ಬನಹಟ್ಟಿ: ಬೇಸಿಗೆ ಸಮೀಪಿಸುತ್ತಿದೆ. ಬಿಸಿಲಿನ ತಾಪಮಾನವೂ ಹೆಚ್ಚುತ್ತಿದೆ. ಈ ಭಾಗದ ಜನತೆಗೆ ಕೃಷ್ಣಾ ಹಾಗೂ ಘಟಪ್ರಭಾ ನದಿಗಳು ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿವೆ. ತಾಲೂಕಿನ ಬಹುಭಾಗದ ಜನತೆ ಕೃಷ್ಣಾ ನದಿಯ ಮೂಲವನ್ನು ಹೆಚ್ಚಾಗಿ ನೆಚ್ಚಿಕೊಂಡಿದ್ದಾರೆ.
ಪ್ರಮುಖ ಪಟ್ಟಣಗಳಾದ ರಬಕವಿ-ಬನಹಟ್ಟಿ, ತೇರದಾಳಕ್ಕೆ ಕುಡಿಯುವ ನೀರಿನ ಮೂಲ ಕೃಷ್ಣಾ ನದಿಯಾಗಿದ್ದು ಹಿಪ್ಪರಗಿ ಜಲಾಶಯದ ಹಿನ್ನೀರಿನಿಂದಾಗಿ ಸದ್ಯ ಕೃಷ್ಣಾ ನದಿ ತಂಬಿ ನಿಂತಿದೆ. ಈ ಸಲದ ಬೇಸಿಗೆಗೆ ಅಷ್ಟೊಂದು ಪ್ರಮಾಣದಲ್ಲಿ ಆತಂಕ ಇಲ್ಲದಿದ್ದರೂ ಹಿಪ್ಪರಗಿ ಜಲಾಶಯದಿಂದ ನೀರನ್ನು ಬಿಟ್ಟಲ್ಲಿ ನೀರಿನ ಸಮಸ್ಯೆ ಉಲ್ಬಣ ವಾಗಬಹುದು. ಆ ನಿಟ್ಟಿನಲ್ಲಿ ತಾಲೂಕು ಆಡಳಿತ ಹಾಗೂ ಮುಖಂಡರು ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅವಶ್ಯವಾಗಿದೆ. ಪ್ರಮುಖ ಮೂಲವಾಗಿರುವ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಇನ್ನೂ ಸುಮಾರು ಮೇ ಎರಡನೆಯ ವಾರದವರೆಗೆ ಕುಡಿಯುವ ನೀರಿನ ಸಮಸ್ಯೆ ಆಗುವುದಿಲ್ಲ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.
ಆದರೆ, ಈಗಿನ ಪ್ರಖರವಾದ ಬಿಸಿಲು, ನದಿ ಸಮೀಪದ ರೈತರು ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುವುದು ಹಾಗೂ ಹಿಪ್ಪರಗಿ ಜಲಾಶಯದಿಂದ ಮುಂದಿನ ಭಾಗಕ್ಕೆ ನೀರು ಹರಿಸಿದ್ದಲ್ಲಿ ಇನ್ನೂ ಬೇಗನೆ ನೀರಿನ ಸಮಸ್ಯೆ ಎದುರಿಸಬಹುದು. ಆ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಅಗತ್ಯ ಮುನ್ನೆಚ್ಚರಿಕೆ ವಹಿಸುವುದು ಅವಶ್ಯ. ರಬಕವಿ-ಬನಹಟ್ಟಿ ನಗರಸಭೆ, ತೇರದಾಳ ಪುರಸಭೆ ಈಗಾಗಲೇ ಪ್ರತಿ ವರ್ಷದಂತೆ ಬೇಸಿಗೆಯಲ್ಲಿ ಕೊಳವೆ ಬಾವಿ, ಖಾಸಗಿ ಒಡೆತನದ ಕೊಳವೆ ಬಾವಿಗಳ ಮೂಲಕ, ತೆರೆದಬಾವಿಗಳ ಮೂಲಕ ನೀರು ಸರಬರಾಜು ಮಾಡಲು ಸಿದ್ಧತೆ ಮಾಡಿಕೊಂಡಿವೆ. ಅಲ್ಲದೇ ಮಹಾಲಿಂಗಪುರ
