Advertisement

ಕರಾವಳಿಯಲ್ಲಿ ಅವಧಿಗೂ ಮುನ್ನ ಬೇಸಗೆ ಮಳೆ ಬರುವ ಸಾಧ್ಯತೆ

10:37 PM Feb 07, 2020 | mahesh |

ಮಂಗಳೂರು: ಹವಾಮಾನ ವೈಪರಿತ್ಯದಿಂದಾಗಿ ಕರಾವಳಿ ಭಾಗದಲ್ಲಿ ಚಳಿಗಾಲದಲ್ಲಿಯೂ ದಿನದಿಂದ ದಿನಕ್ಕೆ ಗರಿಷ್ಠ ಉಷ್ಣಾಂಶ ಏರುತ್ತಿದ್ದು, ಇದರ ಪರಿಣಾಮ ಮುಂಬರುವ ಬೇಸಗೆ ಮಳೆ ಮೇಲೆ ಬೀರುವ ಸಾಧ್ಯತೆ ಇದೆ.

Advertisement

ಸಾಮಾನ್ಯವಾಗಿ ಮಾರ್ಚ್‌ ಎರಡನೇ ವಾರ ಅಥವಾ ಮೂರನೇ ವಾರದಲ್ಲಿ ಪೂರ್ವ ಮುಂಗಾರು ಮಾರುತ ಕರಾವಳಿ ಭಾಗಕ್ಕೆ ಬಂದು ಮಳೆಯಾಗುತ್ತದೆ. ಆದರೆ ಈ ಬಾರಿ ಉಷ್ಣಾಂಶ ಏರಿಕೆಯ ಪರಿಣಾಮ ಆಗಸದಲ್ಲಿ ಮೋಡಗಳ ಚಲನೆ ಹೆಚ್ಚಿದ್ದು, ಅವಧಿಗೂ ಮುನ್ನ ಮಾರುತಗಳಾಗಿ ಪರಿವರ್ತನೆಯಾಗಿ ಮಳೆ ಸಂಭವಿಸಬಹುದು ಎಂದು ಹವಾಮಾನ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಹವಾಮಾನ ವೈಪರಿತ್ಯದಿಂದಾಗಿ ಕರಾವಳಿ ಭಾಗದ ಸುಳ್ಯ ಸಹಿತ ಕೆಲವೊಂದು ಪ್ರದೇಶಗಳಲ್ಲಿ ಕೆಲವು ದಿನಗಳ ಹಿಂದೆ ಅಕಾಲಿಕ ಮಳೆಯಾಗಿತ್ತು. ಇನ್ನು, ಮಂಗಳೂರು ಸಹಿತ ಅನೇಕ ಕಡೆಗಳಲ್ಲಿ ಬೆಳಗ್ಗಿನ ವೇಳೆ ಮೋಡ ಕವಿದ ವಾತಾವರಣ ಇದ್ದು, ಆಗಸದಲ್ಲಿ ಮೋಡಗಳ ಚಲನೆ ಹೆಚ್ಚಿದೆ. ಇದೇ ಕಾರಣಕ್ಕೆ ಚಳಿಗಾಲದಲ್ಲಿಯೂ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ.

ಅಡಿಕೆ ಬೆಳೆಗಾರ ಸಜೀಪದ ಗಣಪತಿ ಭಟ್‌ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ಅವಧಿಗೂ ಮುನ್ನ ಪೂರ್ವ ಮುಂಗಾರು ಮಳೆ ಕಾಲಿಟ್ಟರೆ ಅದರಿಂದಾಗಿ ಕರಾವಳಿಯ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ತುತ್ತಾಗುವ ಸಾಧ್ಯತೆ ಇದೆ. ಸಾಮಾನ್ಯವಾಗಿ ಮಾರ್ಚ್‌ ತಿಂಗಳಿನಲ್ಲಿ ಅಡಿಕೆ ಮರದಲ್ಲಿ ಹಿಂಗಾರ ಬಿಡುವ ಸಮಯ. ಮಳೆಯಿಂದಾಗಿ ಹಿಂಗಾರಕ್ಕೆ ನೀರು ಬಿದ್ದರೆ ಕೊಳೆಯುತ್ತದೆ. ಜತೆಗೆ ಮಳೆಯಿಂದಾಗಿ ನಳ್ಳಿ ಕೂಡ ಉದುರುತ್ತದೆ. ಅಕಾಲಿಕವಾಗಿ ಮಳೆ ಬಂದರೆ ಮಾವು, ಹಲಸು ಹೂವು ಕೂಡ ಹಾಳಾಗುತ್ತದೆ’ ಎನ್ನುತ್ತಾರೆ.

