Advertisement

ಬೇಸಗೆ ಬಿಸಿಗೆ ಬಸವಳಿದ ಜನ: ತಂಪು ಪಾನೀಯಗಳಿಗೆ ಹೆಚ್ಚಿದ ಬೇಡಿಕೆ

12:04 AM Mar 29, 2019 | Sriram |

ಕುಂದಾಪುರ: ಕಡಲ ತಡಿಯಲ್ಲಿ ಬೇಸಗೆ ಝಳ ತುಸು ಹೆಚ್ಚೇ ಇದೆ. ದಿನಗಳೆದಂತೆ ನೆಲಕ್ಕೆ ಬರಿಗಾಲಿಡುವುದು ಅಪಾಯ ಎಂಬಂತೆ ನೆತ್ತಿ ಸುಡುವ ಬಿಸಿಲು ಚರ್ಮಕ್ಕೆ ಚುರುಕು ಮುಟ್ಟಿಸುತ್ತಿದೆ. ಬಿಸಿಲಿನ ಅಬ್ಬರಕ್ಕೆ ಮೈ ಮುಖವೆಲ್ಲ ಬೆವರು ತೊಟ್ಟಿಕ್ಕುತ್ತದೆ. ಆಗಾಗ ನೀರು ಕುಡಿಯಬೇಕಾಗುತ್ತದೆ. ಕಾರ್ಯಕಾರಣದಿಂದ ನಗರಕ್ಕೆ ಬಂದವರಿಗೆ ಪಾನೀಯದಂಗಡಿಗಳು ತಂಪೆರೆಯುತ್ತಿವೆ. ಮಾತ್ರವಲ್ಲ ಹಳ್ಳಿಹಳ್ಳಿಗಳಲ್ಲಿ, ಹೆದ್ದಾರಿ ಬದಿಗಳಲ್ಲಿ ಕಲ್ಲಂಗಡಿ ಹಾಗೂ ಕಬ್ಬಿನ ಜ್ಯೂಸ್‌ ಮಾರುವ ತಂಡವಿದೆ.

Advertisement

ಕಬ್ಬಿನಹಾಲು
ಉಡುಪಿ ಸಂತೆಕಟ್ಟೆ ಮೂಲದ ವ್ಯಕ್ತಿಯೊಬ್ಬರು ಕೋಟೇಶ್ವರ ಹಾಲಾಡಿ ರಸ್ತೆ, ಬಸ್ರೂರು ರಸ್ತೆಯ ಬದಿಯಲ್ಲಿ ಅಲ್ಲಲ್ಲಿ ಕಬ್ಬಿನ ಹಾಲಿನ ಘಟಕ ತೆರೆದಿದ್ದಾರೆ. ಇದರಲ್ಲಿ ಉತ್ತಪ್ರದೇಶ ಮೂಲದ ಕಾರ್ಮಿಕರಿದ್ದಾರೆ. ಇವರಿಗೆ ಕಬ್ಬಿನ ಸರಬರಾಜು, ಯಂತ್ರ, ಅದಕ್ಕೆ ಇಂಧನ ಎಲ್ಲವನ್ನೂ ಉದ್ಯಮಿಯೇ ಪೂರೈಸುತ್ತಿದ್ದು ವ್ಯಾಪಾರ ಮಾಡುವುದಷ್ಟೇ ಇವರ ಕೆಲಸ.

ಕಾರ್ಮಿಕರಿಗೆ ಮಾಸಿಕ
ವೇತನ ನೀಡಲಾಗುತ್ತದೆ. ಒಂದು ಲೋಟ ಕಬ್ಬಿನ ಹಾಲಿಗೆ 20 ರೂ. ದರ ವಿಧಿಸಲಾಗುತ್ತಿದೆ. ಹೆದ್ದಾರಿಯಲ್ಲಿ ಹೋಗುವ ವಾಹನದವರೇ ಇವರಿಗೆ ಗ್ರಾಹಕರು. ದಿನವೊಂದಕ್ಕೆ ಕನಿಷ್ಟವೆಂದರೂ ನೂರಾರು ಲೋಟ ಪಾನೀಯ ಮಾರಾಟ ವಾಗುತ್ತದೆ.