ಪುರಸಭೆ ವ್ಯಾಪ್ತಿಯಲ್ಲಿ ಘಟಪ್ರಭಾ ನದಿಯ ಮೂಲಕ ಸಿದ್ದ ಸರೋವರ ಕೆರೆ ತುಂಬಿದ್ದು, ಕೊಳವೆ ಬಾವಿಗಳ ಮೂಲಕ ನೀರು ಪೂರೈಸಲು ಪುರಸಭೆ ಸಿದ್ಧತೆ ನಡೆಸಿದ್ದು, ಸದ್ಯಕ್ಕೆ ನೀರಿನ ತೊಂದರೆ ಆಗುವುದಿಲ್ಲ ಎಂಬ ಅಭಿಪ್ರಾಯವಿದ್ದರೂ ಬಿಸಿಲಿನ ಪ್ರಖರತೆ ಗಮನಿಸಿದರೆ ನೀರಿನ ಬವಣೆ ತಪ್ಪಲಾರದು ಎಂಬ ಅನುಮಾನ ಮೂಡಿದೆ. ಮೇ, ಜೂನ್‌ತಿಂಗಳವರೆಗೆ ಜನರ ಬೆವರಿಳಿಸಲಿರುವ ಬಿಸಿಲಿನ ಬೇಗೆಯನ್ನು ವ್ಯವಸ್ಥಿತವಾಗಿ ಎದುರಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆಗಳು ಹಾಗೂ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಅವಶ್ಯ. ನೂತನ ರಬಕವಿ-ಬನಹಟ್ಟಿ ತಾಲೂಕು ಅಧಿಕಾರಿಗಳಿಗೆ ಸವಾಲಿನ ಪ್ರಶ್ನೆಯಾಗಿದೆ.
ಅಲ್ಲದೇ ಈ ಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದ್ದು, ಎಲ್ಲಿ ಅಗೆದರೂ ನೀರು ದೊರೆಯುತ್ತಿದ್ದು, ಇದು ಸಾರ್ವಜನಿಕರಿಗೆ ವರದಾನವಾಗಿದೆ. ಅಲ್ಲದೇ ಅಕಾಲಿಕ ಮಳೆ ಹಾಗೂ ನೆರೆಯ ಮಹಾರಾಷ್ಟ್ರದ ಕೊಯ್ನಾದಿಂದ ನೀರು ಬಿಟ್ಟಲ್ಲಿ ಸಮಸ್ಯೆ ಆಗುವುದಿಲ್ಲ. ಆದರೂ ತಾಲೂಕು ಆಡಳಿತ ಹಾಗೂ ರಾಜಕೀಯ ಮುಖಂಡರು ಅಗತ್ಯ ಮುಂಜಾಗ್ರತ ಕ್ರಮ ತೆಗೆದುಕೊಂಡು ಮುಂದೆ ಉದ್ಬವಿಸಬಹುದಾದ ನೀರಿನ ಬವಣೆಗೆ ಸೂಕ್ತ ಪರಿಹಾರ ಕಂಡು ಕೊಳ್ಳುವುದು ಅನಿವಾರ್ಯ.
ಸದ್ಯ ರಬಕವಿ-ಬನಹಟ್ಟಿ ತಾಲೂಕಿನಲ್ಲಿ ನೀರಿನ ಸಮಸ್ಯೆ ಇಲ್ಲ. ಮೇ ಕೊನೆಯವರೆಗೆ ಯಾವುದೇ ಆತಂಕವಿಲ್ಲ. ಆದರೂ ಮುಂಜಾಗ್ರತೆಗಾಗಿ ಶೀಘ್ರ ಕುಡಿಯುವ ನೀರಿನ ಕುರಿತು ಸಭೆ ಕರೆಯಲಾಗುವುದು. ಹಾಗೂ ಮುಂದೆ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಅದನ್ನು ನಿಭಾಯಿಸಲು ತಾಲೂಕು ಆಡಳಿತ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತದೆ.-
ಪ್ರಶಾಂತ ಚನಗೊಂಡ, ತಹಶೀಲ್ದಾರ್, ರಬಕವಿ-ಬನಹಟ್ಟಿ
-ಕಿರಣ ಶ್ರೀಶೈಲ ಆಳಗಿ