ಅದು ಮಾರ್ಚ್ ತಿಂಗಳ ಒಂದು ದಿನ. ಮಾಗಿಯ ಚಳಿ ದೂರವಾಗಿ ಬೇಸಿಗೆ ಪ್ರಾರಂಭವಾಗುವ ಕಾಲ. ನಾನು ಅಂದು ಮೊದಲ ದಿನದ ಕಾಲೇಜು ಹೋಗಿದ್ದೆ. ಲೆಕ್ಚರರ್ ಎಂದಿನಂತೆ ಸಹಜವಾಗಿ ತರಗತಿಯನ್ನು ಪ್ರಾರಂಭಿಸಿದರು. ಸುಮಾರು 11 ಗಂಟೆಯಾಗಿತ್ತು. ಎದೆಯೊಳಗೆ ಏನೋ ಜರಿಹುಳು ಹರಿದ ಅನುಭವ. ಮೆಲ್ಲಗೆ ಮುಟ್ಟಿ ನೋಡಿಕೊಂಡೆ. ಏನೂ ಇರಲಿಲ್ಲ. ಸುಮ್ಮನಾದೆ. ನಂತರ ಮರುದಿನವೂ ಮೈಯೊಳಗೆ ಇದೇ ಪುಳಕ. ಒಂಥರಾ ಕಚಗುಳಿ ಇಟ್ಟಂತೆ ಸರಸರ ನೀರು ಹರಿಯುವ ಅನುಭವ. ಅರೆ! ನನಗೇನಾಯ್ತಪದ್ಪಾ ಅಂತ ನೋಡಿಕೊಂಡರೆ ಮೈಯೆಲ್ಲ ಒದ್ದೆ. ಬೆವರು ಹನಿಗಳು ರಾಜರಾಣಿ, ರೋರರ್, ರಾಕೆಟ್‌ನಂತೆ ನಾ ಮುಂದು ತಾ ಮುಂದೆ ಎಂದು ಹರಿಯುತ್ತಿದೆ. ಮಾರ್ಚ್ ತಿಂಗಳ ಸುಡು ಬಿಸಿಲಿನ ಕಾರಣ ವಿಪರೀತ ಬೆವರು. ಮೂಲತಃ ನಾನು ಮಧ್ಯಕರ್ನಾಟಕದವನು. ಆದರೆ, ನನಗೆ ದಕ್ಷಿಣಕನ್ನಡದ ವಾತಾವರಣ ಹಿಡಿಸಲು ಬಹುಕಾಲವೇ ಬೇಕಾಯ್ತು.
ಇಲ್ಲಿನ ವಾತಾವರಣ ನಿಜಕ್ಕೂ ಹಾರಿಬಲ್. ಯಾಕೆಂದರೆ, ಬೇಸಿಗೆಯಲ್ಲಿ ಸಹಿಸಲಸಾಧ್ಯ ಧಗೆ. ಮಳೆಗಾಲದಲ್ಲಿ ಹುಚ್ಚು ಮಳೆ. ನಮ್ಮೂರಲ್ಲಿ ಹೀಗಲ್ಲ. ಮಳೆ, ಬಿಸಿಲು, ಚಳಿ ಎಲ್ಲವೂ ಸಮಾನವಾಗಿರುವ ಪರಿಸರ. ನಮ್ಮೂರಲ್ಲೂ ಹೀಗೆಯೇ ಬಿಸಿಲು ಬೇಸಗೆಯಲ್ಲಿರುತ್ತದೆ. ಆದರೆ, ಚರ್ಮ ಸುಟ್ಟು ಹೋಗುವಂಥ ಉರಿ ಬಿಸಿಲು, ಸಹಿಸಲಸಾಧ್ಯ ಧಗೆ ಇಲ್ಲ. ನಾನಿಲ್ಲಿ ಸುತ್ತಲೂ ದಟ್ಟ ಕಾಡಿರುವುದರಿಂದ ಸದಾ ತಂಪಿರುತ್ತದೆ ಎಂದು ಭಾವಿಸಿದ್ದೆ. ಆದರೆ, ನನ್ನ ಯೋಚನೆಯೆಲ್ಲ ಬುಡಮೇಲಾಗಿದೆ. ಇಷ್ಟು ಧಗೆಗೆ ಕಾರಣ ಏನಿರಬಹುದು ಎಂದು ವಿಚಾರಿಸಿದ ನನಗೆ ತಿಳಿದುಬಂದಿದ್ದು ಒಂದು, ಇದು ಸಮುದ್ರ ಸಮೀಪವಿರುವುದರಿಂದ ಮತ್ತು ಇಲ್ಲಿನ ಮಣ್ಣಿನ ವಿಶಿಷ್ಟ ಲಕ್ಷಣ ಎನ್ನುವುದು. ಇಲ್ಲಿ ಭೂಮಿ ಸೂರ್ಯನ ಶಾಖವನ್ನು ಹೀರಿಕೊಳ್ಳುವುದಿಲ್ಲ. ಹಾಗಾಗಿ ಬಿಸಿಲ ಧಗೆ ಹೆಚ್ಚು. ಅದು ಎಷ್ಟರಮಟ್ಟಿಗೆ ಎಂದರೆ ಬೇಸಿಗೆಯಲ್ಲಿ ಬೆಳಗ್ಗೆ 8 ಗಂಟೆಗಾಗಲೇ ಬೆವರ ಹನಿಗಳು ಮೈಯಿಂದ ಕಿತ್ತು ಬರುತ್ತಿರುತ್ತದೆ. ಇನ್ನು ಮಧ್ಯಾಹ್ನದ ಪಾಡು ಆ ದೇವರಿಗೇ ಪ್ರೀತಿ. ಸಂಜೆ ಹೊತ್ತಿಗಾಗಲೇ ನನ್ನ ಪರಿಸ್ಥಿತಿ ಕುಕ್ಕರ್‌ನಲ್ಲಿ ಒಂದೇ ವಿಸಿಲ್‌ಗೆ ಬೇಯುವ ಬಾಯ್ಲರ್ ಕೋಳಿಯಂತಾಗುತ್ತದೆ. ಇನ್ನು ರಾತ್ರಿ ಫ್ಯಾನ್ ತಿರುಗದಿದ್ದರೆ ನಿದ್ದೆಯೇ ಇಲ್ಲ.