ಉಷ್ಣಾಂಶ ಏರಿಕೆ ಸಾಧ್ಯತೆ
ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಕನಿಷ್ಠ ಮತ್ತು ಗರಿಷ್ಠ ಉಷ್ಣಾಂಶ ಪ್ರಮಾಣವೂ ಏರಿಕೆಯಾಗುತ್ತಿದೆ. ಕಳೆದ ವರ್ಷ 38.5 ಡಿ.ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಈ ಬಾರಿ ಆ ಗಡಿ ದಾಟುತ್ತಿದೆ. ಮಧ್ಯಾಹ್ನ ವೇಳೆ 38 ಡಿ.ಸೆ.ನಷ್ಟು ಗರಿಷ್ಠ ಉಷ್ಣಾಂಶ ದಾಖಲಾಗುತ್ತಿದ್ದು, ಮತ್ತಷ್ಟು ಏರಿಕೆಯಾಗುವ ಸಂಭವವಿದೆ. ಸರಾಸರಿ ಗರಿಷ್ಠ ಉಷ್ಣಾಂಶ ಏರಿಕೆಯಾಗುತ್ತಿದ್ದು, 2016ರಲ್ಲಿ 38.4 ಡಿ.ಸೆ., 2017ರಲ್ಲಿ 38.7, 2018ರಲ್ಲಿ 38, 2019ರಲ್ಲಿ 38.5 ಮತ್ತು ಈ ತಿಂಗಳು ಮಧ್ಯಾಹ್ನ 38 ಡಿ.ಸೆ.ನ ಗಡಿ ದಾಟಿದೆ. ಇತ್ತ ಕನಿಷ್ಠ ಉಷ್ಣಾಶದಲ್ಲಿಯೂ ಇಳಿಕೆ ಕಾಣುತ್ತಿಲ್ಲ. ಇದೇ ಕಾರಣಕ್ಕೆ ಈ ಬಾರಿ ಚಳಿಗಾಲ ಕೆಲವೇ ದಿನಗಳಿಗೆ ಸೀಮಿತವಾಗಿತ್ತು.

Advertisement

ಐದು ವರ್ಷಗಳಲ್ಲಿ ಅತೀ ಕಡಿಮೆ ಮಳೆ
ಕರಾವಳಿ ಭಾಗದಲ್ಲಿ ಪೂರ್ವ ಮುಂಗಾರು ವೇಳೆ (ಮಾರ್ಚ್‌ನಿಂದ ಮೇ ಅಂತ್ಯದವರೆಗೆ) 171 ಮಿ.ಮೀ. ವಾಡಿಕೆ ಮಳೆಯಾಗಬೇಕು. ಐದು ವರ್ಷಗಳಲ್ಲಿ ಕಳೆದ ವರ್ಷ ಅತೀ ಕಡಿಮೆ ಮಳೆಯಾಗಿತ್ತು. 2015ರಲ್ಲಿ ಶೇ.22ರಷ್ಟು ಹೆಚ್ಚಳ, 2016ರಲ್ಲಿ ಶೇ.-42, 2017ರಲ್ಲಿ ಶೇ.-13, 2018ರಲ್ಲಿ ಶೇ.82ರಷ್ಟು ಹೆಚ್ಚಳ, 2019ರಲ್ಲಿ ಶೇ.-74ರಷ್ಟು ಮಳೆ ಕಡಿಮೆಯಾಗಿತ್ತು.

ಬೇಗ ಮಳೆ ಸಾಧ್ಯತೆ
ಕರಾವಳಿ ಭಾಗದಲ್ಲಿ ಕೆಲವು ದಿನಗಳಿಂದ ವಾಡಿಕೆಗಿಂತ ಗರಿಷ್ಠ ಉಷ್ಣಾಂಶ ಹೆಚ್ಚಿದೆ. ಸದ್ಯದ ಮುನ್ಸೂಚನೆಯಂತೆ ಗರಿಷ್ಠ ಉಷ್ಣಾಂಶ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಇದರ ಪರಿಣಾಮ ಪೂರ್ವ ಮುಂಗಾರು ಮಳೆ ಮೇಲೆ ಬೀರಲಿದ್ದು, ಅವಧಿಗೂ ಮುನ್ನ ಪೂರ್ವ ಮುಂಗಾರು ಅಪ್ಪಳಿಸುವ ಸಾಧ್ಯತೆ ಇದೆ.
 - ಡಾ| ರಾಜೇಗೌಡ ಕೃಷಿ ವಿ.ವಿ. ಹವಾಮಾನ ವಿಜ್ಞಾನಿ

  ನವೀನ್‌ ಭಟ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next