದೆ. ಇದುವೇ ಹೊಸ ಜೀವನಕ್ಕೆ ಮುನ್ನುಡಿಯೆಂಬಂತೆ ಯುಗಾದಿ ಹಬ್ಬದ ಸಡಗರಕ್ಕೆ ಮನಸು ತೆರೆದುಕೊಳ್ಳುತ್ತದೆ. ಹಬ್ಬವೆಂದರೆ ಬೇರೇನೂ ಅಲ್ಲ, ಹೊಸತನಕ್ಕೆ ಸಜ್ಜುಗೊಳ್ಳುವ ಪ್ರಕ್ರಿಯೆ ಅಷ್ಟೇ. ಹೊಂಗೆ ಹೂವ ತೊಂಗಲಲ್ಲಿ ಭೃಂಗದ ಸಂಗೀತ ಕೇಲಿ ಮತ್ತೆ ಕೇಳಿ ಬರುತಿದೆ… ಅನ್ನುವ ಬೇಂದ್ರೆಯಜ್ಜನ ಕಾವ್ಯದ ಸಾಲು, ಬೀಸುವ ಗಾಳಿಯಲ್ಲಿ ಮತ್ತೆ ತೇಲಿ ಬಂದಂತಾಗಿ ಮನಸು ಮುದಗೊಳ್ಳುತ್ತದೆ.
***
ಮೊನ್ನೆಯೊಂದು ಮದುವೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಎಷ್ಟೊಂದು ಚೆಂದ ಅಲಂಕಾರ ಮಾಡಿದ್ದರೆಂದರೆ, ಅಲ್ಲಿಯ ವೇದಿಕೆಯ ಅಲಂಕಾರಕ್ಕೇ ಬಹುಪಾಲು ಹಣ ಖರ್ಚಾಗುತ್ತದಂತೆ. ಬಣ್ಣಬಣ್ಣದ ಹೂಗಳ ತೋರಣ, ವಿವಿಧ ವಿನ್ಯಾಸ ಮನಸನ್ನು ಸೂರೆಗೊಳ್ಳುವಂತಿತ್ತು. ಅದೆಷ್ಟೇ ಖರ್ಚಿರಲಿ, ಹೀಗೆ ಅಲಂಕಾರ ಮಾಡುವುದರಿಂದ ಹೂ ತೋಟವೊಂದು ಆ ಮೂಲಕ ಬೆಳೆಯುವಂತಾಗುತ್ತದೆ. ಅದಕ್ಕಾಗಿ ಹಸಿಮಣ್ಣ ಜಾಗವೊಂದು ಉಳಿದಂತಾಗುತ್ತದೆ ಅಂತ ಮನಸಿಗೆ ಸಮಾಧಾನ ತಂದುಕೊಂಡು, ಪಕ್ಕದಲ್ಲಿ ಕುಳಿತವರ ಜೊತೆ, ಈ ಹೂಗಳು ಬಾಡುವುದೇ ಇಲ್ಲವಾ ಅಂತ ಪ್ರಶ್ನಿಸಿದಾಗಲೇ ಅದರ ಅಸಲೀಯತೆ ತಿಳಿದದ್ದು. ಅವು ಪ್ಲಾಸ್ಟಿಕ್ ಬಳ್ಳಿಗಳ ನಡುವೆ ಅರಳಿ ನಿಂತಂತಿರುವ ಪ್ಲಾಸ್ಟಿಕ್ ಹೂಗಳು! ಸಹಜಕ್ಕೂ ಕೃತಕಕ್ಕೂ ಅಂತರವೇ ಗೊತ್ತಾಗದ ಕಣRಟ್ಟಿಗೆ ಬೆರಗಾದೆ. ಸಹಜತೆಯ ಅವಸಾನವಾದರೆ ಬದುಕು ನೆಲೆಗೊಳ್ಳಬಹುದೇ?
ದೀಪದ ಬುಡದಲ್ಲೇ ಗೂಡು!
ಹಾದಿಬದಿಯ ಮರಗಳೆಲ್ಲಾ ರಸ್ತೆ ಅಗಲೀಕರಣದ ನೆಪದಲ್ಲಿ ಬುಡ ಕತ್ತರಿಸಿಕೊಳ್ಳುತ್ತಿವೆ. ಮುಂದೊಂದು ದಿನ ವಾಹನಗಳು, ಕಟ್ಟಡಗಳು ಮಾತ್ರ ತುಂಬಿಕೊಂಡು ಜಗತ್ತು ಚಲಿಸುವ ಚಿತ್ರವೊಂದು ಭಯದ ನೆರಳಿನಂತೆ ಹಾದು ಹೋಗುವ ಹೊತ್ತಿನಲ್ಲಿ, ನನ್ನ ಮನಸನ್ನ ಬೇರೆಡೆಗೆ ತಿರುಗಿಸಲೋ ಎಂಬಂತೆ ಪುಟಾಣಿ ಹಕ್ಕಿಗಳು ಅಂಗಳದ ನೇಕೆಯ ಮೇಲೆ ಬಾಲ ಕುಣಿಸುತ್ತಾ ಕುಣಿಯುತ್ತಿವೆ. ಎಲ್ಲಿಂದಲೋ ನಾರು ಬೇರು ತಂದು ಮನೆಯ ವಿದ್ಯುತ್ ದೀಪದ ಬುಡದಲ್ಲೇ ಗೂಡು ಕಟ್ಟುವ ತಯಾರಿ ನಡೆಸುತ್ತಿವೆ. ಬದುಕಬೇಕೆನ್ನುವ ಈ ಚೈತನ್ಯಕ್ಕೆ ತಲೆಬಾಗಿದೆ. ವಸಂತ ಬದುಕಿನಲ್ಲಿ ಬರುವುದೆಂದರೆ ಇದುವೇ ತಾನೇ? ವಸಂತ ಎದೆಯೊಳಗಿಂದ ಸಾಥ್ ಕೊಟ್ಟಾಗ ಬದುಕಿನ ಚೆಲುವು ನೂರ್ಮಡಿ ಇಮ್ಮಡಿಸುತ್ತಿದೆ.