ಊರಲ್ಲಿ ಹದವಾಗಿ ತಿಂದು ಬೆಳೆಸಿದ್ದ ಬೊಜ್ಜು ಮೂರೇ ತಿಂಗಳಿಗೆ ಕರಗಿ ನೀರಾಗಿ ಅಲ್ಲಲ್ಲ , ಬೆವರಾಗಿ ಹರಿದು ಹೋಯಿತು. ಅಷ್ಟು ಪ್ರಬಲ ಇಲ್ಲಿನ ವಾತಾವರಣ. ಅಂದ ಹಾಗೆ ಇಲ್ಲಿನ ಜನರ ಆಹಾರ ಕ್ರಮ, ಜೀವನ ಶೈಲಿಯೂ ಇದಕ್ಕೆ ಪೂರಕವಾಗಿಯೇ ಇದೆ. ಇಲ್ಲಿ ಸಿಗುವ ದೊಡ್ಡ ಗಾತ್ರದ ಎಳನೀರು, ವಿವಿಧ ರೀತಿಯ ತಂಪು ಪಾನೀಯಗಳು ಜನರ ಜೀವನದ ಜೊತೆ ಹಾಸುಹೊಕ್ಕಾಗಿವೆ. ಬಹುತೇಕವಾಗಿ ಇಲ್ಲಿನ ಜನರು ಬಿಸಿಲ ಧಗೆಗೆ ಬೆಂದ ಮೈಮನಸ್ಸು ಹಗುರಾಗಲು ತಪ್ಪದೇ ರಾತ್ರಿ ಸ್ನಾನ ಮಾಡಿ ನೆಮ್ಮದಿಯ ನಿದ್ರೆಗೆ ಜಾರುತ್ತಾರೆ.
ಅದೇನೇ ಇರಲಿ, ನಮ್ಮೂರಲ್ಲಿ ಬೆಳಿಗ್ಗೆ ಜಾಗಿಂಗ್ ಮಾಡಿದಾಗ ಅಥವಾ ಜಿಮ್‌ನಲ್ಲಿ ವಕೌìಟ್ ಮಾಡಿದಾಗ ಮಾತ್ರ ಬರುತ್ತಿದ್ದ ನನ್ನ ಬೆವರಿಗೆ ಒಂದು ರೀತಿಯ ಪ್ರತಿಷ್ಠೆಯ ಸ್ಥಾನವಿತ್ತು. ಆದರೆ, ಇಲ್ಲಿನ ಜನತೆಗೆ ಅದು ಉಸಿರಾಟದಷ್ಟೇ ಸಹಜವಾಗಿದೆ. ನಾನು ಈ ತುಳುನಾಡಿಗೆ ಬಂದು ಒಂದು ವರುಷ ಕಳೆದಿದೆ. ನನ್ನ ದೇಹದ ಬೆವರಷ್ಟೇ ಅಲ್ಲ, ಅಜ್ಞಾನವೆಂಬ ಬೆವರೂ ಕೂಡ ಯಾವ ಮುಲಾಜಿಲ್ಲದೇ ಹರಿದು, ಇಳಿದು ಹೋಗಿದೆ. ಹೊಸ ವಾತಾವರಣಕ್ಕೆ ದೇಹ, ಮನಸ್ಸು ಒಗ್ಗಿಕೊಂಡಿದೆ. ಕಷ್ಟಪಟ್ಟು ಬೆವರು ಹರಿಸಿ ಶಿಕ್ಷಕನಾಗುತ್ತಿದ್ದೇನೆಂಬ ಸಾರ್ಥಕದ ಭಾವವಿದೆ.
ಮಹೇಶ್ ಎಂ. ಸಿ.
ದ್ವಿತೀಯ ಬಿ. ಎಡ್
ಎಸ್‌ಡಿಎಂ ಬಿಎಡ್ ಕಾಲೇಜು, ಉಜಿರೆ