ಕೊಪ್ಪಳ: ಕೊಪ್ಪಳ ನಗರ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಶುಕ್ರವಾರ ಆಲಿಕಲ್ಲು ಸಹಿತ ಮಳೆ ಸುರಿದು, ತೀವ್ರ ಗಾಳಿ ಬೀಸಿ ಅನಾಹುತ ತಂದಿಟ್ಟಿದೆ. ಗ್ರಾಮೀಣ ಪ್ರದೇಶದಲ್ಲಿ ಮನೆಗಳ ತಗಡು ಹಾರಿಹೋಗಿದ್ದರೆ, ಕೆಲವು ಚಪ್ಪರಗಳು ಕಿತ್ತು ಬಿದ್ದಿವೆ.
ಬಿರು ಬೇಸಿಗೆಯಲ್ಲಿ ಸೂರ್ಯನ ಪ್ರಖರತೆಗೆ ಕಾದ ಕೆಂಡದಂತಾಗಿದ್ದ ಭೂಮಿಗೆ ಶುಕ್ರವಾರ ಮಧ್ಯಾಹ್ನ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ದಿಢೀರನೇ ಗಾಳಿ ಬೀಸಿ ಆಲಿಕಲ್ಲು ಮಳೆ ಸುರಿದಿದೆ. ನಗರ ಭಾಗದಲ್ಲಿ ಭಾರಿ ಮಳೆಯಾಗಿ ಚರಂಡಿಗಳು ಭೋರ್ಗರೆದರೆ, ತಾಲೂಕಿನ ಹೂವಿನಹಾಳ ಸೇರಿ ಇತರೆ ಗ್ರಾಮೀಣ ಪ್ರದೇಶದಲ್ಲಿ ಆಲಿಕಲ್ಲು ಮಳೆ ಸುರಿದಿವೆ.
ಗೋಲಿ ಗುಂಡದ ಆಕಾರದ ಆಲಿಕಲ್ಲುಗಳು ಬಿದ್ದ ತಕ್ಷಣವೇ ಜನರು ಖುಷಿಯಿಂದಲೇ ಅವುಗಳನ್ನು ಸಂಗ್ರಹಿಸಿ ಒಬ್ಬರಿಗೊಬ್ಬರು ತೋರಿಸಿ ಆಲಿಕಲ್ಲು ಮಳೆ ಸುರಿಯುತ್ತಿದೆ ನೋಡಿ ಎಂದು ಮಾತನಾಡಿಕೊಳ್ಳುತ್ತಿದ್ದರು.
ಸಂಜೆ ವೇಳೆ ಅಧಿಕ ಪ್ರಮಾಣದ ಗಾಳಿಯು ಬೀಸಿದ ಪರಿಣಾಮ ರೈತರ ಜಮೀನು ಹಾಗೂ ರಸ್ತೆಗಳ ಪಕ್ಷದಲ್ಲಿನ ಗಿಡಗಳು ಧರೆಗುರುಳಿವೆ. ಅಧಿಕ ಗಾಳಿಯಿಂದಾಗಿ ಕೆಲವು ಪ್ರದೇಶದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ತಾಲೂಕಿನ ಮುದ್ದಾಬಳ್ಳಿ ಸೇರಿದಂತೆ ಕೆಲವು ಭಾಗದಲ್ಲಿ ವಿದ್ಯುತ್ ಕಡಿತವಾಗಿದೆ.
ಗಾಳಿಯ ರಭಸಕ್ಕೆ ಗ್ರಾಮೀಣ ಭಾಗದಲ್ಲಿ ಗುಡಿಸಲು ಕಿತ್ತು ಬಿದ್ದಿವೆ. ಇನ್ನು ಕೆಲವು ಮನೆಗಳ ತಗಡು ಹಾರಿ ಬಿದ್ದಿವೆ. ಇದರಿಂದ ರೈತರು ಚಿಂತೆ ಮಾಡುವಂತಾಗಿದೆ. ಇವೆಲ್ಲವೂ ಅಕಾಲಿಕ ಮಳೆಯಾಗಿದ್ದು ಮುಂಗಾರು ಪೂರ್ವ ಮಳೆಗಳಾಗಿವೆ. ಸೂರ್ಯನ ಬಿಸಿಲಿಗೆ ಕಾದು ಕೆಂಡದಂತಾಗಿದ್ದ ಭೂಮಿ ತಂಪಾಗಿದ್ದರೆ, ಇನ್ನು ಕೆಲವು ಪ್ರದೇಶದಲ್ಲಿ ವಿಪರೀತ ಸೆಕೆ ಶುರುವಾಗಿ ಜನರು ಕಷ್ಟ ಪಡುತ್ತಿದ್ದಾರೆ.
ಎಂದಿನಂತೆ ಜಾನುವಾರು, ಕುರಿಗಳನ್ನು ಮೇಯಿಸಲು ಹೊಲ, ಗದ್ದೆಗಳಿಗೆ ತೆರಳಿದ್ದ ಕುರಿಗಾಯಿಗಳು ಮಳೆಯ, ಗಾಳಿಯ ಆರ್ಭಟಕ್ಕೆ ಆಲಿಕಲ್ಲು ಮಳೆಯ ಹೊಡೆತಕ್ಕೆ ತತ್ತರಿಸಿದರು.