ಜ್ಯೂಸ್‌
ಕಲ್ಲಂಗಡಿ ಸೇರಿದಂತೆ ಮಜ್ಜಿಗೆ, ವಿವಿಧ ಹಣ್ಣುಗಳ ಜ್ಯೂಸ್‌ಗಳ ಬೇಡಿಕೆ ಹೆಚ್ಚಾಗಿದೆ. ಜ್ಯೂಸ್‌ ಅಂಗಡಿಗಳಲ್ಲಿ ಹೋಗಿ ಕುಡಿಯುವ ವರ್ಗವಿದ್ದರೆ ಹಣ್ಣು ಹಂಪಲುಗಳ ವ್ಯಾಪಾರ ಭರಾಟೆಯೂ ಹೆಚ್ಚಾಗಿದೆ. ಆದರೆ ಏರುತ್ತಿರುವ ಬೆಲೆ ನಿತ್ಯದ ವ್ಯಾಪಾರಕ್ಕೆ ಅಡ್ಡಗಾಲಾಗಿದ್ದು ಅಂಗಡಿ ಮಾಲಕರಿಗೆ ಲಾಭ ತರುವ ಸಮಯದಲ್ಲಿ ಬೆಲೆ ಏರಿಕೆ ಕಡಿವಾಣ ಹಾಕಿದಂತಾಗಿದೆ. ಜೀವಸತ್ವಗಳ ಆಗರ, ಪೌಷ್ಠಿಕಾಂಶ ಭರಿತ ಕಲ್ಲಂಗಡಿ ಹಣ್ಣು ಈ ಬಾರಿ ಎಲ್ಲೆಂದರಲ್ಲಿ ಎಗ್ಗಿಲ್ಲದೇ ಮಾರಾಟವಾಗುತ್ತಿದೆ. ಇದು ಶರೀರದ ಉಷ್ಣಾಂಶವನ್ನು ಕಡಿಮೆ ಮಾಡುವುದರ ಜತೆಗೆ ಆರೋಗ್ಯ ಸಂಬಂಧಿ ಸಮಸ್ಯೆಗೂ ಪರಿಹಾರ ಒದಗಿಸುತ್ತದೆ. ಕಲಿಯುಗದ ಕಲ್ಪವೃಕ್ಷ ಎಳನೀರಿಗೆ ಬೇಡಿಕೆ ಜತೆಗೆ ಧಾರಣೆಯೂ ಏರಿದೆ.

ನೆರಳಿಗೆ ಮೊರೆ
ಪರೀಕ್ಷಾ ಸಮಯ, ವಿದ್ಯಾರ್ಥಿಗಳು ಸೇರಿದಂತೆ ಬಿಸಿಲಿಗೆ ಬಂದವರು ನಿರ್ಜಲೀಕರಣದಿಂದ ಬಳಲುತ್ತಿದ್ದು ಎಲ್ಲಿ ನೋಡಿದರೂ ಅಂಗಡಿಯ ಬದಿ, ಮರದ ಬುಡ ಎಂದು ನೆರಳಿಗೆ ಮೊರೆ ಹೋಗುತ್ತಿದ್ದಾರೆ. ಅಂಗಡಿ, ಬೇಕರಿಗಳಲ್ಲಿ ನೀರಿನ ಬಾಟಲಿ ಹಾಗೂ ಜ್ಯೂಸ್‌, ಕೃತಕ ಜ್ಯೂಸಿನ ಬಾಟಲಿಗೆ ಬೇಡಿಕೆ ಹೆಚ್ಚಾಗಿದೆ.

Advertisement

ಎಚ್ಚರ ಅಗತ್ಯ
ಬಿಸಿಲಿನ ತಾಪಕ್ಕಾಗಿ ಐಸ್‌ಕ್ಯಾಂಡಿ ತಿಂದ ನೂರಾರು ಮಂದಿ ಆಸ್ಪತ್ರೆಗೆ ದಾಖಲಾದ ಘಟನೆ ಹಸಿರಾಗಿದ್ದು ಆಹಾರ ಪದಾರ್ಥ, ಮುಕ್ತ ವಾತಾವರಣದಲ್ಲಿ ಮಾರಾಟ ಮಾಡುವ ಪಾನೀಯ, ಆಹಾರ ಪದಾರ್ಥ ಸೇವನೆಗೆ ಮುನ್ನ ಎಚ್ಚರ ಅಗತ್ಯ. ಪಾನೀಯ
ದಂಗಡಿಗಳಲ್ಲೂ ಬಳಸುವ ನೀರು ಹಾಗೂ ಪಾತ್ರೆಯ ಸ್ವತ್ಛತೆಗೆ ಗಮನ ನೀಡಬೇಕಿದೆ.

