Advertisement

ಬರದಲ್ಲಿ ಬಿಸಿಯೂಟದ ಜತೆ ಮಕ್ಕಳಿಗೆ ‘ಬೇಸಿಗೆ ಸಂಭ್ರಮ’

12:47 PM Apr 25, 2019 | Team Udayavani |

ಕೋಲಾರ: ಗ್ರಾಮೀಣ ಮಕ್ಕಳಲ್ಲಿ ಗಾಂಧೀಜಿಯವರ ಮೂಲಶಿಕ್ಷಣ ಹಾಗೂ ಜಾನಪದ ಪರಂಪರೆ ಉಳಿಸಿ ಬೆಳೆಸಲು ಅನುಕೂಲವಾಗುವಂತೆ ಹಮ್ಮಿಕೊಂಡಿರುವ ‘ಬೇಸಿಗೆ ಸಂಭ್ರಮ’ ವಿಶಿಷ್ಟ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರತ್ನಯ್ಯ ಸಲಹೆ ನೀಡಿದರು.

Advertisement

ನಗರದ ರಹಮತ್‌ ನಗರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ‘ಸ್ವಲ್ಪ-ಓದು ಸ್ವಲ್ಪ-ಮೋಜು’ ಪರಿಕಲ್ಪನೆಯೊಂದಿಗೆ ಆರಂಭಿಸಲಾದ ‘ಬೇಸಿಗೆ ಸಂಭ್ರಮ’ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರಕಾರ ರಾಜ್ಯದ 30 ಜಿಲ್ಲೆಗಳ 156 ಕಂದಾಯ ತಾಲೂಕುಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ ಎಂದ ಅವರು, ಬರಪೀಡಿತ ಎಂದು ಘೋಷಿಸುತ್ತಿರುವ ತಾಲೂಕುಗಳಲ್ಲಿ ಬೇಸಿಗೆಯಲ್ಲೂ ಮಧ್ಯಾಹ್ನ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ಊಟ ನೀಡುತ್ತಿದ್ದು, ಅಂತಹ ಶಾಲೆಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಮುಂದಾಗಿದೆ ಎಂದು ಹೇಳಿದರು.

ಅರಿವು: ಮಧ್ಯಾಹ್ನದ ಬಿಸಿಯೂಟ ಯೋಜನೆಯ ಜಿಲ್ಲಾ ಶಿಕ್ಷಣಾಧಿಕಾರಿ ತಿಮ್ಮರಾಯಪ್ಪ, ಸರ್ಕಾರ ಬರದ ಹಿನ್ನೆಲೆಯಲ್ಲಿ ಬೇಸಿಗೆ ರಜೆಯಲ್ಲೂ ಬಿಸಿಯೂಟ ನೀಡುವಂತೆ ಸೂಚಿಸಿದೆ, ಮಕ್ಕಳು ಊಟಕ್ಕೆ ಬರುವುದರಿಂದ ಆ ಮಕ್ಕಳಿಗೆ ಊಟದ ಜತೆಗೆ ನಮ್ಮ ಪರಂಪರೆಯ ಕ್ರೀಡೆ, ಚಟುವಟಿಕೆಗಳ ಅರಿವು ನೀಡಲು ಈ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಹೇಳಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್‌.ನಾಗರಾಜಗೌಡ, ಬೇಸಿಗೆ ಸಂಭ್ರಮ ಮೇ 25ರವರೆಗೂ ಒಂದು ತಿಂಗಳ ಕಾಲ ನಡೆಯಲಿದ್ದು, ಆಸಕ್ತ 25 ಮಕ್ಕಳಿರುವ ಶಾಲೆಗಳ ಶಿಕ್ಷಕರು ತಮ್ಮ ಶಾಲೆಯಲ್ಲಿ ಈ ಕಾರ್ಯಕ್ರಮ ನಡೆಸಲು ಮುಂದಾದರೆ ಅವರಿಗೆ ನಗದು ಸಹಿತ ರಜೆ ಸೌಲಭ್ಯ (ಇಎಲ್) ನೀಡ‌ಲಾಗುವುದು ಎಂದು ತಿಳಿಸಿದರು.

Advertisement

ಪ್ರಥಮ್‌ ಸಂಸ್ಥೆ ಸಹಯೋಗ: ಮಧ್ಯಾಹ್ನದ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಬಾಲಾಜಿ, ಪ್ರಥಮ್‌ ಸಂಸ್ಥೆ ಸಹಯೋಗದಲ್ಲಿ ಈ ಬೇಸಿಗೆ ಸಂಭ್ರಮದ ರೂಪುರೇಷೆಗಳು ಸಿದ್ಧವಾಗಿದ್ದು, ಮಕ್ಕಳಲ್ಲಿ ಗ್ರಾಮೀಣ ಕಲೆಗಳನ್ನು ಉಳಿಸಿ ಬೆಳೆಸಲು ಇದೊಂದು ಅತ್ಯಂತ ಉತ್ತಮ ಯೋಜನೆಯಾಗಿದೆ ಎಂದು ಹೇಳಿದರು.

ಬೇಸಿಗೆ ಸಂಭ್ರಮದ ನೋಡೆಲ್ ಅಧಿಕಾರಿ ನಾಗವೇಣಿ ಡಯಟ್ ವತಿಯಿಂದ ಬೇಸಿಗೆ ಸಂಭ್ರಮ ತರಗತಿ ಆರಂಭಿಸುವ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತದೆ ಮತ್ತು ಶಿಬಿರಕ್ಕೆ ಅಗತ್ಯವಾದ ಆಟೋಪಕರಣಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ರಾಮಕೃಷ್ಣಪ್ಪ, ವಿಷಯ ಪರಿವೀಕ್ಷಕ ಕೃಷ್ಣಪ್ಪ, ಶಿಕ್ಷಣ ಸಂಯೋಜಕರಾದ ಆರ್‌.ಶ್ರೀನಿವಾಸನ್‌, ಮುಖ್ಯ ಶಿಕ್ಷಕ ಜಿ.ಶ್ರೀನಿವಾಸ್‌, ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಅನಿಲ್ ಕುಮಾರ್‌, ನಾರಾಯಣಸ್ವಾಮಿ, ಮುಖ್ಯ ಶಿಕ್ಷಕ ಸಹಬುದ್ದೀನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next