ಎದೆಯೊಳಗೆ ಹೊಸಬಗೆಯ ಗೆಜ್ಜೆ ಸದ್ದು:
ಬಿಕೋ ಅನ್ನುವ ಹಿತ್ತಲಿನಲ್ಲಿ, ಹೀಗೆ ಸುಮ್ಮಗೆ ಕಣ್ಣು ಹಾಯಿಸುವಷ್ಟು ದೂರ ದಿಟ್ಟಿಸುತ್ತಾ, ಎದೆಯ ಭಾರವ ಹೊತ್ತು, ವೇಳೆ ಸವೆಯುವ ಹೊತ್ತಿನಲ್ಲಿ, ಯಾರ ದೇಖಾರೇಖಿಯೂ ಇಲ್ಲದೆ, ಅಂಗಳದ ತುದಿಯಲ್ಲಿ ತನ್ನಷ್ಟಕ್ಕೇ ಬಿದ್ದು ಹುಟ್ಟಿಕೊಂಡ ಮತ್ತೂಂದು ಮಾವಿನ ಗಿಡ ಈಗ ನಳನಳಿಸುತ್ತಿದೆ. ಮೋಡ ಕಟ್ಟದ ಆಕಾಶವನ್ನ ಅದು ನೆಚ್ಚಿ ಕೂರಲಿಲ್ಲ, ದೂಷಿಸಲೂ ಇಲ್ಲ. ಹೊಸ ಚಿಗುರು ತೊಟ್ಟು ಹರೆಯ ಕಟ್ಟಿಕೊಂಡಿದೆ. ಈಗ ಮತ್ತದರ ಟೊಂಗೆ ನಡುವೆ, ಕೋಗಿಲೆಯೊಂದು ಪದ ಹಾಡಿ ಹಾರಿ ಹೋಗಿದೆ. ಆ ಖುಷಿಯ ಹುರುಪಿನಲ್ಲಿ ಎಲೆಗಳ ನಡುವೆ ಫಲ ಕಚ್ಚತೊಡಗಿದೆ. ಅದರ ಜೊತೆಗಿದ್ದ ಹಲಸಿನ ಗಿಡವೂ ಮಿಡಿ ಬಿಟ್ಟು ಕುಜ್ಜೆಯ ಮಾಲೆಯನ್ನೇ ಮೈದಳೆದಿದೆ. ಮುಂದೊಮ್ಮೆ ನನ್ನ ಬುಡಕ್ಕೂ ಕೊಡಲಿಯೇಟು ಬೀಳಬಹುದೆಂಬ ಯಾವ ಭಯವೂ ಇಲ್ಲದೆ. ವರ್ತಮಾನದಲ್ಲಿ ಬದುಕು ಕಟ್ಟಿಕೊಳ್ಳುವುದೆಂದರೆ ಇದುವೇ ತಾನೇ? ಅವರವರ ಖುಷಿಗೆ ಅವರೇ ವಾರಸುದಾರರು ಅನ್ನುವ ಸತ್ಯವೊಂದು ಮನವರಿಕೆಯಾದಾಗ ಎದೆಯ ಹೊಸಿಲಲ್ಲಿ ಮತ್ತೆ ವಸಂತ ಗೆಜ್ಜೆ ಕಟ್ಟಿ ನಿಂತಂತೆ ಭಾಸವಾಗತೊಡಗಿದೆ. ಮತ್ತೆ ಬಂದ ವಸಂತನನ್ನ ಇನ್ನೆಂದೂ ಬಿಟ್ಟು ಹೋಗದಂತೆ ಆದರದಿಂದ ಬರಮಾಡಿಕೊಂಡಿರುವೆ. ಈಗ ಸುಡು ಬೇಸಿಗೆಯಲ್ಲೂ ತಂಪು ಹವೆಯೊಂದು ಬೀಸಿದಂತಾಗಿ ಬದುಕು ಸಹ್ಯವೆನ್ನಿಸುತ್ತಿದೆ.
-ಸ್ಮಿತಾ ಅಮೃತರಾಜ್. ಸಂಪಾಜೆ.