ಏರುತ್ತಿದೆ ಉಷ್ಣತೆ
ಗುರುವಾರ ಕುಂದಾಪುರದಲ್ಲಿ 36 ಡಿಗ್ರಿ ಉಷ್ಣತೆ ಇತ್ತು. ಫೆ.25ರಿಂದ ಮಾ.13ರವರೆಗೆ 33 ಡಿಗ್ರಿ ಇದ್ದ ಉಷ್ಣಾಂಶ ಮಾ.14ರಂದು 36 ಆಗಿ, ಮತ್ತೆ 33ರಲ್ಲಿತ್ತು. ಬುಧವಾರ, ಗುರುವಾರ ಹೆಚ್ಚಿದೆ.

ಹೀಗೆ ಮಾಡಿ
ನಿರ್ಜಲೀಕರಣ ಉಂಟಾಗದಂತೆ ಆಗಾಗ ನೀರು, ಹಣ್ಣಿನ ರಸ ಕುಡಿಯಿರಿ. ಸುಡು ಬಿಸಿಲಿಗೆ ಸಾಧ್ಯವಾದಷ್ಟು ಹೊರಗೆ ಹೋಗಬೇಡಿ. ಹಾಗೊಮ್ಮೆ ಹೋಗಬೇಕಾದರೆ ಮೈತುಂಬ ಬಟ್ಟೆ ಧರಿಸಿ. ಇದು ದೇಹದ ತೇವಾಂಶ ಕಾಪಾಡಲು ಸಹಕಾರಿ. ಹಣ್ಣು ಹಂಪಲು ಸೇವಿಸಿ. ಚರ್ಮ, ಮುಖದ ಮೇಲೆ ಬಿಸಿಲು ಬೀಳದಂತೆ ಸನ್‌ ಸ್ಕ್ರೀನ್‌ ಕ್ರೀಮ್‌ ಬಳಸಿ. ಕೊಡೆ, ಕ್ಯಾಪ್‌ ಮೊದಲಾದ ಬಿಸಿಲು ರಕ್ಷಕಗಳನ್ನು ಬಳಸಿ. ಕೋಲ್ಡ್‌ ಡ್ರಿಂಕ್‌ ಕುಡಿಯಲು ತಂಪು ಆದರೆ ಆರೋಗ್ಯಕ್ಕೆ ಹಾನಿ. ಹಾಗಾಗಿ ಕೃತಕ, ರಾಸಾಯನಿಕ ಜ್ಯೂಸಿನ ವ್ಯಾಮೋಹ ಕಡಿಮೆ ಮಾಡಿ.

ದ್ರವಾಹಾರಕ್ಕೆ ಬೇಡಿಕೆ
ಕಳೆದ ಕೆಲವು ದಿನಗಳಿಂದ ಎಳನೀರು ಸೇರಿದಂತೆ ದ್ರವಾಹಾರಕ್ಕೆ ಬೇಡಿಕೆ ಹೆಚ್ಚಾಗಿದೆ. ವಯಸ್ಸಿನ ಅಂತರ ಇಲ್ಲದೇ ಎಲ್ಲ ವಯೋಮಾನದವರೂ ದಾಹ ತಣಿಸಿಕೊಳ್ಳಲು ಕೃತಕ ಜ್ಯೂಸಾದರೂ ಪರವಾಗಿಲ್ಲ ಎಂದು ಕೊಂಡೊಯ್ಯುತ್ತಾರೆ.
– ರಾಮ ಸೇರೆಗಾರ್‌, ಜ್ಯೂಸ್‌ ಅಂಗಡಿ ಮಾಲಕ

Advertisement

Udayavani is now on Telegram. Click here to join our channel and stay updated with the latest news.

Next